ಬೆಂಗಳೂರು (ಜೂ.12): ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಂಭೀರ ಪ್ರಕರಣದಲ್ಲಿ, ಗಂಡನ ಹತ್ಯೆ ಪ್ರಕರಣವನ್ನು ಪತ್ತೆ ಹಚ್ಚಿದ್ದು ಅವನ ಪತ್ನಿಯೇ. ದೀಪಕ್ ಎಂಬ ನಪಾಳ ಮೂಲದ ಯುವಕನ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮೊದಲು ನಿರ್ಲಕ್ಷ್ಯ ತೋರಿದ್ದರೂ, ಪತ್ನಿ ಸುಷ್ಮಾ ನಿರಂತರ ಪರಿಶ್ರಮ ಮತ್ತು ಹೋರಾಟದಿಂದ ಕೊನೆಗೂ ಕೊಲೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ.ನಂತರ ಪೊಲೀಸರೇ ಆಕೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನಲೆ:
ಮೇ 1ರಂದು ವರ್ತೂರಿನಲ್ಲಿ ಮೋರಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತ ದೇಹದ ಗುರುತನ್ನು ಪತ್ನಿ ಸುಷ್ಮಾ ದೃಢಪಡಿಸಿದ್ದರು. ಎದೆ ಭಾಗದಲ್ಲಿ ಗಾಯವಿದ್ದ ಕಾರಣದಿಂದ ಇದು ಸಹಜ ಸಾವಲ್ಲ ಕೊಲೆ ಎಂದು ಆತನ ಪತ್ನಿ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಪೊಲೀಸರು ಯುಡಿಆರ್ (ಅಸಹಜ ಮರಣ ವರದಿ) ಎಂದು ಪ್ರಕರಣ ದಾಖಲಿಸಿ, ತನಿಖೆಗೆ ಕೈಹಾಕಲು ಮುಂದಾಗಿರಲಿಲ್ಲ.
ಆದರೆ, ಆತನ ಪತ್ನಿ ಸುಷ್ಮಾ ಮಾತ್ರ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಗಂಡನ ಸಾವಿನ ಬಗ್ಗೆ ಕೊಲೆಯ ಶಂಕೆಯನ್ನು ನಿಲ್ಲಿಸದೆ, ಯಾರು ಮಾಡಿರಬಹುದು ಎಂಬುದನ್ನು ಪತ್ತೆ ಮಾಡಲು ತಾನೇ ಮುಂದಾಗಿದ್ದಾಳೆ. ಈ ವೇಳೆ, ಜೂನ್ 5ರಂದು ಸಂಬಂಧಿ ಕರುಣ್ ಸಿಂಗ್ ಅವರಿಗೆ ಆರೋಪಿ ಇಂದ್ರ ಬಿಸ್ಪಾ ತಾನೇ ಕೊಲೆ ಮಾಡಿದ್ದೇನೆ ಎಂದು ದೂರವಾಣಿ ಮೂಲಕ ಒಪ್ಪಿಕೊಂಡಿದ್ದಾನೆ. ಈ ಮಾಹಿತಿಯನ್ನು ಕರುಣ್ ಸಿಂಗ್ ಕರೆ ಮಾಡಿ ಸುಷ್ಮಾಳಿಗೆ ತಿಳಿಸಿದ ನಂತರ, ಸುಷ್ಮಾ ವರ್ತೂರು ಪೊಲೀಸರಿಗೆ ದೂರನ್ನು ಸಲ್ಲಿಸಿದ್ದಾರೆ.
ಹೆಂಡತಿಯ ಧೈರ್ಯಕ್ಕೆ ತಲೆಬಾಗಿದ ಪೊಲೀಸರು:
ಪತ್ನಿಯ ಪರಿಶ್ರಮದ ಫಲವಾಗಿ, ಈಗಾಗಲೇ ಇಂದ್ರ ಬಿಸ್ಪಾ ಎಂಬಾತನನ್ನು ಪೊಲೀಸರು ಬಂಧಿಸಿ, ಕೊಲೆ ಪ್ರಕರಣದ ತನಿಖೆಗೆ ಚುರುಕು ನೀಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಏಪ್ರಿಲ್ 11ರಂದು ದೀಪಕ್ ಮತ್ತು ಪತ್ನಿ ಸುಷ್ಮಾ ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳದ ಮಧ್ಯೆ ಬಂದು ಇಬ್ಬರನ್ನು ತಡೆಯಲು ಪ್ರಯತ್ನಿಸಿದ ಸಂಬಂಧಿ ಇಂದ್ರ ಬಿಸ್ಪಾಗೆ, ದೀಪಕ್ ಹೊಡೆದಿದ್ದನು. ಈ ಕೋಪದಲ್ಲಿ ಆತನು ದೀಪಕ್ನನ್ನು ಕೊಂದು ಮೋರಿಯಲ್ಲಿ ಎಸೆದಿದ್ದನು ಎಂಬ ಮಾಹಿತಿ ಲಭಿಸಿದೆ.
ನಿರ್ಲಕ್ಷ್ಯ ತನಿಖೆಗೆ ತೀಕ್ಷ್ಣ ಆಕ್ರೋಶ:
ಈ ಪ್ರಕರಣದಲ್ಲಿ ಪೊಲೀಸರು ಮೊದಲು ಯುಡಿಆರ್ ದಾಖಲು ಮಾಡಿ ತನಿಖೆ ಕೈಗೊಳ್ಳದೆ, ಪತ್ನಿಯ ಹೇಳಿಕೆಯನ್ನು ತಳ್ಳಿಹಾಕಿದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ನೊಂದು ಭಾರಿ ಆಕ್ರೋಶ ವ್ಯಕ್ತವಾಗಿದೆ. ಒಬ್ಬ ಮಹಿಳೆಯ ಧೈರ್ಯದಿಂದ,ಕೊಲೆಯ ಸತ್ಯಾಂಶವನ್ನು ಬಹಿರಂಗ ಮಾಡುವಲ್ಲಿ ಯಶಸ್ವಿ ಆಗಿದ್ದಾಳೆ. ಇದೀಗ ಆರೋಪಿ ಬಂಧನ ಆಗಿರುವುದು ಪೊಲೀಸ್ ನಿರ್ಲಕ್ಷ್ಯದ ವಿರುದ್ಧ ಒಬ್ಬ ಪತ್ನಿಯ ಗೆಲುವು ಎಂದು ಹೇಳಲಾಗುತ್ತಿದೆ.

[…] […]