ಇಂದಿಗೆ ನಮ್ಮ ಜನ್ಮ ಸುಮಾರು ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಆಗಿರಬಹುದು. ಆಗ ಆದಂತ ಬಲವಾದ ಸ್ಪೋಟದಿಂದ ಭೂಮಿ ಆಗಾಧವಾದ ಬ್ರಹ್ಮಾಂಡದಲ್ಲಿ ಸೂಕ್ಷ್ಮ ಧೂಳಾಗಿ ಹಾರಿ ಬಂದು ತನ್ನ ಕಕ್ಷೆಯನ್ನು ಸೇರಿತ್ತು. ಅಲ್ಲಿಂದ ತರ ತರಹದ ಕ್ರಮ ಮಾರ್ಪಾಟು ಮತ್ತು ತೀಕ್ಷ್ಣ ಸಂಯೋಜನೆಗಳಿಂದ ಜೀವಿಗಳು ಮತ್ತು ಸಸ್ತಾನಿಗಳು ಭೂಮಿಯ ಮೇಲೆ ನೆಲೆ ಕಂಡುಕೊಂಡವು. ಈ ಕ್ರಿಯಾಶೀಲತೆಯನ್ನು ವಿಕಸನ ಅಥವ ವಿಕಾಸತೆ ಎಂದು ಹೇಳುತ್ತಾರೆ.
ಅಪಾರ ವರ್ಷಗಳ ಅಲ್ಪ ಸಮಯದಲ್ಲಿ ಜೀವಿಗಳ ವಿಕಸತೆಗಳು ಸಿಡಿದಿದ್ದಾವೆ. ಈಗ ಹತ್ತು ಸಾವಿರ ವರ್ಷಗಳಲ್ಲಿ ಮಾನವ, ಪ್ರಾಣಿಗಳು (ಅದರಲ್ಲೂ ಸಾಕು ಪ್ರಾಣಿಗಳು), ಜಲಚರಗಳು, ಕೀಟಗಳು, ವೈರಸ್ ಮತ್ತು ಬ್ಯಾಕ್ಟೀರಿಯ, ಮರ, ಗಿಡ ಇತ್ಯಾದಿಗಳ ವಿಕಾಸತೆ ಕಂಡು ಕೇಳದಂತೆ ದ್ವಿಗುಣ ಅಥವ ತ್ರಿಗುಣದಂತೆ ಮಾರ್ಪಟ್ಟಿದ್ದಾವೆ.ಆದರೆ ಅಂದು ವಿಕಾಸವಾದಂತ ಮನುಷ್ಯನಿಗೆ ಭಯ ಹೋಗಿಲಿಲ್ಲ. ಭಯದಿಂದ ಗುಂಪಾದವು. ಗುಂಪುಗಳು ಪಂಗಡಗಳಾದವು, ಪಾಳೇಗಾರರು ಹುಟ್ಟಿಕೊಂಡರು, ಗಲಾಟೆ ಘರ್ಷಣೆಗಳು ನೆಡೆದವು, ಪಾಳೇಗಾರಿಕೆ ಇಮ್ಮಡಿಸಿತು, ರಾಜ್ಯಗಳಾದವು, ರಾಜರು ಹುಟ್ಟಿಕೊಂಡರು, ಜನರನ್ನು ಸೆಳೆಯಲು ಧರ್ಮಗಳು ಬಂದವು, ಧರ್ಮಗಳೆ ಶ್ರೇಷ್ಠವೆಂಬ ವಾದಗಳಿಗೆ ಚಕ್ರಾಧಿಪತಿಗಳು ಹುಟ್ಟಿಕೊಂಡರು.
ಚಕ್ರವರ್ತಗಳಿಂದ ಮಹಾ ಯುದ್ಧಗಳೇ ನೆಡೆದುಹೋದವು, ಕೋಟಿ ಕೋಟ್ಯಾಂತರ ಮಂದಿ ಹತರಾದರು. ಇಲ್ಲಿಗೆ ಎಲ್ಲವೂ ಸರಿಹೋಯಿತೇ? ಇಲ್ಲ, ಭಕ್ತಿ ಹೆಚ್ಚಾಯಿತು, ಭಕ್ತಿಯಿಂದ ಪರಾಕಾಷ್ಠೆ ಹೆಚ್ಚಾಯಿತು, ಇದರಿಂದ ಉನ್ಮಾದ ತುದಿ ತಲುಪಿತು, ಧರ್ಮ – ಮತ – ಜಾತಿ ಹೀಗೆ ವಿಭಜನೆಗಳಾದವು, ಮನಸ್ಸುಗಳು ತುಂಡಾದವು, ಮತ್ತೊಮ್ಮೆ ಭಯ ಎಲ್ಲರಲ್ಲೂ ಆವರಿಸಿದೆ. ಭಾವನೆಗಳು ಮುದುಡುತ್ತಿವೆ. ಮತ್ತೆ ವಿಕಾಸತೆಯ ಕೊರತೆ ಎದ್ದು ಕಾಣುತ್ತಿದೆ. ಈ ಭಯಕ್ಕೆ ಪ್ರಪಂಚದ ವ್ಯವಸ್ಥೆ ತುಪ್ಪ ಸುರಿಯುತ್ತಿದೆ. ಕೊನೆಯದಾಗಿ ಮಾನವ ಧರ್ಮ ನಮ್ಮಿಂದ ಬಹು ದೂರ ಸರಿಯುತ್ತಿದೆ.
