ಚನ್ನರಾಯಪಟ್ಟಣ: ಪ್ಲಾಸ್ಟೀಕ್ ಮುಕ್ತಗೊಳಿಸುವ ವಿಶ್ವ ಸಂದೇಶಕ್ಕೆ ನಾವೆಲ್ಲರೂ ಕಟ್ಟಿಬದ್ದರಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧಗೊಳಿಸಿ ಪರಿಸರ ರಕ್ಷಣೆಗೆ ನಾವೆಲ್ಲ ಬದ್ಧತೆಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಜೂನ್ 5ರ ವಿಶ್ವ ಪರಿಸರ ದಿನಾಚರಣೆಯನ್ನು ಪುರಸಭೆಯು ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿನ ಕಸ ವಿಲೇವಾರಿ ಘಟಕದಲ್ಲಿ ಆಯೋಜನೆ ಮಾಡಲಾಗಿ, ಘಟಕದಲ್ಲಿ 1 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಪ್ರಕೃತಿ ದೇವರು, ಆರಾಧಿಸಿ ಪೂಜಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು. ಅಭಿವೃದ್ಧಿ ಸಲುವಾಗಿ ತೆರವುಗೊಳಿಸುವ ಮರದ ಬದಲಿಗೆ ಐದು ಗಿಡಗಳನ್ನು ನೆಟ್ಟು ಪ್ರಕೃತಿಗೆ ಕೊಡುಗೆಯಾಗಿ ನೀಡಬೇಕು ಎಂದರು.
ಪುರಸಭೆಯು ಸ್ವಚ್ಛ ಭಾರತ್ ಯೋಜನೆಯಡಿ 78 ಲಕ್ಷ ವೆಚ್ಚದಲ್ಲಿ ತ್ಯಾಜ್ಯವಸ್ತು ಸಂಗ್ರಹ ಶೆಡ್ ನಿರ್ಮಾಣ ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಘಟಕ್ಕೆ 10 ಲಕ್ಷ ರೂ. ವೆಚ್ಚದಲ್ಲಿ ಪೈಪ್ ಲೈನ್ ಅಳವಡಿಕೆ, ಮತ್ತು 15ಲಕ್ಷ ರೂ. ವೆಚ್ಚದಲ್ಲಿ ಕಾವಲುಗಾರನ ಶೆಡ್ ನಿರ್ಮಾಣಕ್ಕೆ ಪೂಜೆ ಮಾಡಲಾಗಿದೆ. 24 ಎಕರೆ ವಿಸ್ತೀರ್ಣದ ತ್ಯಾಜ್ಯ ವಿಲೇವಾರಿ ಘಟಕ ಇಡೀ ಜಿಲ್ಲೆಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪಟ್ಟಣದಿಂದ ನಿತ್ಯ ಸಂಗ್ರಹವಾಗುವ ಕಸವನ್ನ ಬೇರ್ಪಡಿಸಿ ಗೊಬ್ಬರವನ್ನಾಗಿಸಿ ರೈತರಿಗೆ ಪ್ರತಿ ಕೆಜಿಗೆ 2 ರೂ. ನಂತೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ 350ಟನ್ ಗೊಬ್ಬರ ಮಾರಾಟ ಮಾಡಲಾಗಿದೆ. ಪ್ಲಾಸ್ಟಿಕನ್ನು ಯಂತ್ರಗಳ ಸಹಾಯದಿಂದ ಪುಡಿಗೊಳಿಸಿ ಕೃಷಿಪೈಪ್ ತಯಾರಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದರು.

ಪೌರಕಾರ್ಮಿಕರು ಕಾರಣದಿಂದಾಗಿ ಸ್ವಚ್ಛನಗರ ನಿರ್ಮಾಣಗೊಳ್ಳಲು ಸಾಧ್ಯ. ಕಾರ್ಮಿಕರ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ನಗರದ ಆರೋಗ್ಯ ಚೆನ್ನಾಗಿರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಅವರಿಗೆ ಪ್ರತಿ ತಿಂಗಳು ಪುರಸಭೆ ವತಿಯಿಂದ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ ಎಂದರು.
