ಕಲಬುರಗಿ, ಮೇ 3: ದೇಶದ ಐಕ್ಯತೆಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಏನೇ ನಿರ್ಧಾರಗಳನ್ನು ಅಥವಾ ಕ್ರಮಗಳನ್ನು ಕೈಗೊಂಡರೂ ಅದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದರು.
ಪಹಲ್ಗಾಮ್ ಉಗ್ರ ದಾಳಿ ವಿಚಾರವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶಕ್ಕಾಗಿ ಏನೇ ನಿರ್ಧಾರ ಕೈಗೊಂಡರು ಬೆಂಬಲಿಸುತ್ತೇವೆ. ಆದರೆ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದರು.
ಕೇವಲ ಭಾಷಣ ಮಾಡಿಕೊಂಡು ಕುಳಿತುಕೊಂಡರೆ ಸಾಲದು. ನಮ್ಮ ದೇಶದವರನ್ನು ಕೆಣಕಿದವರಿಗೆ ತಕ್ಕ ಉತ್ತರ ಕೊಡಬೇಕು. ಈ ವಿಚಾರದಲ್ಲಿ ರಾಜಕೀಯ ಆಗಬಾರದು ಎಂದು ಖರ್ಗೆ ಹೇಳಿದರು.
ದುರುದ್ದೇಶದಿಂದ ನಡೆದುಕೊಂಡರೆ ಯಾರೂ ಸಹಿಸಲಾರರು: ಖರ್ಗೆ
ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ನಮ್ಮನ್ನು ಹೀಯಾಳಿಸಿದ್ದರು. ಈಗ ಅವರೇ, ಜಾತಿ ಜನಗಣತಿ ಮಾಡಲು ಹೊರಟಿದ್ದಾರೆ. ಬಿಹಾರ ಚುನಾವಣೆ ಗಿಮಿಕ್ ಇರಬಹುದು. ಆ ಕುರಿತು ಮಾತನಾಡುವುದಿಲ್ಲ. ದುರುದ್ದೇಶದಿಂದ ನಡೆದುಕೊಂಡರೆ ಯಾರೂ ಸಹಿಸುವುದಿಲ್ಲ ಎಂದು ಖರ್ಗೆ ಹೇಳಿದರು.
