ಬೆಂಗಳೂರು: ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರಲ್ಲಿ 89 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ವರ್ಗೀಕರಿಸಲಾಗಿದೆ.
ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಗುರುವಾರ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ರಾಜ್ಯವು ಪ್ರಸಕ್ತ ಸಾಲಿನಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, 1976ರ ನಂತರ ಇದೇ ಮೊದಲ ಬಾರಿಗೆ ಇಂತಹ ಭೀಕರ ಬರಗಾಲ ಎದುರಾಗಿದೆ. ಈ ಹಿನ್ನೆಲೆಯಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.
ಶೇ.30ರಷ್ಟು ಮಳೆ ಕೊರತೆ
ಜೂನ್ 1ರಿಂದ ಆಗಸ್ಟ್ 26ರವರೆಗಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ವಾಡಿಕೆಯಂತೆ 666 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 465 ಮಿ.ಮೀ. ಮಳೆಯಾಗಿದ್ದು, ಒಟ್ಟಾರೆ ಶೇ.30ರಷ್ಟು ಮಳೆ ಕೊರತೆ ಉಂಟಾಗಿದೆ.
ಪ್ರದೇಶವಾರು ಮಳೆ ಕೊರತೆ ಹೀಗಿದೆ:
- ದಕ್ಷಿಣ ಒಳನಾಡಿನಲ್ಲಿ ಶೇ.41
- ಮಲೆನಾಡಿನಲ್ಲಿ ಶೇ.35
- ಉತ್ತರ ಒಳನಾಡಿನಲ್ಲಿ ಶೇ.31
- ಕರಾವಳಿಯಲ್ಲಿ ಶೇ.24
ರಾಜ್ಯದ ಒಟ್ಟು 29 ಜಿಲ್ಲೆಗಳ 190 ತಾಲೂಕುಗಳು ಮಳೆ ಕೊರತೆಯ ವ್ಯಾಪ್ತಿಯಲ್ಲಿದ್ದು, 134 ತಾಲೂಕುಗಳು ಸತತ 3ರಿಂದ 4 ವಾರಗಳ ಕಾಲ ಒಣಹವೆಯನ್ನು ಎದುರಿಸಿವೆ ಎಂದು ಮಾಹಿತಿ ನೀಡಿದರು.
101 ತಾಲೂಕುಗಳು ಬರಪೀಡಿತ
ಕೇಂದ್ರ ಸರ್ಕಾರದ ಬರ ಕೈಪಿಡಿ-2020ರ ಮಾರ್ಗಸೂಚಿಯಂತೆ ‘ಟ್ರಿಗರ್-1’ ಅಡಿಯಲ್ಲಿ 134 ತಾಲೂಕುಗಳು ಬರ ಪರಿಸ್ಥಿತಿ ಘೋಷಣೆಗೆ ಅರ್ಹತೆ ಪಡೆದಿದ್ದವು. ನಂತರ ಬೆಳೆಗಳ ಸ್ಥಿತಿಗತಿ, ಮಣ್ಣಿನ ತೇವಾಂಶ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ‘ಗ್ರೌಂಡ್ ಟ್ರೂಥಿಂಗ್’ ನಡೆಸಲಾಗಿದೆ.
ಈ ಪರಿಶೀಲನೆಯ ಬಳಿಕ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇದರಲ್ಲಿ 89 ತಾಲೂಕುಗಳು ತೀವ್ರ ಬರ ಹಾಗೂ 12 ತಾಲೂಕುಗಳು ಸಾಧಾರಣ ಬರದ ವ್ಯಾಪ್ತಿಯಲ್ಲಿವೆ. ಉಳಿದ 32 ತಾಲೂಕುಗಳ ಸಮೀಕ್ಷೆ ಪ್ರಗತಿಯಲ್ಲಿದೆ.
ಹಾಸನ ಜಿಲ್ಲೆಯ 5 ತಾಲೂಕುಗಳು ಬರಪೀಡಿತ
ಹಾಸನ ಜಿಲ್ಲೆಯ ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ ಹಾಗೂ ಹೊಳೆನರಸೀಪುರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.
ರೈತರಿಗೆ ವಿಶೇಷ ಅವಕಾಶ
ಮಳೆಯಿಲ್ಲದೆ ಬಿತ್ತನೆ ಮಾಡಲು ಸಾಧ್ಯವಾಗದ ರೈತರಿಗೂ ಬೆಳೆ ವಿಮೆ ಯೋಜನೆಯಡಿ ‘ಬಿತ್ತನೆ ತಡೆ’ ವಿಶೇಷ ಅವಕಾಶದಡಿ ಪರಿಹಾರ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31ರವರೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಕೇಂದ್ರಕ್ಕೆ ಶೀಘ್ರ ಮನವಿ
ಬರಪೀಡಿತ ತಾಲೂಕುಗಳಲ್ಲಿ ಎಸ್ಡಿಆರ್ಎಫ್ ನಿಯಮಾವಳಿಯಂತೆ ಕುಡಿಯುವ ನೀರಿನ ವ್ಯವಸ್ಥೆಗೆ ವೆಚ್ಚ ಮಾಡಲು ಅವಕಾಶವಿದೆ. ಬೆಳೆ ಹಾನಿಗೆ ಪರಿಹಾರ ಪಡೆಯಲು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಮುಂದಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ನೀರಿನ ಸೌಲಭ್ಯವಿರುವ ರೈತರು ಮೂಕಪ್ರಾಣಿಗಳ ಹಿತದೃಷ್ಟಿಯಿಂದ ಮೇವು ಬೆಳೆಯುವಂತೆಯೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಮನವಿ ಮಾಡಿದ್ದಾರೆ.
ರಾಜ್ಯದ ಇತರೆ ಬರಪೀಡಿತ ತಾಲೂಕುಗಳಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಹನೂರು, ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮೈಸೂರು, ನಂಜನಗೂಡು, ಟಿ. ನರಸೀಪುರ, ಸರಗೂರು, ಸಾಲಿಗ್ರಾಮ, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಕೊಪ್ಪ, ನರಸಿಂಹರಾಜಪುರ, ತರೀಕೆರೆ ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕುಗಳು ಸೇರಿವೆ.
