2025ರ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್ಗಳ ಅಮೋಘ ಗೆಲುವು ಸಾಧಿಸುವ ಮೂಲಕ 9 ವರ್ಷಗಳ ನಂತರ ಫೈನಲ್ಗೆ ಲಗ್ಗೆಯಿಟ್ಟಿದೆ. ಬ್ಯಾಟಿಂಗ್, ಬೌಲಿಂಗ್ ಎಲ್ಲಾ ವಿಭಾಗದಲ್ಲೂ ಅಮೋಘ ಪ್ರದರ್ಶನ ನೀಡಿರುವ ಆರ್ ಸಿಬಿ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
18 ವರ್ಷಗಳಿಂದ ಆರ್ ಸಿಬಿ ಕಪ್ ಎತ್ತಿಹಿಡಿಯುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್ ಸಿಬಿ ಬೌಲಿಂಗ್ ನೋಡಿದ ಅಭಿಮಾನಿಗಳು ಫೈನಲ್ ಪಂದ್ಯದಲ್ಲಿ ಇದೇ ಪ್ರದರ್ಶನ ನೀಡಿದರೆ ಕಪ್ ಗೆಲ್ಲೋದು ಪಕ್ಕಾ ಎಂದಿದ್ದಾರೆ.
ಆತನಿದ್ದರೆ ಸೋಲೇ ಇಲ್ಲ!
ಕ್ವಾಲಿಫೈಯರ್ 1 ಪಂದ್ಯಕ್ಕೆ ಮುನ್ನ ಆರ್ ಸಿಬಿ ಸತತ ಮೂರು ಪಂದ್ಯಗಳಲ್ಲಿ 200ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟಿತ್ತು. ಆದರೆ ಕ್ವಾಲಿಫೈಯರ್ 1 ಪಂದ್ಯದಲ್ಲಿ ಜೋಶ್ ಹೇಜಲ್ವುಡ್ ವಾಪಸ್ ಬರುತ್ತಿದ್ದಂತೆ ತಂಡದ ಬೌಲಿಂಗ್ ಮಾರಕವಾಗಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ಅನ್ನು 101 ರನ್ಗಳಿಗೆ ಆಲೌಟ್ ಮಾಡಿ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್ ತಲುಪಿದೆ.
ಅಭಿಮಾನಿಗಳು ಈ ಬಾರಿ ಆರ್ ಸಿಬಿ ಕಪ್ ಗೆಲ್ಲುತ್ತದೆ ಎಂದು ನಂಬಲು ಸಾಕಷ್ಟು ಅಂಶಗಳಿವೆ. ಆದರೆ ಅದೆಲ್ಲದಕ್ಕಿಂತ ದೊಡ್ಡ ವಿಚಾರ ಜೋಶ್ ಹೇಜಲ್ವುಡ್. ಜೋಶ್ ಹೇಜಲ್ವುಡ್ ಇದುವರೆಗೂ ಆಡಿರುವ ಯಾವುದೇ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲೂ ಸೋಲು ಕಂಡಿಲ್ಲ.
2012 ರಲ್ಲಿ ಸಿಎಲ್ಟಿ 20 ಪಂದ್ಯಾವಳಿ, 2015ರಲ್ಲಿ ಆಸ್ಟ್ರೇಲಿಯಾ ತಂಡಕ್ಕಾಗಿ ಕ್ರಿಕೆಟ್ ವಿಶ್ವಕಪ್, 2020ರಲ್ಲಿ ಬಿಬಿಎಲ್ ಪಂದ್ಯಾವಳಿ, 2021ರಲ್ಲಿ ಸಿಎಸ್ಕೆ ತಂಡಕ್ಕಾಗಿ ಐಪಿಎಲ್ ಫೈನಲ್, 2021ರಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್, 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಡಿದ್ದು ಈ ಎಲ್ಲಾ ಪಂದ್ಯಗಳಲ್ಲೂ ಅವರು ಆಡಿದ ತಂಡ ಪ್ರಶಸ್ತಿಯನ್ನು ಎತ್ತಿಹಿಡಿದಿದೆ.
ಇದೀಗ ಅವರು ಆಡುತ್ತಿರುವ ಆರ್ ಸಿಬಿ ಫೈನಲ್ಗೆ ಲಗ್ಗೆಯಿಟ್ಟಿದೆ. ಇಡೀ ಆವೃತ್ತಿಯಲ್ಲಿ ಜೋಶ್ ಹೇಜಲ್ವುಡ್ ಅಮೋಘ ಪ್ರದರ್ಶನ ನೀಡಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಅವರು ಕ್ವಾಲಿಫೈಯರ್ 1 ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನು ನೀಡಿದರೆ ಆರ್ ಸಿಬಿ ಗೆಲುವು ಸುಲಭವಾಗಲಿದೆ.
ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು ಆರ್ ಸಿಬಿ ವಿರುದ್ಧ ಫೈನಲ್ನಲ್ಲಿ ಯಾರು ಸೆಣೆಸಲಿದ್ದಾರೆ ಎನ್ನುವುದು ಭಾನುವಾರ ನಿರ್ಧಾರವಾಗಲಿದೆ.
