ನನ್ನನ್ನು ಗೆಳೆಯರು ತಮ್ಮ ಗೆಳೆಯರಿಗೆ ಪರಿಚಯ ಮಾಡಿಕೊಡುತ್ತಿದ್ದಾಗ ಅವರ ಸ್ನೇಹಿತರು “ಸರ್, ನಿಮ್ಮಲ್ಲಿಗೆ ಬಹುತೇಕ ಹೆಂಗಸರು ಸಲಹೆಗೆ ಬರುತ್ತಾರಲ್ಲವೇ?” ನಾನು ಹೌದೆಂದು ಗೌಣಾಡಿಸುತ್ತಾ “ಖಾಸಗಿ ವೈದ್ಯ ವ್ರತ್ತಿಯಲ್ಲಿ ಗಂಡಸರು ಮತ್ತು ಹೆಂಗಸರು ಸರಿ ಸಮಾನವಾಗಿ ಚಿಕಿತ್ಸೆಗೆ ಎಂದು ಹೋದಾಗ ಶೇಕಡಾವಾರು ಅರವತ್ತು ಹೆಂಗಸರಲ್ಲಿ ಒಂದಲ್ಲಾ ಒಂದು ವಿಧವಾದ ಮಾನಸಿಕ ಒತ್ತಡದ ಚಿಹ್ನೆ ಮತ್ತು ಲಕ್ಷಣಗಳ ಶಾರೀರಿಕ ಸಮಸ್ಯೆಗಳು ಇರುತ್ತವೆ. ಅವುಗಳನ್ನು ವೈದ್ಯರು ದೈಹಿಕ ಕಾಯಿಲೆ ಎಂದು ಚಿಕಿತ್ಸೆ ನೀಡುತ್ತಾರೆ. ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದರೂ ಮೂಲ ಸಮಸ್ಯೆಗೆ ಚಿಕಿತ್ಸೆ ನೀಡುವುದಿಲ್ಲ. ಆದುದರಿಂದ ಸಮಸ್ಯೆ ಮುಂದುವರೆಯುತ್ತದೆ. ಇವರಲ್ಲಿ ಶೇಕಡ ಮೂವತ್ತು ಭಾಗ ಹೆಂಗಸರು ಹಲವಾರು ದೇಸಿ ಔಷಧ ತಜ್ಞರು, ಮಂತ್ರವಾದಿಗಳ ಹತ್ತಿರ ಹಾಗು ಶಕ್ತಿ ದೇವರಿಗೆ ಮೊರೆ ಹೋಗಿ
ವಾಸಿ ಆಗದೇ ಇರುವುದರಿಂದ ಮಾನಸಿಕ ಸಮಸ್ಯೆ ಇರಬಹುದೆಂಬ ಕಾರಣಕ್ಕೆ ನಮ್ಮ ಹತ್ತಿರ ಚಿಕಿತ್ಸೆಗೆ ಬರುತ್ತಾರೆ. ಈ ಕಾರಣದಿಂದ ನಮಗೆ ಹತ್ತು ಮಂದಿ ಚಿಕಿತ್ಸೆಗೆ ಬಂದರೆ ಇವರಲ್ಲಿ ಅರರಿಂದ ಏಳು ಮಂದಿ ಹೆಂಗಸರು ಇರುತ್ತಾರೆ”.
