
ಟಿ.ನರಸೀಪುರ : ರಾಜ್ಯಾಂದ್ಯಂತ ಬಾಣಂತಿಯರ ಸಾವು ಹೆಚ್ಚು ಸುದ್ದಿಯಲ್ಲಿರುವುವ ಬೇನ್ನಲ್ಲೇ, 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರಿಲ್ಲದೇ, ಉಪಯೋಗಕ್ಕೂ ಬರದೇ, ಭೂತದ ಬಂಗಲೆಯಾಗಿ ಪರಿವರ್ತನೆಗೊಂಡಿರುವಂತ ತೋರುತ್ತಿದೆ ತಾಲ್ಲೂಕಿನ ಬನ್ನೂರು ಹೋಬಳಿ ಮಲಿಯೂರಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸೇವೆ ಇಲ್ಲದೆ, ಸರ್ಕಾರ ಮೂರು ಮಂದಿ ವೈಧ್ಯರ ಭರ್ತಿಗೆ ಕ್ರಮ ಕೈಗೊಳ್ಳದೆ, ಇಂದು ಭೂತದ ಬಂಗಲೆಯಾಗಿ ಮಾರ್ಪಾಟುಗೊಂಡಾಗಿ, ಸಾರ್ವಜನಿಕರ ತೆರಿಗೆ ಅನಾವಶ್ಯಕವಾಗಿ ಪೋಲಾಗಿದೆ ಎಂದು ಸಾರ್ವಜನಿಕ ವಲಯದಿಂದ ಆರೋಪ ಕೇಳಿ ಬಂದಿದೆ.
ಹಾಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಹೆಚ್.ಸಿ.ಮಹದೇವಪ್ಪರವರು ತಮ್ಮ ದೂರದೃಷ್ಟಿಯಲ್ಲಿ ಬನ್ನೂರು ಪಟ್ಟಣ ಸೇರಿದಂತೆ ಹೋಬಳಿ ಮಟ್ಟದ ಜನಸಂಖ್ಯೆಗನುಗುಣವಾಗಿ, ಸುತ್ತಮುತ್ತಲಿನ ಎಲ್ಲಾ ಗ್ರಾಮದ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ಸೇವೆ ನೀಡುವ ಸಲುವಾಗಿ, ಈ ಹಿಂದೆ ಮಹದೇವಪ್ಪರವರು ಸಚಿವರಾಗಿದ್ದಾಗ, ಬನ್ನೂರು ಪಟ್ಟಣದಿಂದ ಕೇವಲ 5 ಕಿ.ಮೀ ಅಂತರದಲ್ಲಿ ಇರುವ ಬನ್ನೂರು – ಮಳವಳ್ಳಿ ಮುಖ್ಯ ರಸ್ತೆಯ ಸರ್ಕಾರಿ ಪದವಿ ಕಾಲೇಜಿನ ಪಕ್ಕದಲ್ಲಿ ವಿಶಾಲವಾದ ಜಾಗದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ನಂತರ ಕಾಮಗಾರಿ ಪ್ರಾರಂಭಗೊಂಡು ಕಳೆದ 4 ವರ್ಷಗಳ ಹಿಂದೆ ಸೇವೆಗೆ ಲಭ್ಯವಾಯಿತಾದರು ವೈಧ್ಯರ ಭರ್ತಿಗೆ ಕ್ರಮ ಕೈಗೊಳ್ಳದೇ ಇಂದು ಸಾರ್ವಜನಿಕರ ಸೇವೆಗೆ ಅಲಭ್ಯವಾಗಿದೆ.
