ಬೇಲೂರು: ತಾಲ್ಲೂಕಿನ ಬ್ಯಾದನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಯುವಕ ಬಲಿಯಾದ ಘಟನೆ ಖಂಡಿಸಿ ಹಾಗೂ ಆನೆ-ಮಾನವ ಸಂಘರ್ಷಕ್ಕೆ ಇತಿಶ್ರಿ ಹಾಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಕರೆ ನೀಡಿದ್ದ ಅರೇಹಳ್ಳಿ ಬಂದ್ ಯಶಸ್ವಿಯಾಯಿತು.
ತಾಲ್ಲೂಕಿನಲ್ಲಿ ಕಾಡಾನೆ ಸಮಸ್ಯೆ ಮಿತಿ ಮೀರಿದೆ. ಅದರಲ್ಲೂ ಅರೇಹಳ್ಳಿ ಭಾಗದಲ್ಲಿ ಹೆಚ್ಚಾಗಿದೆ. 10 ದಿನಗಳ ಅಂತರದಲ್ಲಿ ಇಬ್ಬರ ಬಲಿಯಾಗಿದ್ದಾರೆ. ಸಮಸ್ಯೆ ತಾರಕಕ್ಕೇರಿದ್ದರೂ, ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಬೆಳೆಗಾರರ ಒಕ್ಕೂಟ ಹಾಗೂ ಇತರೆ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದವು.
ಬೆಳಗ್ಗೆಯಿಂದಲೇ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ ಜನರು, ಕಾಡಾನೆ ಹಾವಳಿಗೆ ಕಡಿವಾಣ ಹಾಕದ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಅರೇಹಳ್ಳಿ ಪಟ್ಟಣ ಬಂದ್ ಮಾಡಿ, ಅರೇಹಳ್ಳಿ-ಬೇಲೂರು ರಸ್ತೆ ತಡೆ ನಡೆಸಿ ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಮಾಯಕರನ್ನು ಸರಣಿಯೋಪಾದಿ ಯಲ್ಲಿ ಕೊಲ್ಲುತ್ತಿರುವ ಹಾಗೂ ಜನರಿಗೆ ಕಂಟಕವಾಗಿರುವ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಎಂದು ಒತ್ತಾಯಿಸಿದರು. 3 ಪ್ರತಿಭಟನೆಯಲ್ಲಿ ಕಾಫಿ ಬೆಳೆಗಾರರ ಸಂಘ, ಒಕ್ಕೂಟ, ಕಾರ್ಮಿಕ ಹಾಗೂ ರೈತ ಸಂಘಟನೆಗಳ ನೂರಾರು ಮುಖಂಡರು ಹಾಗೂ ಸಾವಿರಾರು ಮಂದಿ ಭಾಗಿಯಾಗಿ ಸಮಸ್ಯೆಗೆ ಇನ್ನಾದರೂ ಕಂಡು ಹಿಡಿಯದಿದರೆ ಪರಿಹಾರ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಅನಿಲ್ ಅಂತ್ಯಕ್ರಿಯೆ:
ಈ ನಡುವೆ ನಿನ್ನೆ ಸಂಜೆ ಅಣ್ಣಮಲೈ ಎಸ್ಟೇಟ್ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಗುಜ್ಜನಹಳ್ಳಿ ಗ್ರಾಮದ ಅನಿಲ್ ಕುಮಾರ್ (28) ಅಂತ್ಯಕ್ರಿಯೆ ಸ್ವಗ್ರಾಮದಲ್ಲಿಂದು ನೆರವೇರಿತು. ದುರಂತ ನಂತರ ಅರಣ್ಯ ಸಚಿವರು ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಶವ ಎತ್ತಲು ಬಿಡದೆ ಮೃತರ ಕಡೆಯವರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದರು. ಅಧಿಕಾರಿಗಳು, ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ, ಸಿಸಿಎಂ ಏಳುಕುಂಡಲಾ, ಡಿಸಿಎಫ್ ಸೌರಭ್ಕುಮಾರ್, ಸಕಲೇಶಪುರ ಎಸಿ ಡಾ.ಶ್ರುತಿ, ತಹಸೀಲ್ದಾರ್ ಎಂ.ಮಮತಾ ಇತರರು ದೌಡಾಯಿಸಿದರು.
ಕಡೆಗೆ ಕಾಡಾನೆ ಹಾವಳಿ ತಡೆ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು. ನಂತರ ತಡರಾತ್ರಿ 2 ಗಂಟೆ ಸುಮಾರಿಗೆ ಮೃತದೇಹವನ್ನು ಬೇಲೂರು ತಾಲ್ಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಅದಕ್ಕೂ ಮುನ್ನ ಮೃತರ ಕುಟುಂಬಕ್ಕೆ 15 ಲಕ್ಷ ರೂ.ಪರಿಹಾರದ ಚೆಕ್ನ್ನು ಡಿಸಿ ಹಾಗೂ ಇತರರು ವಿತರಿಸಿದರು.
ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಮೃತ ದೇಹ ಹಸ್ತಾಂತರಿಸಲಾಯಿತು. ಬಳಿಕ ಗುಜ್ಜನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ವೇಳೆ ಮನೆಗೆ ಆಧಾರವಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಹೆತ್ತ ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು.
