ಇಂದಿನ ಮಕ್ಕಳು ಭವಿಷ್ಯದಲ್ಲಿ ಅತ್ಯಮೂಲ್ಯ. ಯುವ ಪೀಳಿಗೆಗಳೇ ರಾಷ್ಟ್ರದ ಸಂಪತ್ತು. ದೇಶದ ಒಟ್ಟು ದೇಶಿಯ ಉತ್ಪನ್ನ (ಜಿ ಡಿ ಪಿ) ಯುವಕರ ಮೇಲೆ ಅವಲಂಬಿತವಾಗಿ ಇರುತ್ತದೆ. ಕೆಲವು ಧರ್ಮಗಳನ್ನು ಬಿಟ್ಟು ಇಂದಿನ ಪೋಷಕರಿಗೆ ಒಂದು ಅಥವ ಇಬ್ಬರು ಮಕ್ಕಳು. ಈ ಮಕ್ಕಳ ಬಗ್ಗೆ ಕಾಳಜಿ ವಹಿಸಿವುದು ಪೋಷಕರಿಗೆ ಸಹಜ ಕ್ರಿಯೆ ಮತ್ತು ಸಾಹಸಮಯ. ಆರ್ಥಿಕ ಮುಗ್ಗಟ್ಟಿನಿಂದ ಮಕ್ಕಳನ್ನು ಪೋಷಿಸುವುದು ಪೋಷಕರಿಗೆ ಕಷ್ಟ. ಹೀಗಿರುವಾಗ ಪೋಷಕರ ಗಮನ ಮತ್ತು ಜವಾಬ್ದಾರಿ ತಮ್ಮ ಮಕ್ಕಳ ಮೇಲೆ ಅತಿ ಹೆಚ್ಚಾಗಿ ಇರುತ್ತದೆ. ಈ ಜವಾಬ್ದಾರಿಯುತ ಕಾಲ ಘಟ್ಟದಲ್ಲಿ ಮಕ್ಕಳ ಮೇಲೆ ಪೋಷಕರ ಅತಿಯಾದ ಪ್ರೀತಿಯಿಂದ ಸಾಮಾನ್ಯವಾಗಿ ಮಕ್ಕಳಿಗೆ ಕಷ್ಟ ಏನೆಂಬುದೇ ತಿಳಿದಿರುವುದಿಲ್ಲ. ಮನೋ ವೈದ್ಯ ಲೋಕದಲ್ಲಿ “ಒತ್ತಡ ಲಸಿಕೆ” ಎನ್ನುವ ವಾಖ್ಯಾನ ಇದೆ. ಮಕ್ಕಳಿಗೆ ಜವಾಬ್ದಾರಿ ಬರಬೇಕಾದರೆ ಇಂತಹ ಲಸಿಕೆಗಳು ಅತ್ಯಗತ್ಯ. ಇದು ಚುಚ್ಚು ಮದ್ದು ಅಲ್ಲ. ಮಕ್ಕಳಿಗೆ ಕಷ್ಟದ ಪಾಠ ಅಥವ ಅಲ್ಪ ಕಷ್ಟದ ಕೆಲಸಗಳನ್ನು ನೀಡುವುದು. ಆದರೆ ಪೋಷಕರ ನಿಲುವು ಹೇಗಿರುತ್ತೆ ಎಂದರೆ “ನಾವು ಕಷ್ಟ ಪಟ್ಟಿದ್ದೇವೆ, ಮಕ್ಕಳಿಗೆ ಕಷ್ಟವನ್ನು ನೀಡುವುದು ಬೇಡ” ಎಂಬುದು. ಈ ನಿಲುವಿನಿಂದ ಸುಮಾರು ಮಕ್ಕಳು ಹಟಕ್ಕೆ ಬಿದ್ದು ಪೋಷಕರ ಭಾವನೆಯನ್ನು ಹೈಜಾಕ್ ಮಾಡಿ ಬೇಕಾಗಿರುವುದನ್ನು ಗಿಟ್ಟಿಸಿಕೊಳ್ಳುತ್ತಾರೆ. ಕೆಲ ಮಕ್ಕಳಂತೂ ಸಿಟ್ಟು, ತಾಳ್ಮೆಯ ಕೊರತೆ, ಹಠಾತ್ ಕೋಪ, ಸಾಮಗ್ರಿಗಳನ್ನು ಬಿಸಾಕುವುದು, ಕಾರಣ ಇಲ್ಲದೆ ಉದ್ರೇಕ ಮಾಡಿಕೊಳ್ಳುವುದು ಇತ್ಯಾದಿ. ಈ ಅಂತರಜಾಲದ ಯುಗದಲ್ಲಿ ಬಹು ದೊಡ್ಡ ಸಾಮಾಜಿಕ ಪಿಡುಗು ಯಾವುದು ಎಂದರೆ “ಮೊಬೈಲ್ ಚಟ”. ನನ್ನ ಇಂದಿನ ವಿಷಯ ಇದಲ್ಲ, ಆದುದರಿಂದ ವಿವರಿಸಲು ಹೋಗುವುದಿಲ್ಲ.
