ಶುಂಠಿ ಬೆಳೆಗೆ ಬೆಲೆ ಸರಸರನೆ ಏರುತ್ತಿತ್ತು. ನಾನೂರ ಐವತ್ತು ರೂಪಾಯಿ ಇದ್ದದ್ದು ಒಂದೇ ವಾರದೊಳಗೆ ಆರುನೂರ ಐವತ್ತು ರೂಪಾಯಿಗೆ ಏರಿತ್ತು. ಅನೇಕ ಕಡೆ ಕೊಳೆರೋಗ ಕಾಣಿಸಿಕೊಂಡು, ಹೆಂಡತಿಯ ತಾಳಿಯನ್ನು ಅಡವಿಟ್ಟು ಶುಂಠಿ ಬೆಳೆದವರು ಮನೆಯ ಕಡೆ ತಲೆ ಹಾಕುವುದನ್ನೇ ಬಿಟ್ಟು ಗದ್ದೆಯಲ್ಲಿದ್ದ ಗುಡಾರಗಳಲ್ಲಿ ಕಾಲ ಕಳೆಯತೊಡಗಿದರು. ಹೊರಗಡೆ ಕೈ ಸಾಲ ಮಾಡಿಕೊಂಡವರು ಮನೆಯಿಂದ ಹೊರಗೆ ಹೋಗುವುದನ್ನೇ ಕಡಿಮೆ ಮಾಡಿದರು. ಬ್ಯಾಂಕಿನ ಹೆಸರು ಹೇಳಿದರೆ ಮಿಡುಕಿಬೀಳುವವರ ಸಂಖ್ಯೆಯೂ ಏನೂ ಕಡಿಮೆ ಇರಲಿಲ್ಲ.
ಯಾವ ಗದ್ದೆ ಬಯಲಿಗೆ ಹೋದರೂ ಚಿತ್ರವಿಚಿತ್ರ ಔಷಧಿಗಳ ವಾಸನೆ ಮೂಗಿಗೆ ಅಡರುತ್ತಿತ್ತು. ಉಳಿದಷ್ಟಾದರೂ ಉಳಿಯಲಿ ಎಂದು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದವರಿಗೂ ಯಾಕೋ ತಮ್ಮ ಪ್ರಯತ್ನಗಳೆಲ್ಲ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅನಿಸಿ ಮಂಕಾಗತೊಡಗಿದರು. ‘ನಾನೆರಡು ಎಕರೆ, ನಾನು ನಾಲ್ಕು ಎಕರೆ’ ಎಂದು ಶುರುವಿನಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರೆಲ್ಲ ಈಗ ‘ಶುಂಠಿ ಬೆಳೆಯುತ್ತಿದ್ದೇವೆ’ ಎಂದು ಹೇಳಿಕೊಳ್ಳಲು ಹಿಂಜರಿಯತೊಡಗಿದರು. ರೈತರ ಉತ್ಸಾಹ ಮತ್ತು ವೇಗವನ್ನು ಕಂಡು ಕೇಳಿದಷ್ಟು ಸಾಲ ಕೊಟ್ಟ ಬೀಜ, ಗೊಬ್ಬರ, ಔಷಧಿಗಳ ವ್ಯಾಪಾರಿಗಳೆಲ್ಲ ಈಗ ತಳಮಳಿಸತೊಡಗಿದರು. ದಿನಾ ಅದಕ್ಕೆ, ಇದಕ್ಕೆ ಎಂದು ಪೇಟೆಗೆ ಬರುತ್ತಿದ್ದ ರೈತರು ಕ್ರಮೇಣ ಕಣ್ಮರೆಯಾಗತೊಡಗಿದರು. ಸಾಂಪ್ರದಾಯಿಕ ಕಾಫಿ, ಏಲಕ್ಕಿ, ಅಡಿಕೆ, ಭತ್ತ, ಬಾಳೆ ಎಲ್ಲವನ್ನೂ ಬಿಟ್ಟು ಶುಂಠಿ ಎಂಬ ಮಾಯಾಂಗನೆಯ ಬೆನ್ನು ಹತ್ತಿದ್ದ ಮಲೆನಾಡಿಗರು ಇಂಗು ತಿಂದ ಮಂಗನಂತಾಗಿದ್ದರು. ಐದು ಎಕರೆ ಶುಂಠಿ ಹಾಕಿಸಿದ್ದಾರಂತೆ ಎಂದೇ ಮಗಳನ್ನು ಮದುವೆ ಮಾಡಿಕೊಡಲು ನಿಶ್ಚಯ ಮಾಡಿಕೊಂಡವರು, ಬರುವ ಬೆಳೆಯನ್ನೇ ನಂಬಿಕೊಂಡು ಡೌನ್ ಪೇಮೆಂಟ್ನಲ್ಲಿ ಕಾರು ತಂದವರ ಪಾಡಂತೂ ಹೇಳತೀರದು.
