ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಕ್ವಿಯಾವೊ ಎಂಬ ಯುವಕ ಕಸ ಸಂಗ್ರಹಣೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರೂ, ಎಲೆಕ್ಟ್ರಾನಿಕ್ ತ್ಯಾಜ್ಯಗಳಿಂದ ಅಮೂಲ್ಯ ಲೋಹಗಳನ್ನು ಬೇರ್ಪಡಿಸುವ ಹವ್ಯಾಸದಿಂದ ಇದೀಗ ಗಮನ ಸೆಳೆದಿದ್ದಾನೆ. ಜನರು ಎಸೆದ ಸಿಮ್ ಕಾರ್ಡ್ಗಳು ಹಾಗೂ ಹಳೆಯ ಎಲೆಕ್ಟ್ರಾನಿಕ್ ಸಾಧನಗಳ ಮದರ್ಬೋರ್ಡ್ಗಳನ್ನು ಸಂಗ್ರಹಿಸಿ ಅವುಗಳಿಂದ ಚಿನ್ನವನ್ನು ಬೇರ್ಪಡಿಸುವ ಪ್ರಯೋಗವನ್ನು ಅವನು ಆರಂಭಿಸಿದ್ದ.
ಸಂಗ್ರಹಿಸಿದ ವಸ್ತುಗಳನ್ನು ತನ್ನ ಅಂಗಡಿಯಲ್ಲಿ ಇಟ್ಟುಕೊಂಡು ಬಿಡುವಿನ ವೇಳೆಯಲ್ಲಿ ಅವುಗಳನ್ನು ಸಂಸ್ಕರಿಸಿ ಚಿನ್ನವನ್ನು ಬೇರ್ಪಡಿಸುವ ಕಾರ್ಯ ಮಾಡುತ್ತಿದ್ದನು. ಈ ವಿಧಾನದಿಂದ ಸುಮಾರು 200 ಗ್ರಾಂ ಚಿನ್ನವನ್ನು ಹೊರತೆಗೆಯಲು ಅವನಿಗೆ ಸಾಧ್ಯವಾಗಿದ್ದು, ಇದರ ಮೌಲ್ಯ ಭಾರತೀಯ ಕರೆನ್ಸಿಯಲ್ಲಿ ಅಂದಾಜು 27 ಲಕ್ಷ ರೂ. ಎಂದು ತಿಳಿದುಬಂದಿದೆ.
ಒಂದು ಸಿಮ್ ಕಾರ್ಡ್ನಲ್ಲಿ ಕೇವಲ 0.001 ಮಿಲಿಗ್ರಾಂಷ್ಟು ಚಿನ್ನ ಮಾತ್ರ ಇರುವುದರಿಂದ, ಇಷ್ಟೊಂದು ಪ್ರಮಾಣದ ಚಿನ್ನ ಪಡೆಯಲು ಅವನು ಸುಮಾರು ನಾಲ್ಕೂವರೆ ಲಕ್ಷ ಸಿಮ್ ಕಾರ್ಡ್ಗಳು ಹಾಗೂ ಮೈಕ್ರೋಚಿಪ್ಗಳನ್ನು ಸಂಗ್ರಹಿಸಿದ್ದಾನೆ. ತನ್ನ ಈ ಪ್ರಯತ್ನದ ಕುರಿತು ಅವನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಹಲವರು ಅವನ ತಾಳ್ಮೆ ಮತ್ತು ಪರಿಶ್ರಮವನ್ನು ಮೆಚ್ಚಿಕೊಂಡಿದ್ದಾರೆ.
ತಂತ್ರಜ್ಞಾನ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಸಂಪತ್ತನ್ನು ಗಳಿಸಬಹುದೆಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಾಗಿದೆ ಎಂದು ನೆಟಿಜನ್ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