ಇಂದು ಆ ಕಟ್ಟಡದ ವ್ಯವಸ್ಥೆ ಹೇಗಿದೆ ಎಂದರೆ ಸುತ್ತ,ಮುತ್ತ ಕಾಡು ಬೆಳೆದು ಸರೀಸೃಪಗಳ ವಾಸ ಸ್ಥಾನವಾಗಿದೆ.ವೈದ್ಯರು ಹಾಗೂ ದಾದಿಯರ ಹೈಟೆಕ್ ವಾಸದ ಮನೆಗಳು ಗೆಜ್ಜಲು ತಿಂದು ಅಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕಳ್ಳ ಕಾಕರು ಕದ್ದು ಹೋಗಿದ್ದಾರೆ.ಆಸ್ಪತ್ರೆಯ ಗಾಜಿನ ಕಿಟಕಿಗಳು ಸೇರಿದಂತೆ ವಾಸದ ಮನೆಯ ಕಿಟಕಿಗಳನ್ನೆಲ್ಲಾ ಒಡೆದು ಹಾಕಿದ್ದಾರೆ.ಟಿ.ನರಸೀಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲೂ ಈ ಹಿಂದೆ ಸುಸಜ್ಜಿತ ಶವಾಗಾರ ಕೂಡ ಇರಲಿಲ್ಲ.ಆದರಿಲ್ಲಿ ಹೈಟೆಕ್ ಶವಾಗಾರ ನಿರ್ಮಾಣವಾಗಿತ್ತು.ಇಲ್ಲಿನ ನಲ್ಲಿಗಳು,ಲೈಟ್ಗಳು,ನೀರಿನ ಮೋಟಾರ್ ಸೇರಿದಂತೆ ಹಲವಾರು ಬೆಲೆ ಬಾಳುವ ಎಲ್ಲಾ ವಸ್ತುಗಳನ್ನು ಕಳ್ಳರು ದೋಚಿದ್ದು ಸಾರ್ವಜನಿಕರ ತೆರಿಗೆ ಹಣ ಈ ರೀತಿ ಪೋಲಾಗಿರುವುದು ಸರ್ಕಾರದ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಬಹುಕೋಚಿ ವೆಚ್ಚದಲ್ಲಿ ನಿರ್ಮಾಣವಾದ ಈ ಆಸ್ಪತ್ರೆ ಏಕೆ ಸೇವೆಗೆ ಲಭ್ಯವಾಗಲಿಲ್ಲ ಎಂದು ಅದರ ಜಾಡು ಹಿಡಿದು ಹೊರಟಾಗ ಮೇಲ್ನೋಟಕ್ಕೆ ಕಂಡು ಬಂದ ವಿಷಯವೆಂದರೆ ಬನ್ನೂರು ಪಟ್ಟಣದಿಂದ ನಾಲ್ಕೈದು ಕಿ.ಮೀ.ದೂರದಲ್ಲಿದ್ದು ಮುಖ್ಯ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಆಸ್ಪತ್ರೆ ನಿರ್ಮಾಣವಾಗಿರುವುದರಿಂದ ವೈಧ್ಯರು 24×7 ಸೇವೆಗೆ ಲಭ್ಯವಿರಲು ಒಪ್ಪುತ್ತಿಲ್ಲವೆಂಬುದು.
ಹಸಿವಿನ ಬೆಲೆ ಗೊತ್ತಿರುವವರಿಗೆ ಅನ್ನ ಉಣ ಬಡಿಸಿದರೆ ಭಕ್ತಿ,ಭಾವ,ಗೌರವದಿಂದ ಹಸಿವನ್ನು ನೀಗಿಲಿಕೊಳ್ಳುತ್ತಾರೆ.ಸರ್ಕಾರ ಕೂಡ ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವೈದ್ಯರುಗಳಿಗೆ ಮಣೆ ಹಾಕಿದರೆ ಕೋಟಿ,ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಹೈಟೆಕ್ ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ ಸಿಕ್ಕಂತ್ತಾಗುತ್ತದೆ.ಬಡ,ಮಧ್ಯಮ ವರ್ಗದ ಜನರಿಗೆ ಉಚಿತ ವೈದ್ಯಕೀಯ ಸೌಲಭ್ಯ ದೊರೆತು ಸರ್ಕಾರಕ್ಕೆ ಮತ್ತಷ್ಚು ಹೆಸರು ದೊರಕುತ್ತದೆ.
ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಹೆಚ್.ಸಿ. ಮಹದೇವಪ್ಪರವರು ಸಂಬಂಧಿಸಿದ ಇಲಾಖೆ ಸಚಿವರ ಬಳಿ ಮಾತನಾಡಿ ಸಭೆ ಕರೆದು ಅಧಿಕಾರಿಗಳ ಜೊತೆ ಚರ್ಚಿಸಿ ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ನಿಮ್ಮದೇ ಕ್ಷೇತ್ರದ ನಿಮ್ಮ ಕನಸಿನ ಆಸ್ಪತ್ರೆಯನ್ನು ಮಹಿಳೆಯರು ಮತ್ತು ಮಕ್ಕಳ ಸೇವೆಗೆ ಅವಕಾಶ ಕಲ್ಪಿಸುವರೆ ಕಾದು ನೋಡಬೇಕಿದೆ.