ಮಲೆನಾಡಿನ ಜೀವನಾಡಿಯೇ ಆಗಿದ್ದ ಗದ್ದೆಗಳು ಶುಂಠಿ ಬೆಳೆಯ ದಾಳಿಯಿಂದ ನಿರ್ಜೀವಗೊಳ್ಳತೊಡಗಿದವು. ಹರಿಯುವ ಹಳ್ಳಗಳಲ್ಲಿ ಒಂದೇ ಒಂದು ಏಡಿ, ಕಪ್ಪೆ, ಮೀನು ಇರಲಿ, ಕಡೆಗೆ ಹಾವುಗಳೂ ಹೇಳಹೆಸರಿಲ್ಲದಂತಾದವು. ಹಸಿರು ಪೈರು, ಜುಳುಜುಳು ಹರಿಯುತ್ತಿದ್ದ ನೀರಿನ ವಿಶಿಷ್ಟ ಆಹ್ಲಾದಕರ ಸನ್ನಿವೇಶ ಮಾಯವಾಗಿ, ವಿಷಯುಕ್ತ ಔಷಧಿಗಳ ವಿಪರೀತ ಬಳಕೆಯಿಂದ ಇಡೀ ವಾತಾವರಣವೇ ಮರಣಸದೃಶ ವಾತಾವರಣವಾಗಿ ಪರಿವರ್ತನೆಯಾಗಿತ್ತು. ಎಷ್ಟು ಬಗೆಯ ಔಷಧಿಗಳನ್ನು ಗದ್ದೆಗೆ ಸುರಿದಿದ್ದರೆಂದರೆ, ಅಪ್ಪಿತಪ್ಪಿ ಎಲ್ಲಾದರೂ ಶುಂಠಿ ಉಳಿದಿದ್ದರೆ ಅದನ್ನು ಜಜ್ಜಿ ಹಿಂಡಿದರೆ ಶುಂಠಿ ರಸದ ಬದಲು ಕೀಟನಾಶಕವೇ ಸುರಿಯುತ್ತಿತ್ತೇನೋ?