ನಾನು ತಾತನವರ ಜೊತೆ ಮೃಸೂರಿಗೆ ಹೋದಾಗಲೆಲ್ಲಾ ಅರಮನೆ ಉತ್ತರ ದ್ವಾರದಲ್ಲಿ ಬರುವ ಹನುಮಂತನ ದೇವಸ್ಥಾನಕ್ಕೆ ಕರೆದೋಯ್ದು “ಅಂತ್ರ” ವನ್ನು ಕಟ್ಟಿಸುತ್ತಿದ್ದರು. ಅರ್ಚಕರು ತೀರ್ಥವನ್ನು ಮಂತ್ರ ಪಠಣದೊಂದಿಗೆ ಮುಖದ ಮೇಲೆ ಸಿಂಪಡಿಸಿ ಬೆಚ್ಚಿ ಬಿಳುವಹಾಗೆ ಮಾಡುತ್ತಿದ್ದರು. ಕಾರಣವಿಷ್ಟೆ ನನ್ನ ಸಿಟ್ಟು ಕಮ್ಮಿ ಆಗಲಿ ಮತ್ತು ನಕಾರಾತ್ಮಕ ವರ್ತನೆ ಮತ್ತು ಚಿಂತನೆಗಳು ನನ್ನಿಂದ ಹೋಗಲಿ ಎಂದು. ಅದರಲ್ಲೂ ಸಾಮಾನ್ಯವಾಗಿ ಗಂಡು ಮಕ್ಕಳಲ್ಲಿ ಆರ್ಭಟವೆ ಜಾಸ್ತಿ. ಹೆಣ್ಣುಮಕ್ಕಳಿಗೆ ಸೌಮ್ಯ ಪ್ರಧಾನ. ಯಾಕೆ ಹೀಗೆ? ನಮ್ಮ ಗ್ರಂಥಿಗಳಿಂದ ಹೊರಸೂಸುವ ಪ್ರಚೋದನಾ ರಸಗಳಿಂದ ಈ ತಾರತಮ್ಯವೇ? ಇಂದಿನ ತಾರತಮ್ಯದ ಕಾರಣ ಪೋಷಕರ ಮತ್ತು ಮಕ್ಕಳ ನಡುವಿನ ಭಾವನಾತ್ಮಕ ವೆತ್ಯಾಸ. ಆದುದರಿಂದ ಎಲ್ಲಾ ಮಕ್ಕಳಿಗೂ ‘ಅಂತ್ರ’ ಬೇಕಾಗಬಹುದೇನೋ?