“ಕಟ್ಟಡ ನಿರ್ಮಾಣವಾಗಿ ನಾಲ್ಕೈದು ವರ್ಷಗಳೇ ಕಳೆದಿವೆ.ಸೇವೆ ಲಭ್ಯವಾಗದೆ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆ ತಲುಪಿದೆ.ಇದಕ್ಕೆ ಕಾಯಕಲ್ಪ ಕಲ್ಪಿಸದಿರುವುದು ದುರ್ಧೈವ.ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹಣ ಹೊಡೆಯಲಿಕ್ಕಾಗಿ ಈ ಕಟ್ಟಡ ನಿರ್ಮಾಣವಾಯಿತಾ…ಅಥವಾ ಸಾರ್ವಜನಿಕ ಉದ್ದೇಶಕ್ಕೆ ಮಾಡಿದ್ದಾರಾ…ಆಗಿದ್ದರೆ ಸೇವೆ ಕೊಡಿಸುವಲ್ಲಿ ಏಕೆ ವಿಫಲರಾಗಿದ್ದಾರೆ…? ಪ್ರತಿ ಆಯವ್ಯಯದಲ್ಲಿ ಈ ವಿಚಾರ ಪ್ರಸ್ತಾಪವಾಗಿಲ್ಲವೇ…ಸರ್ಕಾರದ ಲೆಕ್ಕ ಪತ್ರದಲ್ಲಿ ಈ ಕಟ್ಟಡದ ವಿಷಯ ನಮೂದಾಗಿಲ್ಲವೇ…ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು,ಸಚಿವರಾದ ಮಹದೇವಪ್ಪರವರಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವರಿಗೆ ಆಗ್ರಹ ಮಾಡುತ್ತಿದ್ದು ಕೂಡಲೇ ಈ ಆಸ್ಪತ್ರೆ ಕಟ್ಟಡಕ್ಕೆ ಕಾಯಕಲ್ಪ ಕಲ್ಪಿಸಿ ವೈದ್ಯರನ್ನು ನೇಮಕ ಮಾಡಿ ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಕಲ್ಪಿಸದಿದ್ದರೆ ಇನ್ನೊಂದು ವಾರದಲ್ಲಿ ಬನ್ನೂರು – ಮಳವಳ್ಳಿ ಮುಖ್ಯ ರಸ್ತೆಯನ್ನು ಹೈಜಾಕ್ ಮಾಡಲಾಗುವುದು”.
ಬನ್ನೂರು ನಾರಾಯಣ್
ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ)
ಮೈಸೂರು.
****
ಕೋರೋನ ಅವಧಿಯಲ್ಲಿ ಈ ಆಸ್ಪತ್ರೆ ಸೇವೆಯನ್ನು ಕೊರೋನ ರೋಗಿಗಳು ಪಡೆದಿದ್ದಾರೆ. ಡಾ.ಹೆಚ್.ಸಿ.ಮಹದೇವಪ್ಪರವರು ನಿರ್ಮಾಣ ಮಾಡಿಸಿದ ತಾಯಿ ಮಕ್ಕಳ ಆಸ್ಪತ್ರೆ ಅತ್ಯಂತ ಸುಸಜ್ಜಿತವಾಗಿತ್ತು.ಆದರೀಗ ವೈಧ್ಯರು ಇಲ್ಲಿಗೆ ಬಾರದ ಕಾರಣ ಆಸ್ಪತ್ರೆ ಕಟ್ಟಡ ನಶಿಸಿ ಹೋಗುತ್ತಿದೆ.ಕೂಡಲೇ ಸರ್ಕಾರ ಮತ್ತು ಮಹದೇವಪ್ಪರವರು ಆಸ್ಥೆ ವಹಿಸಿ ಸುತ್ತ ಇರುವ ಹಲವಾರು ಗ್ರಾಮಾಂತರ ಪ್ರದೇಶಗಳ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಆಸ್ಪತ್ರೆ ಸೇವೆ ಹೊದಗಿಸಲು ಮುಂದಾಗಬೇಕು.
ಹೆಚ್.ಜವರಯ್ಯ
ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು
ಗ್ರಾ.ಪಂ.,ತಾ.ಪಂ.
ಹೆಗ್ಗೂರು.
ವಿಶೇಷ ವರದಿ
– ಎಂ.ನಾಗೇಂದ್ರಕುಮಾರ್