ವಿಕಾಸಿಗರ ಪ್ರಕಾರ ಆದಿಮಾನವರು ಸುಮಾರು ಆರು ಅಥವ ಏಳು ಲಕ್ಷ ವರ್ಷಗಳ ಹಿಂದೆ ವಾಸಿಸುತ್ತಿದ್ದರು. ಕಾಲಕ್ರಮೇಣ ಹಲವು ವಿಕಸನೆಯಿಂದ ಮೂರು ಲಕ್ಷ ವರ್ಷಗಳ ಹಿಂದೆ ನಾವು ಬಂದೆವು ಎಂಬುದು ಒಂದು ಸಿದ್ದಾಂತ. ಸಮಸ್ತ ಜೀವಲೋಕದಲ್ಲಿ ನಮಗೆಂದೇ ಕುಲ ಇದೆ. ಅದು “ಮಾನವ” ಕುಲ ಎಂಬುದಾಗಿ ಹೇಳಲಾಗಿದೆ. ಈತ ದಡ್ಡನೆ? ಅಲ್ಲ, ಮಹಾನ್ ಬುದ್ದಿವಂತ. ಹಾಗಾಗಿ ಇಂಗ್ಲಿಷಲ್ಲಿ ಇಂದಿನ ಮಾನವನನ್ನು “ಹೋಮೊ ಸೆಪಿಯನ್” ಎಂದು ಕರೆಯಲ್ಪಡುವುದು. ಈ ಪದಗಳು ಲ್ಯಾಟಿನ್ ಭಾಷೆಯಿಂದ ಬಂದಿವೆ. ಹಿಂದಿನ ಆದಿಮಾನವರಿಗೆ ಹೋಲಿಸಿದಾಗ ಇಂದಿನ ಮಾನವ “ವಿವೇಕವುಳ್ಳ ಮಾನವ” ಅಥವ “ವೈಸ್ ಮ್ಯಾನ್” ಎಂದು ಕರೆಸಿಕೊಂಡಿದ್ದಾನೆ. ಹೌದಾ, ಈತ ಬುದ್ದಿವಂತನೇ? ಬ್ರಿಟಿಷ್ ದೇಶದವನಾದ ನಿಸರ್ಗ ಮತ್ತು ವಿಕಾಸ ವಾದಿ “ಚಾರ್ಲ್ಸ ಡಾರ್ವಿನ್ (1809 – 1882)” ಸಹ ಒಮ್ಮೆ ಯೋಚಿಸಿ “ಬುದ್ದಿವಂತರು ಅನ್ನಿಸಿಕೊಳ್ಳುವುದಕ್ಕೆ ನಾವು ಅರ್ಹರೆ” ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದರು.
ಈ ಲೇಖನದಲ್ಲಿ ಹೆಂಗಸರಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಅದರ ವೈದ್ಯಕೀಯ ಮತ್ತು ಮಾನವ ವಿಕಾಸ ಸಂಬಂಧಿತ ಕಾರಣಗಳು, ತಂತ್ರಶಾಸ್ತ್ರದ ನಿಟ್ಟಿನಲ್ಲಿ ಮಸಾಜ್ ತಂತ್ರಗಳ ಪ್ರಾಚೀನ ಜ್ಞಾನ, ಮತ್ತು ಮುಕ್ತಿಯ ಕ್ರಿಯಾ ಯೋಗ ಮಾರ್ಗಗಳನ್ನು ತೀವ್ರವಾಗಿ ಅನಾವರಣಗೊಳಿಸಲಾಗಿದೆ.

ಚಾರ್ಲ್ಸ ಡಾರ್ವಿನ್ ತಮ್ಮ ಪುಸ್ತಕದಲ್ಲಿ “ಬ್ರೆಝಿಲ್ ದಟ್ಟ ಅರಣ್ಯವನ್ನು ದಾಟಿದರೆ ಬಹುಶಃ ಸಂಸ್ಕಾರ ಇಲ್ಲದ ಬುಡಕಟ್ಟಿನ ಜನಾಂಗದವರಿಂದ ದೇವರನ್ನು ವಶ ಪಡಿಸಿಕೊಳ್ಳಲು ಮುಗ್ಧ ಜನರ ಮಾರಣಹೋಮ ಮಾಡಿ ಬೆಟ್ಟದಷ್ಟು ತಲೆ ಬುರುಡೆಗಳನ್ನು ರಾಶಿ ಹಾಕಿ ರಕ್ತದ ಕೋಡಿಯನ್ನೆ ಹರಿಸಿದ್ದಾರೆ” ಎಂಬ ವೃತ್ತಾಂತವನ್ನು ನಮೂದಿಸಿದ್ದಾರೆ. ಈ ವೃತ್ತಾಂತಕ್ಕೆ ಪೂರಕ ಎಂಬಂತೆ 2006 ನೆ ಇಸವಿಯಲ್ಲಿ ಹಾಲಿವುಡ್ನ ಖ್ಯಾತ ಚಿತ್ರನಟ ಮತ್ತು ನಿರ್ದೇಶಕ “ಮೆಲ್ ಗಿಬ್ಸನ್” ರಿಂದ ತಯಾರಾದ “ಅಪಕೆಲಿಪ್ಟೊ” ಚಿತ್ರದಲ್ಲಿ ಚಾರ್ಲ್ಸ ಡಾರ್ವಿನ್ ವೃತ್ತಾಂತದ ಘಟನೆಗಳನ್ನು ಅಥವ ಚಿತ್ರಣವನ್ನು ನೋಡಬಹುದು. ಓದಗರೆ ಈಗ ಹೇಳಿ ನಾವು ವಿವೇಕವುಳ್ಳವರೇ? ಅವರೇನೋ ಕಾಡು ಜನರು ಆದರೆ ನಮ್ಮಲ್ಲಿಯೇ ಆದ ಧರ್ಮ ಯುದ್ದಗಳು, ಮಹಾಯುದ್ಧಗಳು, ವಿಶ್ವ ಯುದ್ಧಗಳು, ದೇಶಗಳ ನಡುವಿನ ಯುದ್ಧ, ರಾಜಕೀಯ ಪ್ರೇರಿತ ಮಾರಣಹೋಮ, ವಿಯೆಟ್ನಾಂ ಯುದ್ಧ, ಕಾಂಪುಚಿಯ ಪಾಟ್ ಬ್ಲಾಟ್ ನರಮೇಧ, ಇಸ್ರೇಲ್ ಗಾಜಾ, ರಷ್ಯಾ ಉಕ್ರೇನ್ ಯುದ್ಧ, ಭಯೋತ್ಪಾದನೆ… ಇವೆಲ್ಲವನ್ನು ನಾವು ನೆನದಾಗ ನಮಗೆ ತಿಳಿಯುತ್ತೆ ನಾವು ಎತ್ತ ಸಾಗುತ್ತಿದ್ದೇವೆ ಎಂದು.