“ಅಂತ್ರ” ಯಾವುದು? ಓದುಗರಿಗೆ “ತಾಯಿತ” ತಿಳಿದಿರುವ ವಿಷಯ. ಮತ್ತೊಮ್ಮೆ ಸಂಕ್ಷಿಪ್ತವಾಗಿ ಇದನ್ನು ತಿಳಿಸುವ ಪ್ರಯತ್ನ ಮಾಡುವೆ. ಹಲವಾರು ಶಕ್ತಿಪ್ರದಾಯಕ ದೇವಸ್ಥಾನಗಳಲ್ಲಿ ಇಂತಹ ತಾಯಿತ ಕೊಂಡು ಕೊರಳಿಗೆ, ತೋಳಿಗೆ ಮತ್ತು ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ಈ ತಾಯಿತ ಚಿಕ್ಕ ಕೊಳುವೆ ಆಕಾರದ ಡಬ್ಬಿಯ ಒಳಗೆ ತಾಮ್ರದ ಹಾಳೆಯಲ್ಲಿ ಆ ಮೂಲ ಶಕ್ತಿ ದೇವತೆಗಳ ಯಂತ್ರಗಳನ್ನು ಬರೆದು ದೇವತೆಗಳ ವಿಗ್ರಹಗಳ ಕಾಲಿನ ಅಡಿ ಇಟ್ಟು ಮಂತ್ರಗಳಿಂದ ಪೂಜಿಸಿ ಭಕ್ತಾದಿಗಳಿಗೆ ನೀಡುವರು.

ನಾನು ಜಪಾನ್, ಥೈಲಾಂಡ, ವಿಯೆಟ್ನಾಂ ಹಾಗೂ ಕಾಂಪುಚಿಯ ದೇಶಗಳ ಪ್ರವಾಸ ಕೈಗೊಂಡಾಗ ಹಲವು ಶಿಂಟೋ ಮತ್ತು ಭೌಧ್ದ ಶಕ್ತಿ ದೇವತೆಗಳ ವಿಹಾರಗಳಲ್ಲಿ ಇಂತಹ ತಾಯಿತಗಳು ಹಣಕ್ಕೆ ಮಾರುತ್ತಿದ್ದನ್ನು ನೋಡಿದ್ದೇನೆ. ಇಂತಹ ತಾಯಿತದ ಒಳಗೆ ಯಂತ್ರವನ್ನು ಇಟ್ಟಂತಾ ವಸ್ತುವನ್ನು “ಅಂತ್ರ” ಎಂದು ಕರೆಯುತ್ತಾರೆ. ಅಂತ್ರದ ಮೂಲ ಅರ್ಥ ಮಧ್ಯ ಕೇಂದ್ರ ಬಿಂದು. ಮನುಷ್ಯನ ಮಧ್ಯ ಬಿಂದು “ನಾಭಿ ಅಥವ ಹೊಕ್ಕುಳ”. ಶ್ರೀಮನ್ ಅನಂತ ಪದ್ಮನಾಭಸ್ವಾಮಿಯ ಹೆಸರು ಸಹ ಈ ನಾಭಿಯಿಂದ ಬಂದಿರುವುದು. ನಾಭಿಯಿಂದ ತಾವರೆ ಹೂ ಅರಳಿಸಿದವ “ಪದ್ಮನಾಭ”. ತಾಯಿ ಗರ್ಭದಲ್ಲಿ ಮಗುವಿಗೆ ಹೊಕ್ಕಳ ಬಳ್ಳಿಯಿಂದ ಪೌಷ್ಟಿಕಾಂಶಗಳು ಹೋಗುವುದು. ಈ ಬಳ್ಳಿ ಸರಿಯಾಗಿ ಮಗುವಿನ ಮಧ್ಯ ಭಾಗದಲ್ಲಿ ಬೆಸೆದಿರುತ್ತೆ. ತಂತ್ರ ಗ್ರಂಥಗಳ ಆಧಾರದ ಮೇಲೆ ಈ ಮಧ್ಯ ಜಾಗವನ್ನು “ಅಂತ್ರ” ಎಂದು ಕರೆಯಲಾಗಿದೆ. ಈ ಪದವನ್ನು ವಿಸಂಕೇತಿಸಿದಾಗ ಅಥವ ಭೇದಿಸಿದಾಗ ಬರುವ ಅರ್ಥ ಸಮರೂಪತೆ ಅಥವ ಸಮಸೂತ್ರತೆ. ಬಹುತೇಕ ಸಸ್ತನಿಗಳ ಶರೀರ ಅಂಗ ರಚನೆ ಆನಾದಿ ಕಾಲದಿಂದಲೂ ಸಮರೂಪತೆಯನ್ನು ಕಾಯ್ದುಕೊಂಡು ಬಂದಿವೆ. ಮನುಷ್ಯನು ಸಹ ಸಮರೂಪತೆಯನ್ನು ಹೊಂದಿರುತ್ತಾನೆ. ಈ ‘ಅಂತ್ರ’ ಸಿಮಿಟ್ರಿಯ ಚಿಹ್ನೆ.
