ಕೆ.ಆರ್. ಪೇಟೆ, ಅ. 14: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಕೆ.ಆರ್. ಪೇಟೆ ತಾಲೂಕಿಗೆ ಒಟ್ಟು ₹730.42 ಕೋಟಿ ವೆಚ್ಚ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ, ಬಳಿಕ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಒಟ್ಟು ₹5,023.85 ಕೋಟಿ ವೆಚ್ಚ ಮಾಡಲಾಗಿದೆ. ಇದರ ಜತೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ₹10 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕಿನ 25,702 ಕೃಷಿ ಪಂಪ್ಸೆಟ್ಗಳು ಸೇರಿದಂತೆ ಮಂಡ್ಯ ಜಿಲ್ಲೆಯ 1,16,557 ಕೃಷಿ ಪಂಪ್ಸೆಟ್ಗಳಿಗೆ ವಾರ್ಷಿಕವಾಗಿ ₹1,000 ಕೋಟಿ ಸಬ್ಸಿಡಿ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ ಪ್ರತಿದಿನ ಸುಮಾರು 48 ಲಕ್ಷ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಮೂರು ವರ್ಷಗಳಲ್ಲಿ ₹1.52 ಲಕ್ಷ ಕೋಟಿ ವೆಚ್ಚ
ಕಳೆದ ಮೂರು ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ₹1,52,084 ಕೋಟಿ ವೆಚ್ಚ ಮಾಡಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಫಲಾನುಭವಿಗಳಿಗೆ ₹79,351 ಕೋಟಿ ವೆಚ್ಚ ಮಾಡಲಾಗಿದೆ. ಫಲಾನುಭವಿಗಳಿಗೆ ಈವರೆಗೆ 32 ಕಂತುಗಳಲ್ಲಿ ತಲಾ ₹64,000 ತಲುಪಿದ್ದು, 33ನೇ ಕಂತಿನ ಹಣ ಬಿಡುಗಡೆಯಾಗಿರುವುದರಿಂದ ಒಟ್ಟು ₹66,000 ದೊರೆತಂತಾಗಲಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ರಾಜ್ಯದ 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದ್ದು, ಇದಕ್ಕಾಗಿ ₹29,641.54 ಕೋಟಿ ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 844.61 ಕೋಟಿ ಟಿಕೆಟ್ಗಳನ್ನು ವಿತರಿಸಲಾಗಿದ್ದು, ₹22,250.78 ಕೋಟಿ ವೆಚ್ಚವಾಗಿದೆ ಎಂದರು.
ಯುವನಿಧಿ ಯೋಜನೆಯಡಿ 3.99 ಲಕ್ಷ ಫಲಾನುಭವಿಗಳಿಗೆ ₹1,317.50 ಕೋಟಿ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 1,54,57,004 ಪಡಿತರ ಫಲಾನುಭವಿಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ₹11,821.17 ಕೋಟಿ ಜಮೆ ಮಾಡಲಾಗಿದೆ. ಆಹಾರ ಧಾನ್ಯ ವಿತರಣೆಗೆ ₹8,510.77 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.
ಕೆ.ಆರ್. ಪೇಟೆಗೆ ಹೆಚ್ಚುವರಿ ಬಸ್ಗಳ ಬೇಡಿಕೆ
ಮಂಡ್ಯ ಜಿಲ್ಲೆಗೆ ಹೊಸದಾಗಿ 100 ಬಸ್ಗಳನ್ನು ನೀಡುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ. ಈ ಪೈಕಿ ಭೂವರಹನಾಥ ದೇವಾಲಯ ಹಾಗೂ ಮೈಸೂರಿಗೆ ಪ್ರಯಾಣಿಸುವವರಿಗೆ ಅನುಕೂಲವಾಗುವಂತೆ ಕೆ.ಆರ್. ಪೇಟೆ ತಾಲೂಕಿಗೂ ಹೆಚ್ಚಿನ ಬಸ್ಗಳನ್ನು ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಪಡಿತರ ಚೀಟಿಗಳ ಇ-ಕೆವೈಸಿ ಪ್ರಕ್ರಿಯೆ ಶೇ.74ರಷ್ಟು ಪೂರ್ಣಗೊಂಡಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಯನಿರ್ವಹಣೆಯ ಸಮಯ ಹಾಗೂ ದಾಸ್ತಾನು ವಿವರಗಳನ್ನು ಪ್ರದರ್ಶಿಸುವ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದ್ದ 1,825 ಫಲಾನುಭವಿಗಳು ಮೃತಪಟ್ಟಿದ್ದಾರೆ. ಮೃತರ ಖಾತೆಗಳಿಗೆ ಜಮೆಯಾಗಿದ್ದ ಹಣದಲ್ಲಿ ₹60 ಸಾವಿರವನ್ನು ಸರ್ಕಾರದ ಖಜಾನೆಗೆ ಹಿಂದಿರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆ.ಆರ್. ಪೇಟೆ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ
- ಗೃಹಲಕ್ಷ್ಮಿ: 64,147 ಫಲಾನುಭವಿಗಳಿಗೆ ₹423.37 ಕೋಟಿ ವಿತರಣೆ.