ಸಾವಿರಾರು ವರ್ಷಗಳ ಹಿಂದೆ ಭಯವೇ ಪ್ರಧಾನವಾದ ಆ ಕಾಲಘಟ್ಟದಲ್ಲಿ ಗಂಡಸರು ಮೇವು ಮತ್ತು ಬೇಟೆಗೆಂದು ಹೋದಾಗ ಹೆಂಗಸರು ಅಹಾರ ಬೇಯುಸುವುದರಲ್ಲಿ ಮತ್ತು ಮಕ್ಕಳ ಪೋಷನೆಯಲ್ಲಿ ನಿರತರಾಗುತ್ತಿದ್ದರು. ಆದರೆ ಇವರಲ್ಲಿ ಅತಿ ಹೆಚ್ಚು ಕಾಡುತ್ತಿದ್ದ ಮಾನಸಿಕ ಒತ್ತಡ “ಭಯ”. ಆದುದರಿಂದ ದಟ್ಟ ಬಯಲು ಪ್ರದೇಶಗಳಲ್ಲಿ ಶತ್ರುಗಳ ಅಥವ ಪರಭಕ್ಷಕರಿಂದ ರಕ್ಷಣೆ ಪಡೆಯಲು ತಮ್ಮ ತಮ್ಮ ದೈಹಿಕ ಸಾಮಿಪ್ಯವನ್ನು ಬಯಸುತ್ತಿದ್ದರು. ಈ ಕಾರಣದಿಂದ ಅವರಿಗೆ ಭಯ ನಿವಾರಣೆ ಮತ್ತು ಮನಸ್ಸಿನ ನೆಮ್ಮದಿ ಸಿಗುತಿತ್ತು. ಈಗ ಈ ತರಹದ ಅಂದಿನ ನಡುವಳಿಕೆ ಇಂದು ವಿಜ್ಞಾನ ಆಗಿದೆ. ಉದಾಹರಣೆಗೆ ಅಪ್ಪುಗೆ, ರೇಖಿ ಚಿಕಿತ್ಸೆ, ಅಂಗ ಮರ್ಧನ, ಮಾಲೀಷ್ ಹೀಗೆ ಹಲವಾರು.