ವೈದ್ಯಕೀಯ ಕ್ಷೇತ್ರದಲ್ಲಿ “ಅಂತ್ರ” ದ ಸಮಾನಾಂತರ ವಿವರಣೆ ಕರುಳು ಬಳ್ಳಿಯಲ್ಲಿ (ಸ್ಮಾಲ್ ಅಂಡ್ ಲಾರ್ಜ್ ಇಂಟಸ್ಟೈನ್ಸ) ನರಗಳ ವ್ಯೂಹ ಮತ್ತು ಸಂಯೋಜನೆ. ನೆನಪಿರಲಿ, ಅಗಾಧವಾದ ಅಥವ ವಿಸ್ತಾರವಾದ ಕರುಳು ಬಳ್ಳಿಯನ್ನು “ಎರಡನೆ ಮೆದುಳು” ಎಂದು ನರ ಮತ್ತು ಮಾನಸಿಕ ಗ್ರಂಥಗಳಲ್ಲಿ ಉಲ್ಲೇಖಿಸಿಲಾಗಿದೆ. ಕರುಳು ಬಳ್ಳಿ ವಿಸ್ತಾರತೆಯಲ್ಲಿ ನರಗಳ ವ್ಯೂಹ ಅಸಮಾನ್ಯ. ಯಾವುದೇ ಮಾನಸಿಕ ಸಮಸ್ಯೆ ಉದ್ಭವ ಆದರೆ ಮನಸ್ಸಿಗಿಂತ ಉದರದಲ್ಲಿ ಏರು ಪೇರು ಮೊದಲು ಕಾಣಬಹುದು. ಕೆಲವರಲ್ಲಿ ಆತಂಕ ಮತ್ತು ಚಂಚಲತೆ ಮನೆ ಮಾಡಿ ಕೊಂಡಿದ್ದರೆ ಅವರುಗಳ ಕರುಳು ಕೆರಳುತ್ತದೆ. ಈ ಸಹಲಕ್ಷಣಗಳನ್ನು ‘ಇರಟಬಲ್ ಬವಲ್ ಸಿಂಡ್ರೋಮ್’ ಎಂದೆನ್ನುತ್ತಾರೆ. ಕೆಲವು ವೇಳೆ ಈ ಉದರ ಸಮಸ್ಯೆ ಅನುವಂಶಿಕೆಯೂ ಹೌದು.
“ಅಂತ್ರ” ದ ತಾಂತ್ರಿಕ ಅರ್ಥ ಶಾರೀರಿಕ ಸಮರೂಪತೆ ಮತ್ತು ಮಾನಸಿಕ ಸಮತೋಲನ. ಶರೀರ ಸಮರೂಪತೆಯಲ್ಲಿ ವೆತ್ಯಾಸ ಕಂಡರೆ ಅಂಗ ವಿಕಲತೆ. ಮನಸ್ಸಿನ ಸಮತೋಲನ ಹಾಳಾದರೆ ಹುಚ್ಚು, ಭ್ರಮೆ, ಮದ, ಉನ್ಮಾದ ಮತ್ತು ಅವಿವೇಕತನ. ಇಂತಾದ್ದು ಆಗಬಾರದೆಂಬ ಕಾರಣಕ್ಕೆ ಜನರು “ಅಂತ್ರ” ವನ್ನು ತಮ್ಮ ಮಕ್ಕಳ ಕೊರಳಿಗೋ, ತೋಳಿಗೋ ಅಥವ ಸೊಂಟಕ್ಕೆ ಕಟ್ಟಿಸುತ್ತಾರೆ.

