ಗ್ರಂಥಾಲಯದ ಚಾರಿತ್ರಿಕ ಪರಿಕಲ್ಪನೆ ನಗರ ಕೇಂದ್ರಿತವಾದದ್ದು, ರಾಜ ಪ್ರಣೀತವಾದದ್ದಾಗಿತ್ತು. ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು, ಕನ್ನಡ ಪ್ರಾಧ್ಯಾಪಕರು ಡಾ. ಕುಶಾಲ್ ಬರಗೂರು ತಿಳಿಸಿದರು.
ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ, ಹಾಸನ ಜಿಲ್ಲೆ ವತಿಯಿಂದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವು ಡಾ.ಬಿ.ಡಿ.ಕುಮಾರ್, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬಾಗೇಶಪುರ ಗುಡ್ಡದಮನೆ ಇಲ್ಲಿ ಏರ್ಪಡಿಸಿ ಪ್ರಾಸ್ತವಿಕವಾಗಿ ಅವರು ಮಾತನಾಡುತ್ತಿದ್ದರು.
ನಗರದಲ್ಲಿ ಇದ್ದದ್ದನ್ನು ತಮ್ಮ ಮನೆಯಲ್ಲೆ ಗ್ರಂಥಾಲಯ ಮಾಡಿ, ಮನೆಯನ್ನೆ ಜ್ಞಾನಕೇಂದ್ರ ಮಾಡಿ, ರಾಜಗೃಹ ಎಂದು ಹೆಸರಿಟ್ಟ ಪ್ರಥಮ ಜ್ಞಾನಿ. ಆ ದಾರಿಯ ಹಾದಿ ಹಿಡಿದವರು ಡಾ. ಬಿ.ಡಿ.ಕುಮಾರ್ ತಮ್ಮ ಮನೆಯನ್ನು ಹಳ್ಳಿಗಾಡಿನಲ್ಲಿ ಮಾಡಿ ಅದನ್ನು ಸಾಹಿತ್ಯ ಚರ್ಚಾ ಕ್ಷೇತ್ರವನ್ನಾಗಿ ಮಾಡಿರುವರು.

ಕ್ಷೇತ್ರಕಾರ್ಯ ಸಂಶೋಧಕರಾಗಿ ನಾನಾ ಪ್ರಾಚೀನ ಕೃತಿಗಳನ್ನು ಸಂಪಾದಿಸಿ ಸಂಗ್ರಹಿಸಿಟ್ಟಿದ್ದಾರೆ. ಇದು ಕನ್ನಡ ಸಾಹಿತ್ಯ ಸಂಶೋಧಕರಿಗೆ ಆಧಾರ ಮಾಹಿತಿ ಕೇಂದ್ರವಾಗಿದೆ.
ಅಂದು ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಪಾದಿಸಿದಂತೆ, ಹಲಸಂಗಿ ಗೆಳೆಯರು, ಜೀ.ಶಂ.ಪ, ಕ್ಯಾತನಹಳ್ಳಿ ರಾಮಣ್ಣ, ಪಿ.ಕೆ.ರಾಜಶೇಖರ್ ಮುಂತಾದವರು ಜಾನಪದ ಕ್ಷೇತ್ರ ಕಾರ್ಯ ಮಾಡಿದಂತೆ ಕುಮಾರ್ ತಮ್ಮ ಮನೆಯನ್ನು ಮಾಹಿತಿ ಕಣಜ ಮಾಡಿದ್ದಾರೆ. ಇದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಮಾದರಿ ಪ್ರೇರಣಿಯೂ ಹೌದು. ಇಲ್ಲಿ 18,000 ಪುಸ್ತಕ, ಪತ್ರಿಕೆ, ಸಂಚಿಕೆ, ಹಸ್ತಪ್ರತಿ ಇನ್ನಿತರೆ ಸಾಹಿತ್ಯ ಗ್ರಂಥಗಳಿವೆ ಎನ್ನುತ್ತಾರೆ. ಇಂತಹ ಶೋಧನಾ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ.ಮಾನಸ ಮತ್ತು ಅವರ ಜೊತೆಗೂಡಿ ಪ್ರಾಧಿಕಾರ ಸದಸ್ಯರು ಮಾಡುತ್ತಿರುವರು. ಈ ಕಾರ್ಯಕ್ರಮ ಈಗ ರಾಜ್ಯ ಅಷ್ಟೇ ಅಲ್ಲ ಹೊರ ರಾಜ್ಯಗಳಲ್ಲೂ, ಪಾಶ್ಚಿಮಾತ್ಯ ರಾಷ್ಟ್ರಗಳ ಗಮನವನ್ನು ಸೆಳೆದಿದೆ ಎಂದರು.