ಸಂಸ್ಕೃತ ಪದ “ತಂತ್ರ” ವನ್ನು ಬಿಡಿಸಿದಾಗ “ತನ್”, ಆತ್ಮ ಮತ್ತು “ತ್ರಾ” ಹಿಗ್ಗಿಸು ಅಥವ “ಮನಸ್ಸನ್ನು ದೊಡ್ಡದಾಗಿಸು” ಎನ್ನುವ ಅರ್ಥಗಳು ಓದಲು ಸಿಗುವುದು. ಇಪ್ಪತ್ತಂದೊನೇ ಶತಮಾನದಲ್ಲಿ ತಂತ್ರಜ್ಞಾನ ಹಿಗ್ಗುತ್ತಿದೆ ಆದರೆ ಮನಸ್ಸುಗಳು ಕುಗ್ಗುತ್ತಿದ್ದಾವೆ. ಎಂತಾ ವಿಪರ್ಯಾಸ ಅಲ್ಲವೆ. ಮನಸ್ಸನ್ನು ಹಿಗ್ಗಿಸಬೇಕಾದರೆ ಅವುಗಳ ಉಪಕರಣಗಳು ಯಾವುದು? ಈ ಉಪಕರಣಗಳನ್ನು ಪರಿಚಯಿಸುವ ಮುನ್ನ ನಮ್ಮ ಭಾರತದಲ್ಲಿ ಎಂಟನೇ ಶತಮಾನದಲ್ಲಿ ಭಗವಾನ್ ಬುದ್ಧರ ಅನುಯಾಯಿ ಭಿಕ್ಷು ಮತ್ತು ವಿದ್ವಾಂಸ “ಸಾರಾಹ” ವಾಸಿಸುತ್ತಿದ್ದರು.

ಅರಬಿಯ ಭಾಷೆಯಲ್ಲಿ ಈ ಹೆಸರಿನ ಅರ್ಥ “ಸತ್ಯ ನಿಷ್ಠೆ”. ಸಂಸ್ಕೃತದಲ್ಲಿ ಬರುವ ಈ ಪದದ ಅರ್ಥ “ಒಬ್ಬ ವ್ಯಕ್ತಿ ಹರಿತವಾದ ಭರ್ಜಿ ಇಟ್ಟಿಕೊಂಡವನು” ಎಂದು. ಅಂದರೆ ಈ ವಿದ್ವಾಂಸರು ಭರ್ಜಿಯನ್ನು ಹಿಡಿದು ಮನುಷ್ಯರ ನಕಾರಾತ್ಮಕ ಕವಚವನ್ನು ತಿವಿದು ಸಕಾರಾತ್ಮ ಪ್ರಪಂಚದಲ್ಲಿ ಅವುಗಳನ್ನು ಅರಳಿಸುತ್ತಿದ್ದರು ಎಂದು. ಭಗವಾನ್ ಬುದ್ಧರ ಈ ಅನುಯಾಯಿ ಯಾರನ್ನು ತಿವಿಯುತ್ತಿರಲಿಲ್ಲ, ಮಾನವ, ಭೌತಿಕ ಜಗತ್ತಿನಲ್ಲಿ ಬಂಧಿಯಾಗಿ ಬಿಟ್ಟಿರುತ್ತಾನೆ. ಈ ಬಂಧನದಿಂದ ಹೊರಗೆ ತರುವ ಪ್ರಯತ್ನ ಈ ಭಿಕ್ಷುರವರ ವಾದ ಮತ್ತು ಸಿದ್ದಾಂತವಾಗಿತ್ತು. ಸತ್ಯಾಸತ್ಯತೆ ಇಂದ ಮಾನವನನ್ನು ಹಿಗ್ಗಿಸುವುದು ಇವರ ಧರ್ಮವಾಗಿತ್ತು.