ಇಂಥ ಪರಿಸ್ಥಿತಿಯಲ್ಲಿ ಸ್ಥಳೀಯರು ಬೆಳೆದಿದ್ದ ಶುಂಠಿಯಲ್ಲಿ ಮುಕ್ಕಾಲು ಪಾಲು ‘ಕೇಡು’ ಎಂದು ಕರೆಯಲ್ಪಡುವ ಕೊಳೆರೋಗಕ್ಕೆ ತುತ್ತಾಗಿ, ಆ ರೈತರೆಲ್ಲ ಲಕ್ವ ಹೊಡೆದವರಂತೆ ಮಗ್ಗುಲಾಗಿ, ಬೆಳಿಗ್ಗೆ ಎದ್ದು ಮನೆಯ ಜಗುಲಿಯ ಎದುರಿನ ಅಂಗಳಕ್ಕೆ ಬರಲೂ ಹಿಂಜರಿಯುತ್ತಿದ್ದರು. ವಿಶೇಷವೆಂದರೆ, ಕೇರಳ ಮೂಲದ ಗುತ್ತಿಗೆ ಬೆಳೆಗಾರರು ಹಾಗೂ ಅವರ ಆಪ್ತರಾಗಿದ್ದ ಕೆಲ ಸ್ಥಳೀಯ ಕೃಷಿಕರು ಮತ್ತು ಕೇರಳದವರೊಂದಿಗೆ ಪಾಲುದಾರರಾಗಿ ಶುಂಠಿ ಬೆಳೆದಿದ್ದವರ ಶುಂಠಿ ಮಾತ್ರ ಯಾವುದೇ ಅನಾಹುತವೇ ಆಗಿಲ್ಲವೆಂಬಂತೆ ನಳನಳಿಸುತ್ತಿದ್ದವು. ಯಾವಾಗ ಬೆಳೆ ವ್ಯಾಪಕವಾಗಿ ನಾಶವಾಗುತ್ತಾ ಬಂತೋ, ಸ್ಥಳೀಯರಿಗೆ ತಿಳಿಯದಿದ್ದ ಔಷಧಿಗಳನ್ನು ಉಪಯೋಗಿಸಿ ಬೆಳೆ ಉಳಿಸಿಕೊಂಡಿದ್ದ ಇವರ ಶುಂಠಿಗೆ ಚಿನ್ನದ ಬೆಲೆ ಬರತೊಡಗಿತು.
ಈ ನಡುವೆ ಕೆಲ ಹುಡುಗರು ತಾವೇ ಸೇರಿಕೊಂಡು ಯಾರದೋ ಗದ್ದೆಯನ್ನು ಗುತ್ತಿಗೆಗೆ ತೆಗೆದುಕೊಂಡು ಶುಂಠಿ ಬೆಳೆದಿದ್ದರು. ಕೆಲ ಕೃಷಿಕರು ಕಣ, ಮನೆಯಂಗಳವನ್ನೇ ಅಗೆದು, ಮಡಿ ಮಾಡಿ ಶುಂಠಿ ನೆಟ್ಟಿದ್ದರು. ಇನ್ನು ಕೆಲವೆಡೆ ಖಾಲಿ ಇದ್ದ ಯಾರದೋ ಜಾಗ, ಈಚಲಹರ, ಪಾಳು ಬಿದ್ದ ಲಂಟಾನದ ಜಾಗವನ್ನೆಲ್ಲ ಸಾಗುವಳಿ ಮಾಡಿ ಕಂಡಕಂಡಲ್ಲೆಲ್ಲ ಶುಂಠಿ ನಾಟಿ ಮಾಡಿದ್ದೇ ಮಾಡಿದ್ದು. ಪರಿಣಾಮವಾಗಿ ವಿಪರೀತ ಮಳೆಯಾದಾಗ ಮೇಲ್ಮಣ್ಣು ತೀವ್ರವಾಗಿ ಕೊಚ್ಚಿಹೋಗಿ, ಹೊಳೆ-ನದಿಗಳ ಪಾತ್ರಗಳು ಹಾಗೂ ಸಮೀಪದ ಜಲಾಶಯಗಳೆಲ್ಲ ಹೂಳಿನಿಂದ ತುಂಬಿಹೋದವು. ‘ಎಲ್ಲಿ ಏನಾದರೇ ನಮಗೇನು? ಒಟ್ಟಾರೆ ದುಡ್ಡಾದರೆ ಸಾಕು’ ಎಂದುಕೊಂಡು ಅಳಿದುಳಿದ ಶುಂಠಿಯನ್ನು ಏನಾದರೂ ಸರ್ಕಸ್ ಮಾಡಿ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರು.
