ತುಮಕೂರು:ಎತ್ತಿನ ಹೊಳೆ ಯೋಜನೆಯ ಸುಮಾರು 252 ಕಿ.ಮಿ. ನಾಲಾ ಕಾಮಗಾರಿಯಲ್ಲಿ 235 ಕಿಮಿ ಕಾಮಗಾರಿ ಪೂರ್ಣಗೊಂಡಿದ್ದು,ಹಾಸನ ಜಿಲ್ಲೆ ಬೇಲೂರು ತಾಲೂಕಿನ ಆರು ಕಿ.ಮಿ.ಅರಣ್ಯ ಜಾಗದಲ್ಲಿ ನಾಲಾ ಕಾಮಗಾರಿ ಪೂರ್ಣಗೊಂಡರೆ ಮುಂದಿನ 2026ರ ಜೂನ್ ವೇಳೆಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನಹೊಳೆ ಯೋಜನೆಯ ಮುಖ್ಯ ಇಂಜಿನಿಯರ್ ಆನಂದ್ ಸ್ಪಷ್ಟನೆ ನೀಡಿದ್ದಾರೆ.
ನಗರದ ಅಮರಜ್ಯೋತಿ ನಗರದಲ್ಲಿರುವ ವಿಶ್ವೇಶ್ವರಯ್ಯ ಜಲನಿಗಮದ ಕಚೇರಿ ಎದುರು ಎತ್ತಿನಹೊಳೆ ಯೋಜನೆ ನಮ್ಮದಾಗಲಿ ಎಂಬ ಘೋಷವಾಕ್ಯದೊಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ನೇತೃತ್ವದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡಿದ್ದ ಎತ್ತಿನಹೊಳೆ ಅಭಿಯಾನದಲ್ಲಿ ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಿದ ಅಧಿಕಾರಿಗಳು,ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವ ಮಳೆಯ ನೀರನ್ನು ಸಂಗ್ರಹಿಸಿ, ಪೂರ್ವದಲ್ಲಿರುವ ಬಯಲು ಸೀಮೆಯ 7 ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹರಿಸುವ ಯೋಜನೆ ಇದಾಗಿದೆ ಎಂದರು.
ಇದಕ್ಕೂ ಮೊದಲು ಮಾತನಾಡಿದ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿಅಧ್ಯಕ್ಷ ಮುರುಳೀಧರ ಹಾಲಪ್ಪ,ಎತ್ತಿನಹೊಳೆ ಯೋಜನೆ ಬಯಲು ಸೀಮೆಯ ಜೀವಜಲದ ಯೋಜನೆ. ಈಗಾಗಲೇ ಶೇ90 ರಷ್ಟು ಕೆಲಸ ಮುಗಿದಿದ್ದರೂ ಯೋಜನೆಗೆ ಅನಗತ್ಯ ಅಕ್ಷಪಣೆಗಳನ್ನು ಕೇಂದ್ರ ಸರಕಾರ ಸಲ್ಲಿಸುತ್ತಿದೆ.ಇದು ಒಪ್ಪುವಂತಹದಲ್ಲ. ಈಗಾಗಲೇ ಕೇಂದ್ರದ ಮಲತಾಯಿಧೋರಣೆಯಿಂದ ಮೇಕೆದಾಟು,ಕಳಸ-ಬಂಡೂರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ.ಈ ಯೋಜನೆಯೂ ಅದೇರೀತಿಯಾದರೆ ಇಡೀ ಬಯಲು ಸೀಮೆ ಒಂದು ಹನಿ ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ.ಹಾಗಾಗಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಜನರು ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ದ್ವನಿ ಎತ್ತಬೇಕಿದೆ.ಹಾಗೆಯೇ ಜಿಲ್ಲೆಯ ಸಂಸದರು, ಯೋಜನೆಯ ಪರವಾಗಿ ಕೇಂದ್ರದಲ್ಲಿ ಮಾತನಾಡಿ, ಪರಿಸರ ಇಲಾಖೆಯ ಅನುಮತಿಕೊಡಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಅಧಿವೇಶನದಲ್ಲಿ ಭಾಗವಹಿಸಿದ್ದು, ಅಧಿವೇಶನ ಮುಗಿದ ನಂತರ ಅಂದರೆ ಸೋಮವಾರ ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು, ರೈತರು ಮತ್ತು ಜನಪ್ರತಿನಿಧಿಗಳ ಸಭೆಯನ್ನು ನಡೆಸಲಿದ್ದಾರೆ. ಸಭೆಯ ನಂತರ ಕೇಂದ್ರ ಸರಕಾರದ ಮೇಲೆ ಮತ್ತಷ್ಟು ಒತ್ತಡ ಹಾಕಲು ಅನುಕೂಲವಾಗುವಂತೆ ಹೋರಾಟ ರೂಪಿಸಲಾಗುವುದು ಎಂದು ಮುರುಳೀಧರ ಹಾಲಪ್ಪ ತಿಳಿಸಿದರು.
ಎಸ್.ಷಫಿಅಹಮದ್ ಜಿ.ಚಂದ್ರಶೇಖರಗೌಡ, ಭಾರತಿಶ್ರೀನಿವಾಸ್, ಗಂಗಹನುಮಯ್ಯ,ಇಕ್ಬಾಲ್ ಅಹಮದ್,ಪುಟ್ಟಕಾಮಣ್ಣ ಸೇರಿದಂತೆ ಹಲವರು ಮಾತನಾಡಿ,ಎತ್ತಿನಹೊಳೆ ಯೋಜನೆಗೆಅಡ್ಡಿಪಡಿಸುತ್ತಿರುವಕೇಂದ್ರ ಸರಕಾರದ ಮಲತಾಯಿಧೋರಣೆಯನ್ನು ಖಂಡಿಸಿದರಲ್ಲದೆ,ಜಿಲ್ಲೆಯ ಸಂಸದರು, ಕೇಂದ್ರ ಸಚಿವರಾಗಿರುವ ವಿ.ಸೋಮಣ್ಣ, ಜಿಲ್ಲೆಯ ಜನರ ಪರವಾಗಿ ನಿಂತುಯೋಜನೆಗೆ ಅನುಮೋಧನೆ ಕೊಡಿಸುವಂತೆ ಆಗ್ರಹಿಸಿದರು.
– ಕೆ.ಬಿ.ಚಂದ್ರಚೂಡ