ಹಾಗಿದ್ದರೆ “ಅಂತ್ರ” ದ ಮೂಲ ವಸ್ತು? ಕೊಳುವೆ ಡಬ್ಬಿಯ ಒಳಗೆ ತಾಮ್ರ ಹಾಳೆಯ ಮೇಲೆ ಯಾಂತ್ರಿಕ ವಿನ್ಯಾಸ ಮಾಡಿ ಸುರಳಿ ಸುತ್ತಿ ಇಟ್ಟಿರುವ “ಯಂತ್ರ”. ಈ ಯಂತ್ರವೆಂಬ ತಾಮ್ರದ ತಗಡಿನ ಶಕ್ತಿ ಯಾವುದು? ಇದರಲ್ಲಿ ಅಡಿಗಿರುವ ಕಲ್ಪನೆ ಎಂತಾದ್ದು? ಮೊದಲೆ ತಿಳಿಸಿದ ಈಕ್ವೇಶನ್ “ಯಂತ್ರ + ಮಂತ್ರ = ತಂತ್ರ. ಇಪ್ಪತ್ತಂದೊನೇ ಶತಮಾನದ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಮಂತ್ರ “ಅರೆವಾಹಕ ಉತ್ಪಾದನೆ ಅಥವ ಸೆಮಿ ಕಂಡಕ್ಟರ್ಸ”. ಇದರ ಮಂತ್ರ ಮೆದುಳು. ಉದಾಹರಣೆಗೆ, ವಿಜ್ಞಾನಿಗಳ ಮತ್ತು ತಂತ್ರಜ್ಞಾನಿಗಳ ಮೆದುಳು. ಈ ಸೆಮಿ ಕಂಡಕ್ಟರ್ಸ ಮತ್ತು ಅತ್ಯಾಧುನಿಕ ಯಂತ್ರ “ಕ್ವಾಂಟಮ್ ಕಂಪ್ಯೂಟರ್” ಗಳಿಂದ ಹೊರಬರುವ ಉತ್ಪನ್ನ “ಕೃತಕ ಬುದ್ದಿಮತೆ ಮತ್ತು ಅಂತರ್ಜಾಲದ ಅಧಿಕ ವೇಗ”.
ಕೃತಕ ಬುದ್ದಿಮತೆ ಮುಂಬರುವ ಅಂಕಣದಲ್ಲಿ ತಿಳಿಸುತ್ತೇನೆ. ನಾನು ತಿಳಿಸುವ ಯಂತ್ರದ ರೇಖಾ ವಿನ್ಯಾಸ ಸಮರೂಪತೆ ಹೊಂದಿದ್ದು ಹೊರ ರೇಖಾ ವಿನ್ಯಾಸ ಚೌಕವಾಗಿದ್ದು, ಮತ್ತೆ ವರ್ತುಲ ಮತ್ತು ತ್ರಿಕೋನ ವಲಯಗಳಿಗೆ ಸೀಮಿತವಾಗಿರುತ್ತೆ. ಯಂತ್ರದ ಮಧ್ಯ ಭಾಗದಲ್ಲಿ ಕೇಂದ್ರ ಬಿಂದುವನ್ನು ಕಾಣಬಹುದು. ಈ ವಲಯಗಳ ಮಧ್ಯದಲ್ಲಿ ಹಲವಾರು ಪ್ರಾಣಿಗಳ ಅಥವ ವಸ್ತುಗಳ ಚಿಹ್ನೆಗಳನ್ನು ಗಮನಿಸಬಹುದು. ವರ್ತುಲ, ಚೌಕಟ್ಟಿನ ಕೋನ ಮತ್ತು ತ್ರಿಕೋನಗಳ ಚಿಹ್ನೆಗಳ ಗೂಢಾರ್ಥ ಭೇದಿಸಿದಾಗ ವಿಶಿಷ್ಟ ಅರ್ಥಗಳ ಬಗ್ಗೆ ವಿವರಿಸುವ ಪ್ರಯತ್ನ ಮಾಡುವೆ…
ಮುಂದುವರಿಯುವುದು..
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