ತಂತ್ರದ ಮೂಲ ಅರ್ಥ “ಹಿಗ್ಗುವಿಕೆ”, ಕುಗ್ಗುವಿಕೆ ಅಲ್ಲ. ಫ್ರೆಂಚ ದೇಶದ ಹದಿನಾರನೆ ಶತಮಾನದ ಗಣಿತ ಶಾಸ್ತ್ರಜ್ಞ ಮತ್ತು ತರ್ಕ ಶಾಸ್ತ್ರಜ್ಞನಾದ “ರೆನೆ ಡೆಸ್ಕಾರ್ಟೇಸ್” ವಾದ ಏನೆಂದರೆ “ಯಾವುದೇ ಕಾರಣಕ್ಕೂ ಮನಸ್ಸನ್ನು ಯಂತ್ರ ಶಾಸ್ತ್ರದ ಅಡಿ ತರಲು ಸಾಧ್ಯವಿಲ್ಲ” ಎಂದಿದ್ದರು. ಆದರೆ ಬೌದ್ಧ ತತ್ವಶಾಸ್ತ್ರದಲ್ಲಿ ಮನಸ್ಸನ್ನೂ ಸಹ ಯಂತ್ರ ಶಾಸ್ತ್ರದ ಆಡಿ ನೋಡಬಹುದೆಂಬ ವಿವರಣೆಗಳು ಬೌದ್ಧ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.
ಅಂತಹ ಯಂತ್ರೋಪಕರಣಗಳು ಯಾವುವು? ಪರಾನುಭೂತಿ, ಅನುಭೂತಿ ಮತ್ತು ಸಹಾನುಭೂತಿ. ಈ ಮೂರು ಪ್ರಕಾರಗಳೂ ಮಾನವನ ಉದ್ಧೇಶಿತ ಮನಸ್ಸಿಗೆ ಹಿಗ್ಗುವುದೇ ಆಗಿರುತ್ತದೆ. “ಪರಾತ್ಮ“, ಪರಾನುಭವದ ಗ್ರಹಿಕೆ ಮತ್ತು ತನ್ಮಯತೆಯ ಅನುಭವ ಹಾಗು ಇನ್ನೊಬ್ಬರ ಆತ್ಮ ಪ್ರವೇಶದೊಂದಿಗೆ ಭಾವನೆಗಳನ್ನು ಅರಿಯುವ ಆನಂದ ಪ್ರಕ್ರಿಯೆ ಆಗಿರುತ್ತದೆ.
ಯೋಗದ ಪರಾಕಾಷ್ಠೆ “ತಂತ್ರ”. ತಂತ್ರದ ಅರಿವಿದ್ದವನಿಗೆ ಸಂಕಲ್ಪವೇ ದಾರಿದೀಪ. ಇಂತಹ ಅರಿವನ್ನು ಪಡೆಯುವುದು ಸಾಧನಾ ವ್ಯಕ್ತಿಗೆ ಮಾತ್ರ ಸಾಧ್ಯ. ತಂತ್ರದ ಮಾರ್ಗಗಳು ಹಲವಾರು ಇದ್ದು ತಾಂತ್ರಿಕರ ಮಾರ್ಗ ವಾಮಾಚಾರ ಮಾರ್ಗದ ಕಡೆ ವಾಲಿರುವುದು ಶೋಚನೀಯ. ಇಂದು ತಂತ್ರ ಗ್ರಂಥಗಳಲ್ಲಿ ಮಂತ್ರ ಮತ್ತು ಆಚರಣೆಗಳಿಗೆ ಮಾತ್ರ ಸೀಮಿತವಾಗಿವೆ. ತಂತ್ರವೆಂಬ ಧರ್ಮ ಗ್ರಂಥವನ್ನು ಮನೋ ವಿಕಾಸತೆಯ ಕಡೆ ತೆರೆದಿಡುವ ಕಾರ್ಯವಾಗಬೇಕು. ಯಾವುದೇ ಜೀವಿಯನ್ನು ನಾವು ನೋಡಿದರೆ ಆ ಜೀವಿ ಚಲನಾ (ಡೈನಮಿಕ್) ಪ್ರವೃತ್ತಿಯನ್ನು ಹೊಂದಿರುತ್ತದೆ. ಶರೀರವಲ್ಲದೆ ಮನಸ್ಸು ಕೂಡ ಚಲನಾ ಶೀಲ. ಮನಸ್ಸು ಹಾಗು ಶರೀರ ಏನಾದರೂ ನಿಂತರೆ ಅಥವ ತಟಸ್ಥವಾದರೆ ಆ ಸ್ಥಿತಿಯನ್ನು ಮನೋ ವೈದ್ಯ ಗ್ರಂಥಗಳಲ್ಲಿ “ಸ್ಕಿಜೋಫ್ರೇನಿಯ (ಮನೋ ವಿಕಲತೆ) ಹಾಗು ಕೆಟಟೋನಿಯಾ (ಅಸಹಜ ಚಲನೆ)” ಎಂದು ತಿಳಿಸಲಾಗಿದೆ.