ಡಾ.ಬಿ.ಡಿ.ಕುಮಾರ್ ಅವರು ಸಂಗ್ರಹಿಸಿ ಕಾಪಾಡಿಟ್ಟಿರುವ ತಾಳೆಗರಿ ಗ್ರಂಥ ರಾಮಾಯಣ ಕಟ್ಟುಗಳ ಕಟ್ಟು ಬಿಚ್ಚಿ ಉದ್ಘಾಟನಾ ಭಾಷಣ ಮಾಡಿದ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಅವರು ತಾವು ಕನ್ನಡ ಪುಸ್ತಕ ಪ್ರಾಧಿಕಾರದ 10ನೇ ಅಧ್ಯಕ್ಷರು. ಮೊದಲನೇ ಅಧ್ಯಕ್ಷರು ಎಲ್.ಎನ್. ಶೇಷಗಿರಿರಾವ್ ಅವರು. ಅಂದಿನಿಂದ ಪ್ರಾಧಿಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ.

ಪುಸ್ತಕ ಪ್ರಕಾಶಕರು, ಮುದ್ರಕರನ್ನು
ಪ್ರೋತ್ಸಾಹಿಸಲು ಪುಸ್ತಕ ಸೊಗಸು ಪ್ರಶಸ್ತಿ, ನಗದು ಬಹುಮಾನ ಯೋಜನೆ ಇದೆ. ಪುಸ್ತಕ ಓದುಗರನ್ನು ಗುರುತಿಸಿ ಪ್ರೋತ್ಸಾಹಿಸಲು ವಲಯವಾರು ನಾಲ್ಕು ಪ್ರಶಸ್ತಿಗಳನ್ನು 25000 ನಗದು ಬಹುಮಾನ ನೀಡಲಾಗುವುದು ಎಂದರು.

ಡಾ. ಬಿ ಡಿ. ಕುಮಾರ್ ಅವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಪುಸ್ತಕದ ಸಂಪಾದಕರು ಹಾಗೂ ಕನ್ನಡ ಪ್ರಾಧ್ಯಾಪಕರು ಡಾ. ಹರೀಶ್ ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರಸೀಕೆರೆ ಕೃತಿ ಪರಿಚಯಿಸಿ ಮಾತನಾಡಿ ಕುಮಾರ್ ಅವರು ಅರಸೀಕೆರೆಯಲ್ಲಿ ಬಹು ಧೀರ್ಘಕಾಲ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿ, ಕಲಾವಿದರಾಗಿ ದೆಹಲಿಯಲ್ಲಿ ಜನಪದ ಕಾರ್ಯಕ್ರಮ ನೀಡಿ ಬಂದಿದ್ದಾರೆ.
ಪ್ರಗತಿಪರ ಕೃಷಿಕರಾಗಿ ಹಳ್ಳಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ, ಇವರ ಜೀವನಶೈಲಿ ಇಂದಿನ ಸಮಾಜಕ್ಕೆ ಮಾದರಿ ಎಂದು ಪ್ರಶಂಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಸಾಹಿತಿ ಗೊರೂರು ಅನಂತರಾಜು ಬಾರೆ ನೆಲದಲ್ಲಿ ಗುಡ್ಡದ ಮನೆ ಮಾಡಿ, ಉತ್ತು ಭಿತ್ತಿ ಹಸನಾದ, ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿರುವ ಪ್ರಗತಿಶೀಲ ಕುಮಾರ್ ಅವರ ತೋಟದ ಮನೆ, ಪ್ರಾಚೀನ ತಾಳೆಗರಿ, ಹಳೆಯ ಬೆಲೆ ಬಾಳುವ ಮೌಲ್ಯಯುತ ಪುಸ್ತಕಗಳ ಸಂಗ್ರಹ ಸಂರಕ್ಷಣೆ ನೋಡುತ್ತಿದ್ದರೆ ಬಂಗಾರದ ಮನುಷ್ಯ ಚಿತ್ರ ನನಗೆ ನೆನಪಾಗುತ್ತದೆ.
ಈ ಗ್ರಂಥಾಲಯವನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಇದು ಕನ್ನಡ ಸಂಶೋಧಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಬೇಕಿದೆ. ಈ ದಿಶೆಯಲ್ಲಿ, ಸಂಘ ಸಂಸ್ಥೆಗಳು ಅವರಿಗೆ ಸಹಕರಿಸಿ ನೆರವಾಗಬೇಕಿದೆ ಎಂದರು.
ಜಿಲ್ಲಾ ಜಾಗೃತ ಸಮಿತಿ ಸದಸ್ಯರು ಡಾ. ಬರಾಳು ಶಿವರಾಮ ಚನ್ನರಾಯಪಟ್ಟಣ, ಸುಂದರೇಶ್ ಡಿ ಉಡುವಾರೆ, ರೈತ ಹೋರಾಟಗಾರರು ಮನೋಹರ್ ಪಾಟೀಲ್, ತಿಪಟೂರು, ಕವಿ ಎನ್.ಎಲ್. ಚನ್ನೇಗೌಡ, ಕೊಬ್ಬರಿ ಕೆತ್ತನೆ ಕಲಾವಿದರು ಅರಸೀಕೆರೆ ಹರೀಶ್ ಕುಮಾರ್, ಹರ್ಷ ಇದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಕುಮಾರ್ ದಂಪತಿಗಳನ್ನು ಶಾಲು ಓದಿಸಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಡಾ.ಬಿ.ಡಿ..ಕುಮಾರ್ ಜನಪದ ಗೀತೆ ಹಾಡಿ ಪ್ರಾರ್ಥಿಸಿದರು.