ಅಕ್ಕಪಕ್ಕದ ರೈತರು ತಮ್ಮ ಭೂಮಿಯ ಫಲವತ್ತತೆ ಹೆಚ್ಚಿಸಿಕೊಳ್ಳಲು ಪುರಸಭೆ ಉತ್ಪತ್ತಿಸುವ ಗೊಬ್ಬರವನ್ನು ಖರೀದಿಸುವಂತೆ ಮನವಿ ಮಾಡಿದ ಅವರು, ಪಟ್ಟಣದ ಹೊರವಲಯದಲ್ಲಿ, ರಸ್ತೆ ಅಕ್ಕಪಕ್ಕದಲ್ಲಿ ಕಸ ಸುರಿಯುವವರ ಪತ್ತೆಗಾಗಿ ಸಿಸಿ ಕ್ಯಾಮೇರಾ ಅಳವಡಿಸಿ ತಪಿತಸ್ಥರ ವಿರುದ್ಧ ಕ್ರಿಮಿನಲ್ ದೂರು ದಾಖಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ವೇಗವಾಗಿ ಬೆಳೆಯುತ್ತಿರುವ ಪಟ್ಟಣಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ನಗರಸಭೆಯಾಗಿ ಮೇಲ್ದರ್ಜೆಗೇರಿಸುವಂತೆ ಸಿಎಂ ರವರನ್ನು ನೇರವಾಗಿ ಭೇಟಿ ಮಾಡಿ ಮನವಿ ಮಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪೌರಾಡಳಿತ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯವರನ್ನು ಮನವಿ ಮಾಡಿ , ವಿಷಯವನ್ನು ಕ್ಯಾಬಿನೆಟ್ಗೆ ತರುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಪುರಸಭಾಧ್ಯಕ್ಷ ಸಿ.ಎನ್.ಮೋಹನ್ ಮಾತನಾಡಿ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೇಗೇರಿದ್ದಲ್ಲಿ ಹೆಚ್ಚಿನ ಅನುದಾನ ಲಭ್ಯತೆಯೊಂದಿಗೆ ಜನರ ಅಗತ್ಯತೆ ಪೂರೈಸಲು ಸಾಧ್ಯ. ಮತ್ತು ಅಭಿವೃದ್ಧಿಗೆ ವೇಗ ಬರಲಿದೆ. ಇದಕ್ಕಾಗಿ ಶಾಸಕರು ಶ್ರಮವಹಿಸುತ್ತಿದ್ದಾರೆ. ಪೌರಕಾರ್ಮಿಕರು ವ್ಯಸನಗಳಿಗೆ ದಾಸರಾಗಿ ಬಲಿಯಾಗುವುದು ಬೇಡ. ಕಳೆದೊಂದು ವರ್ಷದಲ್ಲಿ ಮೂವರು ಪೌರಕಾರ್ಮಿಕರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಆರೋಗ್ಯವನ್ನು ಕಾಪಾಡಿಕೊಂಡು ಸರ್ಕಾರದ ಸೌಲಭ್ಯ ಬಳಸಿಕೊಳ್ಳಿ ಎಂದರು.
ಈ ವೇಳೆ ಉಪಾಧ್ಯಕ್ಷೆ ರಾಣಿಕೃಷ್ಣ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಹೆಚ.ಎನ್.ನವೀನ್, ಬನಶಂಕರಿರಘು, ರೇಖಾಅನಿಲ್, ರಾಧಮಂಜಪ್ಪ, ಮಾಜಿ ಉಪಾಧ್ಯಕ್ಷರಾದ ಯೋಗೇಶ್, ಧರಣೇಶ್, ಶ್ರೀಮತಿ ಲಕ್ಷ್ಮಿ, ಪುರಸಭಾ ಸದಸ್ಯರಾದ ಇಲಿಯಾಜ್, ರಾಮಕೃಷ್ಣ,ಕವಿತಾರಾಜು, ಗಣೇಶ್, ನಾಮಿನಿ ಸದಸ್ಯರಾದ ರವಿ, ಪ್ರೇಮ್ ಕುಮಾರ್, ಉಮಾಶಂಕರ್, ಮುಖ್ಯಾಧಿಕಾರಿ ಆರ್.ಯತೀಶಕುಮಾರ್, ಪರಿಸರ ಅಭಿಯಂತರೆ ಕಾವ್ಯ, ಆರೋಗ್ಯ ನಿರೀಕ್ಷರಾದ ಉಮಾ, ಮಂಜುನಾಥ ಸೇರಿದಂತೆ ಇತರರು ಹಾಜರಿದ್ದರು.
- ಮಂಜುನಾಥ್ ಐ ಕೆ.
