ಶ್ಲೋಕ – 22
ಏತೈರ್ವಿಮುಕ್ತಃ ಕೌಂತೇಯ ತಮೋದ್ವಾರೈಸ್ತ್ರಿಭಿರ್ನರಃ ।
ಆಚರತ್ಯಾತ್ಮನಃ ಶ್ರೇಯಸ್ತತೋ ಯಾತಿ ಪರಾಂ ಗತಿಮ್ ॥೨೨॥
ಏತೈಃ ವಿಮುಕ್ತಃ ಕೌಂತೇಯ ತಮಃ ದ್ವಾರೈಃ ತ್ರಿಬಿಃ ನರಃ ।
ಆಚರತಿ ಆತ್ಮನಃ ಶ್ರೇಯಃ ತತಃ ಯಾತಿ ಪರಾಂ ಗತಿಮ್ — ಕೌಂತೇಯ, ನರಕದ ಈ ಮೂರು ಬಾಗಿಲುಗಳಿಂದ ಪಾರಾದ ನರನು ತನಗೆ ಒಳಿತಾದ್ದನ್ನು ಮಾಡಬಲ್ಲವನಾಗುತ್ತಾನೆ. ಅದರಿಂದ ಉತ್ತಮಗತಿಯನ್ನೂ ಪಡೆಯುತ್ತಾನೆ.
ನರಕದ ಈ ಮೂರು ಬಾಗಿಲುಗಳಿಂದ ಪಾರಾದ ಮಾನವ ಪುಣ್ಯಾತ್ಮ. ಆತನಿಗೆ ಮೋಕ್ಷದ ದಾರಿ ಸುಗಮವಾಗುತ್ತದೆ. ಆತ ಉತ್ತಮ ಗತಿಯನ್ನು ಪಡೆಯುತ್ತಾನೆ. ಇಲ್ಲಿ ಕೃಷ್ಣ ‘ವಿಮುಕ್ತ’ ಎನ್ನುವ ಪದವನ್ನು ಬಳಸಿದ್ದಾನೆ. ಇದರ ಅರ್ಥ ಎಲ್ಲಾ ಕಾಮನೆಗಳನ್ನೂ ಬಿಡುವುದಲ್ಲ, ನಮ್ಮ ಬದುಕಿಗೆ ಭಾದಕವಾಗಿರುವ ರಾಜಸ ಮತ್ತು ತಾಮಸ ಕಾಮನೆಗಳನ್ನು ಬಿಡುವುದು ಎಂದರ್ಥ. ಉದಾಹರಣೆಗೆ ಭಗವಂತನನ್ನು ಸೇರಬೇಕು ಎನ್ನುವುದೂ ಒಂದು ಕಾಮನೆ. ಇದು ನರಕದ ಬಾಗಿಲಲ್ಲ. ಇದನ್ನು ಬಿಡಬೇಕಾಗಿಲ್ಲ. ಕಾಮ ಇಲ್ಲದೆ ಜೀವನವಿಲ್ಲ. ಆದ್ದರಿಂದ ಇಲ್ಲಿ ನಾವು ಬಿಡಬೇಕಾಗಿರುವುದು ಕೇವಲ ರಾಜಸ ಮತ್ತು ತಾಮಸ ಅಂಶವನ್ನು. ಇದನ್ನು ಸೂಚಿಸುವುದಕ್ಕಾಗಿ ಇಲ್ಲಿ ‘ಮುಕ್ತ’ ಎಂದು ಹೇಳದೆ ‘ವಿ-ಮುಕ್ತ’ ಎಂದು ಹೇಳಲಾಗಿದೆ.
ಇಲ್ಲಿ ‘ಕೌಂತೇಯ’ ಎನ್ನುವ ವಿಶೇಷಣ ಬಳಕೆಯಾಗಿದೆ. ‘ನಾವು ಜ್ಞಾನ ಮಾರ್ಗದಲ್ಲಿ ಸಾಗಬೇಕಾದರೆ ಕುಸ್ಸಿತವಾದ ಈ ಕಾಮ-ಕ್ರೋಧ-ಲೋಭವನ್ನು ತಿರಸ್ಕಾರ ಮಾಡುವ ಕೌಂತೇಯರಾಗಬೇಕು’ ಎನ್ನುವ ಸಂದೇಶ ಈ ವಿಶೇಷಣದ ಹಿಂದಿರುವ ಧ್ವನಿ.
ನಮ್ಮಲ್ಲಿ ಕೆಲವರಿಗೆ ಶಾಸ್ತ್ರದ ವಿಧಿ ವಿಧಾನ ಏಕೆ ಬೇಕು, ಆತ್ಮ ಸಾಕ್ಷಿಯಿಂದ ಬದುಕಿದರೆ ಸಾಲದೇ? ಎನ್ನುವ ಪ್ರಶ್ನೆ ಇದೆ. ಕೃಷ್ಣ ಮುಂದಿನ ಶ್ಲೋಕದಲ್ಲಿ ಶಾಸ್ತ್ರದ ವಿಧಿ-ವಿಧಾನ ಪಾಲನೆಯ ಮಹತ್ವವನ್ನು ವಿವರಿಸುತ್ತಾನೆ