ಗಿಡ ಹಸುರಾಗಿದೆಯಲ್ಲ, ಎಷ್ಟು ಶುಂಠಿ ಇರಬಹುದೆಂದು ಗಿಡವನ್ನು ಹಿಡಿದು ಮೃದುವಾಗಿ ಮೇಲಕ್ಕೆ ಜಗ್ಗಿದರೆ, ಕೊಳೆತು ಹೋಗಿದ್ದ ಬುಡದ ಗಿಡ ಪುಸಕ್ಕನೆ ಕೈಗೇ ಬರುತ್ತಿತ್ತು. ಬುಡದ ಮಣ್ಣನ್ನು ಕೆದಕಿ ನೋಡಿದರೆ, ನೆಂದ ಬೂದಿಯಂಥ ಶುಂಠಿಯ ಗೆಡ್ಡೆ ತಡೆಯಲಸಾಧ್ಯವಾದ ವಾಸನೆಯೊಂದಿಗೆ ಅಣಕಿಸುತ್ತಾ ಗೋಚರಿಸುತ್ತಿತ್ತು. ಇದನ್ನು ನೋಡಿ ಎದೆಯೊಡೆದಂತಾದ ರೈತರು ಪರೀಕ್ಷಿಸುವ ಗೋಜಿಗೆ ಹೋಗುವುದನ್ನೇ ಬಿಟ್ಟರು. ಹಾಕಿದ ಬೀಜದ ದುಡ್ಡಾದರೂ ಬರಲಿ ಎಂದು ಹರಕೆ ಹೊತ್ತು ಕೋಳಿ-ಕುರಿ ಕಡಿದು ಬಲಿ ನೀಡಿದವರೂ ಕಡಿಮೆ ಇರಲಿಲ್ಲ.
ವ್ಯಾಪಾರಿಗಳೇ ಬೆಚ್ಚಿಬೀಳುವಂತೆ ಶುಂಠಿಯ ಬೆಲೆ ತಿಂಗಳೊಳಗೆ ಅರವತ್ತು ಕಿಲೋ ತೂಕದ ಮೂಟೆಗೆ ಒಂದು ಸಾವಿರದ ಐನೂರು ರೂಪಾಯಿಗಳನ್ನು ದಾಟಿ ನಾಗಾಲೋಟದಲ್ಲಿ ಮುಂದೋಡುತ್ತಿತ್ತು. ಇದೇ ಸಮಯದಲ್ಲಿ ಗದ್ದೆಗಳನ್ನು ಗುತ್ತಿಗೆಗೆ ನೀಡಿದ್ದ ಕೆಲ ರೈತರು ದೂರಾಲೋಚನೆ ಶುರುಮಾಡಿದರು. ಕರಾರು ಪತ್ರದಂತೆ ಒಪ್ಪಿಕೊಂಡ ಗುತ್ತಿಗೆ ಹಣದಲ್ಲಿ ಮೂರನೇ ಎರಡರಷ್ಟು ಹಣವನ್ನು ಬೀಜ ನೆಡುವ ಮುಂಚೆಯೇ ಸಂದಾಯ ಮಾಡಿದ್ದವರು; ಶುಂಠಿ ಕಿತ್ತು ಮೂಟೆಗೆ ತುಂಬಿದ ಕೂಡಲೇ ಉಳಿದ ಹಣವನ್ನು ಪಾವತಿಸಬೇಕಿತ್ತು. ನಂತರ ಮಡಿಗಳನ್ನು ಮಾಡಿದ್ದ ಗದ್ದೆಯನ್ನು ಟ್ರ್ಯಾಕ್ಟರ್ನಲ್ಲಿ ಹೂಡಿ ಸಮತಟ್ಟು ಮಾಡಿಕೊಡಬೇಕಿತ್ತು.