“ತಂತ್ರ” ದ ರಸಾನುಭವ ಐಕ್ಯತೆಯ ವಿದ್ಯಮಾನ. ಈ ಸಾರವನ್ನು ಅನುಭೋಗಿಸಬೇಕೇ ಹೊರತು ಕಣ್ಣಿಗೆ ನೋಡಲು ಸಿಗುವುದಿಲ್ಲ. ತಂತ್ರದ ಸೂತ್ರಾಭಾವ ನಮ್ಮ ಅಂತರ ಆತ್ಮಾವಲೋಕನ. ಮಾನವನಿಗೆ ತಾಯಿ ನಿಖರವಾದದ್ದು, ಆದರೆ ತಂದೆ ಯಾರು? ತಂದೆ ತಂತ್ರ ಲೋಕದಲ್ಲಿ “ಪ್ರಜ್ಞೆ ಅಥವ ಅರಿವು” ಅಥವ ಮಹಾ ಶಿವ, ಅದೇ ಮಾತೆ, ಪಾರ್ವತಿ “ಶಕ್ತಿ”. ಶಿವ ಸರ್ವ ವ್ಯಾಪ್ತಿ. ಆದರೆ ಪಾರ್ವತಿ ಆದಿ ಶಕ್ತಿ. ಪ್ರಜ್ಞೆ ಮತ್ತು ಶಕ್ತಿಯ ಪವಿತ್ರವಾದ ಮಿಲನವೇ ಜೀವಕುಲ. ಈ ಸಮೀಕರಣದ ಪ್ರತಿರೂಪವೆ ಯಂತ್ರದ ವಿನ್ಯಾಸ. ಮಧ್ಯದಲ್ಲಿ ಕಂಡುಬರುವ ತ್ರಿಕೋನ ವಲಯ ಮಾನವನ ಸಮುದಾಯದ ಚಿಹ್ನೆ. ಚೌಕಾಕಾರ ಕೋನಗಳು ದಿಕ್ಕುಗಳ ಮೂಲ. ವರ್ತುಲ ರೇಖೆ ಬ್ರಹ್ಮಾಂಡದ ಸಂಕೇತ.
ತನ್ಮಧ್ಯೆ ಯಂತ್ರದಲ್ಲಿ ಕಾಣಬರುವ ಹಲವಾರು ಚಿಹ್ನೆಗಳನ್ನು ಬಿಡಿಸಿದಾಗ “ಮೀನು – ಸಮುದ್ರ, ಹಸು – ಸಂಗೋಪನೆ, ಜಿಂಕೆ ಮತ್ತು ಆನೆ – ಅರಣ್ಯ ಇತ್ಯಾದಿ. ಕೆಲವು ಯಂತ್ರಗಳಲ್ಲಿ ಕುಂಭ ಹಾಗು ಕಳಸ ಕಾಣಬಹುದು. ಇವು ಮನಸ್ಸಿನ ಪೂರ್ಣತೆಯ ಸಂಕೇತ. ಇವುಗಳೆಲ್ಲವನ್ನು ವಿಶ್ಲೇಷಿಸಿದಾಗ ಸಮಾನಾಂತರ ಹೊಂದಾಣಿಕೆ (ಇಂಟರ್ ಕನೆಕ್ಟೆಡ್), ಸಮಾನಾರ್ಥ (ಸೈನೋಂಟ್ರೋಪಿಕ್) ಮತ್ತು ಸಹ ಭಾಗತ್ವ (ಸಿಂಬಯಾಟಿಕ್) ಕಂಡುಬರುವುದು. ಮರ ಗಿಡ ಸಸ್ಯಗಿಳಲ್ಲದೆ ಮನುಷ್ಯ ಇಲ್ಲ. ಮಾನವ ಇಲ್ಲದೆ ಸಾಕು ಪ್ರಾಣಿಗಳು ಮತ್ತು ಸಂಗೋಪನ ಪ್ರಾಣಿಗಳು ಇರುವುದಿಲ್ಲ. ಈ ನಿರೂಪಣಾರ್ಥವೇ “ತಂತ್ರ”. ಇದರ ಮೂಲ, ಮಾನವನ ಯಂತ್ರ ಶಾಸ್ತ್ರ ಮತ್ತು ಮನಸ್ಸಿನ ಮಂತ್ರ ಶಾಸ್ತ್ರ…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] […]
[…] […]