ನಮ್ಮ ಶರೀರದಲ್ಲಿ ಎರೆಡು ತರಹದ ಬಾಹ್ಯ ನರಗಳ ವ್ಯೂಹವೇ ಇದೆ. ಒಂದು ‘ಕಿರಿಯ’ ಮತ್ತು ‘ದೊಡ್ಡ’ ನರಗಳ ಅಂತ್ಯಗಳನ್ನು ಕಾಣಬಹುದು. ನರಗಳ ಶರೀರ ಶಾಸ್ತ್ರದಲ್ಲಿ ಕಿರಿಯ ನರಗಳು ಜನೇಂದ್ರಿಗಳಲ್ಲಿ ಅತಿ ಹೆಚ್ಚು ಅಂತ್ಯಗೊಂಡಿವೆ. ಇವುಗಳನ್ನು ಮರ್ಧಿಸಿದಾಗ “ಡೋಪಮಿನ್ ಮತ್ತು ಸೆರೊಟಿನಿನ್” ನರ ರಸಾಯನಿಕಗಳು ಉತ್ಪತ್ತಿಯಾಗುವುದು. ಇವುಗಳ ಕೆಲಸ ಸಂತೋಷ ಮತ್ತು ಸಂತಾನೋತ್ಪತ್ತಿ. ಅದೇ ಅಸಂಖ್ಯಾತ ದೂಡ್ಡ ನರಗಳ ಅಂತ್ಯಗಳು ಈಡೀ ಶರೀರದ ತುಂಬಾ ಅಂತ್ಯಗೊಂಡಿವೆ. ಇವುಗಳನ್ನು ಮರ್ಧನ ಮಾಡಿದಾಗ “ಆಕ್ಸಿಟೋಸಿನ್” ಮತ್ತು “ಎಂಡಾರ್ಫಿನ್” ಹೊರಸೂಸುತ್ತದೆ. ಇವುಗಳ ಕೆಲಸ ನೆಮ್ಮದಿ ಮತ್ತು ನೋವು ನಿವಾರಣೆ. ಈ ಅನುಕ್ರಮವನ್ನು “ನೋವು ನಿಯಂತ್ರಣ ನಿವಾರಣೆ ಸಿದ್ದಾಂತ ” ಎಂದು ಕರೆಯಲಾಗುತ್ತೆ.
ಬೌದ್ಧ ಧರ್ಮ ಗ್ರಂಥಗಳಲ್ಲಿ ವಿವಿಧ “ಮಸ್ಸಾಜ್ ಅಥವ ಅಂಗಮರ್ಧನ” ಪರಿಚ್ಛೇದಗಳನ್ನು ಮಂಡಿಸಲಾಗಿದೆ. ವಾತ್ಸಾಯಾನ ಗ್ರಂಥಗಳಲ್ಲೂ ಸಹ ಈ ಉತ್ತೇಜನಾ ಕ್ರಿಯೆಗಳನ್ನು ಉಲ್ಲೇಖಿಸಲಾಗಿದೆ. “ಸರ್ ಜಾನ್ ವುಡ್ರಫ್ (1865 – 1936)” ತಂತ್ರವನ್ನು ಇಂಗ್ಲಿಷ್ಗೆ ಅನುವಾದಿಸಿ ಪಾಶ್ಚಿಮಾತ್ಯ ದೇಶಗಳಿಗೆ ಪರಿಚಯಿಸಿದರು. ಕೆಲ ಪಾಶ್ಚಿಮಾತ್ಯರು ಈ ಗ್ರಂಥಗಳನ್ನು ಅನುಸರಿಸಿ ಕಾಮಕೇಳಿಯನ್ನು ಆ ದೇಶಗಳ ಪ್ರಜೆಗಳಿಗೆ ಹೇಳಿಕೊಟ್ಟು ಅಪಾಯಕಾರಿ ಧರ್ಮಪಂಥಗಳನ್ನು ಸೃಷ್ಟಿಸಿ ಮುಗ್ಧರನ್ನು ವಂಚಿಸಿದ್ದಾರೆ ಮತ್ತು ವಂಚಿಸುತ್ತಿದ್ದಾರೆ. ಇವರಲ್ಲಿ ವಂಚಿತರಾಗುತ್ತಿರುವುದು ಬಹುಪಾಲು ಮಹಿಳೆಯರೆ.

ಅಂದಿನಿಂದಿಲೂ ಇಂದಿನವರಿಗು ಹೆಣ್ಣು ಅಬಲೆ. ಈಗಷ್ಟೇ ಆಕೆ ಸಬಲೆ. ಮೊದಲನಿಂದಲು ಪುರುಷ ಪ್ರಧಾನವಾದ ಪ್ರಪಂಚದಲ್ಲಿ ತನ್ನ ಪ್ರಾಬಲ್ಯವನ್ನು ಹೆಣ್ಣಿನ ಮೇಲೆ ಮೆರೆದಿದ್ದಾನೆ. ಇದರಿಂದ ಹೆಣ್ಣು ಅನೇಕ ಮಾನಸಿಕ ಒತ್ತಡಗಳಿಂದ ಅಥವ ಸಮಸ್ಯೆಗಳಿಂದ ಬಳಲುತ್ತಲೇ ಬಂದಿರುವಳು. ಈ ಕಾರಣದಿಂದ ಮಹಿಳೆಯರಲ್ಲಿ ಮನೋ ವ್ಯಾಧಿಗಳು ಅಧಿಕವಾಗಿ ಕಾಣಬರುವುದು.