- ಗೃಹಜ್ಯೋತಿ: 80,724 ಕುಟುಂಬಗಳಿಗೆ ಉಚಿತ ವಿದ್ಯುತ್; ಸರ್ಕಾರದಿಂದ ₹86.77 ಕೋಟಿ ವೆಚ್ಚ.
- ಶಕ್ತಿ: ಮಹಿಳೆಯರಿಂದ 2.65 ಕೋಟಿ ಟಿಕೆಟ್ಗಳ ಬಳಕೆ; ಟಿಕೆಟ್ಗಳ ಮೌಲ್ಯ ₹85.98 ಕೋಟಿ.
- ಅನ್ನಭಾಗ್ಯ: 2,34,462 ಫಲಾನುಭವಿಗಳಿಗೆ 2,21,360 ಕ್ವಿಂಟಾಲ್ ಆಹಾರ ಧಾನ್ಯ ವಿತರಣೆ. ಇದಕ್ಕಾಗಿ ₹58.19 ಕೋಟಿ ವೆಚ್ಚದ ಜತೆಗೆ ₹71.74 ಕೋಟಿ ನೇರ ನಗದು ವರ್ಗಾವಣೆ.
- ಯುವನಿಧಿ: 1,612 ಪದವೀಧರರಿಗೆ ₹4.37 ಕೋಟಿ ನೆರವು.
ಗ್ಯಾರಂಟಿ ಯೋಜನೆಗಳಿಂದ ಅನುಕೂಲ: ಫಲಾನುಭವಿಗಳ ಮೆಚ್ಚುಗೆ
ಗ್ಯಾರಂಟಿ ಯೋಜನೆಗಳಿಂದ ತಮ್ಮ ಕುಟುಂಬಗಳಿಗೆ ಆರ್ಥಿಕ ನೆರವು ದೊರೆತಿದೆ ಎಂದು ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದರು. ಗೃಹಜ್ಯೋತಿ ಯೋಜನೆಯಿಂದ ವಿದ್ಯುತ್ ಬಿಲ್ನ ಹೊರೆ ಕಡಿಮೆಯಾಗಿದೆ. ಶಕ್ತಿ ಯೋಜನೆಯಿಂದ ತೀರ್ಥಕ್ಷೇತ್ರಗಳಿಗೆ ಉಚಿತವಾಗಿ ಪ್ರಯಾಣಿಸಲು ಸಾಧ್ಯವಾಗಿದೆ. ಗೃಹಲಕ್ಷ್ಮಿ ಹಣದಿಂದ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹಾಗೂ ಸ್ವಯಂ ಉದ್ಯೋಗ ಆರಂಭಿಸಲು ನೆರವಾಗಿದೆ. ಕೆಲವರು ಈ ಹಣದಿಂದ ಹಸು ಖರೀದಿಸಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿರುವುದಾಗಿ ತಿಳಿಸಿದರು.
342 ನೂತನ ಗ್ಯಾರಂಟಿ ಸಮಿತಿ ಸದಸ್ಯರ ನೇಮಕ
ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ತಲಾ ಆರು ಸದಸ್ಯರನ್ನು ಒಳಗೊಂಡ ಗ್ಯಾರಂಟಿ ಸಮಿತಿಗಳನ್ನು ರಚಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ. ಇದರ ಅನ್ವಯ ಕೆ.ಆರ್. ಪೇಟೆ ತಾಲೂಕಿನ 34 ಗ್ರಾಮ ಪಂಚಾಯಿತಿಗಳು ಹಾಗೂ 23 ವಾರ್ಡ್ಗಳಲ್ಲಿ ಒಟ್ಟು 342 ನೂತನ ಗ್ಯಾರಂಟಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಆದೇಶ ಪತ್ರ ವಿತರಿಸಲಾಗುವುದು ಎಂದು ದಿನೇಶ್ ಗೂಳಿಗೌಡ ತಿಳಿಸಿದರು.
ಸಭೆಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ. ಕುಮಾರ್, ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ ಕೆ., ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾದ ಐಚನಹಳ್ಳಿ ಶಿವಣ್ಣ, ಸೋಮನಹಳ್ಳಿ ರಾಜೇಂದ್ರ, ಜಿಲ್ಲಾ ಸಮಿತಿ ಸದಸ್ಯರಾದ ವೀಣಾ ಶಂಕರ್, ಮಳವಳ್ಳಿ ಮಹಾದೇಶ್, ತಾಲೂಕು ಪಂಚಾಯಿತಿ ಲೆಕ್ಕಾಧಿಕಾರಿ ಶಂಕರ್ ಸೇರಿದಂತೆ ತಾಲೂಕು ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