ಇದೇ ಸಮಯದಲ್ಲಿ ಮಂಜಯ್ಯ ತನ್ನ ತೋಳ್ಬಲದ ಬುದ್ಧಿ ಪ್ರದರ್ಶಿಸತೊಡಗಿದ. ಒಂದು ದಿನ ಗದ್ದೆಗೆ ಬಂದವನೇ,
“ಮೋಣು ಏ! ಮೋಣು; ನೋಡು ಮಾರಾಯ, ಅಗ್ರಿಮೆಂಟ್ನಂತೆ ಎಕರೆಗೆ ಮೂರು ಸಾವಿರಕ್ಕೆ ಆಗಲ್ಲ, ಹತ್ತು ಸಾವಿರ ಕೊಡಬೇಕು” ಎಂದ.
ಬೆಚ್ಚಿಬಿದ್ದ ಮೋಣು, “ಅಲ್ಲ ಅಣ್ಣ, ಅಗ್ರಿಮೆಂಟ್ ಆಗಿರೋದು ಮೂರು ಸಾವಿರಕ್ಕೆ ಅಲ್ವಾ?” ಎಂದ.
“ನೋಡಾ ಮಾರಾಯ, ಅದು ಅವತ್ತಿನ ರೇಟು; ಈಗ ಮಾರ್ಕೆಟ್ಟೇ ಬೇರೆ. ನೀನು ಎಕರೆಗೆ ಹತ್ತು ಸಾವಿರ ರೂಪಾಯಿ ಕೊಟ್ಟರೆ ಮಾತ್ರ ಶುಂಠಿ ಕೀಳಕ್ಕೆ ಬಿಡ್ತೀನಿ. ಇಲ್ದಿದ್ರೆ ಗೊತ್ತಾಲ್ಲಾ?” ಎಂದ.
ಇನ್ನೇನು ಒಂದು ವಾರದೊಳಗೆ ಶುಂಠಿ ಕೀಳಬೇಕೆಂದುಕೊಂಡಿದ್ದ ಮೋಣುವಿಗೆ ಇದೊಂದು ಆಘಾತವಾಗಿತ್ತು.
“ಅಲ್ಲ ಅಣ್ಣ, ಬೆಲೆ ಚೆನ್ನಾಗಿದೆ ಸರಿ. ನಾವೂ ಸಾಕಷ್ಟು ಹಣ ಸುರಿದಿದ್ದೀವಿ, ರಕ್ತಾನೇ ಬಸಿದಿದ್ದೀವಿ. ಎಕರೆಗೆ ಒಂದು ಸಾವಿರ ಸೇರಿಸಿಕೊಡುತ್ತೇನೆ. ಕಳೆದ ಮೂರು ವರ್ಷಗಳಲ್ಲಿ ನನ್ನ ಮನೆಯೇ ಹಾಳಾಗಿದೆ. ಮನೆಯಲ್ಲಿ ಇದ್ದ ಸಾಮಾನುಗಳನ್ನೆಲ್ಲ ಮಾರಿಕೊಂಡಿದ್ದೇನೆ. ಬದುಕಿದ್ರೆ ಈ ಬಾರಿಯೇ ಬದುಕಬೇಕು. ಅಷ್ಟೆಲ್ಲ ಕೊಡಕ್ಕೆ ಆಗೋಲ್ಲ. ಸ್ವಲ್ಪ ನ್ಯಾಯ ಯೋಚನೆ ಮಾಡ್ರಿ” ಎಂದ.
“ಏಯ್! ಬೋಳಿಮಗನೇ, ನನ್ನ ಹತ್ರಾನೇ ಕಾನೂನು ಮಾತನಾಡುತ್ತೀಯಾ? ಅದೆಂಗೆ ಶುಂಠಿ ಕೀಳುತ್ತೀಯೋ ನೋಡ್ತೀನಿ!” ಎಂದವನೇ ಮಂಜಯ್ಯ ಬಿರಬಿರನೆ ಪೇಟೆಗೆ ಬಂದ.