ವಿಜ್ಞಾನ ಭೈರವ ತಂತ್ರ ಗ್ರಂಥದಲ್ಲಿ ಪುರುಷ ಮತ್ತು ಸ್ತ್ರೀ ಸಮನಾಂತರವಾಗಿ ವಿವರಿಸಲಾಗಿದೆ. ಇಲ್ಲಿಯ ವಾದ, ಜೀವ ಸತ್ವ ಒಂದೇ, ಸತ್ಯ ನಿರಂತರ, ಮುಕ್ತ ಎಂಬುದು ಪರಭಾವನೆ. ಇಂತಹ ಪಂಗಡಗಳಲ್ಲಿ ಸತ್ಯವನ್ನು ಬೆತ್ತಲೆ ಎಂಬುದಾಗಿ ನಿರೂಪಿಸಲಾಗಿದೆ. ಈ ತಂತ್ರವನ್ನು ಅನುಸರಿಸುತ್ತಿದ್ದವರಲ್ಲಿ “ಆಚಾರ್ಯ ರಜನೀಶ್” ಒಬ್ಬರು. ಇವರ ಪಂಥ “ಓಶೋ” ಇಂದಿಗೂ ಅಸ್ತಿತ್ವದಲ್ಲಿ ಇದೆ. ಈ ಪಂಥದ ಯುಕ್ತಿ “ಮುಕ್ತಾ ಮುಕ್ತಾ”. ಸರಳವಾಗಿ ಹೇಳಬೇಕೆಂದರೆ ಪುರುಷ ಮತ್ತು ಸ್ತ್ರೀಯನ್ನು ಅಪವಿತ್ರಗೊಳಿಸುವುದು ಕೃತಕ ಬಣ್ಣ. ಪವಿತ್ರವಾದ ಬಣ್ಣ ನೈಸರ್ಗಿಕ ಬಣ್ಣ. ಈ ಬಣ್ಣವನ್ನು ಅನುಭೋಗಿಸಿದರೆ ಮುಕ್ತಿ ಪ್ರಾಪ್ತಿ ಮತ್ತು ಮುಕ್ತವಾದ ಅನುಭೂತಿ ವರಿಸುತ್ತಾರೆ ಎಂಬುವುದು ಇವರ ನಂಬಿಕೆಗಳು. ಆದರೆ ಯಾರು ತನ್ನ ಬಾಂಧವ್ಯ ಅಥವ ಅಟಾಚ್ಮೆಂಟ್ಸ್ ಇಂದ ವಿಮುಕ್ತಿ ಹೊಂದುತ್ತಾನೋ ಅವನು ಮುಕ್ತಾನಂದ.
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ “ಮುಕ್ತಿ” ನಮ್ಮ ಮೆದುಳಿನ ಒಂದು ಉಪಕರಣವಾಗಿ ಇರಬೇಕು. ಭಗವಾನ್ ಬುದ್ಧರು ತಿಳಿಸಿದ ಮೂರು ಸಲಕರಣೆಗಳು “ಗ್ರಹಿಸು, ಜೀರ್ಣಿಸು ಮತ್ತು ನಿರ್ಧರಿಸು”. ಇವುಗಳನ್ನು ವೃದ್ದಿಸಿದರೆ ತಂತಾನೆ ಮುಕ್ತಾನಂದನಾಗುತ್ತಾನೆ. “ಮುಕ್ತಿ”ಯನ್ನು ವೃದ್ದಿಸುವ ಸಾಧನೆಗಳು ಮೂರು, “ಅಹಂಕಾರವನ್ನು ಬಿಡುವುದು, ಸ್ವಯಂ ಜ್ಞಾನವನ್ನು ಸಂಪಾದಿಸುವುದು, ಶ್ರದ್ಧೆಯಿಂದ ಕಾರ್ಯವನ್ನು ನಿರ್ವಹಿಸುವುದು”. ಈ ಸಾಧನಾ ಗುಚ್ಚವೇ “ಕ್ರಿಯಾ ಯೋಗ”.
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] ಇದನ್ನು ಓದಿ: “ಮಹಿಳೆ – ಚಾರ್ಲ್ಸ ಡಾರ್ವಿನ್ – ಓಶೋ – ಮುಕ್… […]
[…] ಇದನ್ನು ಓದು: “ಮಹಿಳೆ – ಚಾರ್ಲ್ಸ ಡಾರ್ವಿನ್ – ಓಶೋ – ಮುಕ್… […]