ಹಾಸನ- ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಆತ್ಮಸ್ಥೆರ್ಯ ಕುಗ್ಗಿಸುವ ಮತ್ತು ಅವರ ಸಾಮಥ್ರ್ಯವನ್ನು ಪ್ರಶ್ನಿಸುವಂತೆ ಅಮಾನತ್ತು ಆದೇಶ ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ನಗರದ ಹೇಮಾವತಿ ಪ್ರತಿಮೆ ಎದುರು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆಯ ಪ್ರಮುಖ್ ಯಶವಂತ್ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿವೇಚನಾ ರಹಿತ ತೀರ್ಮಾನದಿಂದ ಜರುಗಿದ ಕಾಲ್ತುಳಿತ ಹಾಗೂ ಸಾವು ನೋವುಗಳ ಕುರಿತು ಎಬಿವಿಪಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
18 ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ತಂಡಕ್ಕೆ ಸನ್ಮಾನಿಸಲು ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಎಂ.ಎನ್ ಕರಿಬಸವನಗೌಡ ರವರ ಎಚ್ಚರಿಕೆಯ ನಡುವೆಯೂ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮದ ಆತುರದ ಆಯೋಜನೆ ಹಾಗೂ ವ್ಯವಸ್ಥಿತ ತಯಾರಿ ಇಲ್ಲದೆ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಪರಿಣಾಮ 11ಮಂದಿ ಸಾವಿಗೀಡಾಗಿದ್ದು ಈ ನಾಡಿನ ದುರ್ದೆವ ಎಂದರು.
ಸೌಭಾಗ್ಯಗಳನ್ನರಸಿ ದೌರ್ಭಾಗ್ಯಕ್ಕೀಡಹುದುಮ್ | ಅಭಿಶಾಪ ನರಕುಲಕೆ ಮಂಕುತಿಮ್ಮ ಎನ್ನುವಂತೆ 18 ವರ್ಷಗಳ ನಂತರ ಆರ್ಸಿಬಿ ಟ್ರೋಫಿ ಜಯಿಸಿದ ಉನ್ಮಾದಲಿದ್ದ ಯುವ ಜನತೆ, ಪುಕ್ಕಟ್ಟೆ ಪ್ರಚಾರಪ್ರಿಯ ರಾಜ್ಯ ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ನಿಲುವು, ಲಕ್ಷಾಂತರ ಜನ ಸೇರಬಹುದಾದ ನಿರೀಕ್ಷೆಯಲ್ಲಿದ್ದ ಕಾರ್ಯಕ್ರಮದ ಅಪಾಯಗಳು ಮತ್ತು ಸವಾಲುಗಳ ಬಗೆಗೆ ಅರಿವಿದ್ದು ತೋರಿದ ತಿಳಿಗೇಡಿತನದ ಪರಿಣಾಮ 11 ಯುವಜನರ ಸಾವಾಗಿದೆ.ಮನೆ ಬೆಳಗಬೇಕಿದ್ದ ಕುಡಿಗಳ ಕಳೆದುಕೊಂಡ ಕುಟುಂಬಗಳ ಆಕ್ರಂದನ ರಾಜ್ಯದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ಮಾರ್ಪಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ, ಪೊಲೀಸ್ ಇಲಾಖೆ, ಕೆಎಸ್ಸಿಎ, ಆರ್ಸಿಬಿ ಮ್ಯಾನೇಜೆಂಟ್ ಹಾಗೂ ಜನರ ಅತಿರೇಕದ ನಡವಳಿಕೆ ಸೇರಿದಂತೆ ಹಲವಾರು ಹಂತಗಳಲ್ಲಿ ಲೋಪಗಳಾಗಿದ್ದು ಕಣ್ಣಿಗೆ ಕಾಣುವ ಸತ್ಯ ಈ ಪ್ರಕರಣದ ತೀವ್ರತೆಯನ್ನು ಅರಿತು ರಾಜ್ಯ ಸರ್ಕಾರ ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆ, ನ್ಯಾಯಾಂಗ ತನಿಖೆ, ಸಿಐಡಿ ತನಿಖೆ ಈ ರೀತಿ ಬಹುವಿಧದ ತನಿಖೆಗಳಿಗೆ ಆದೇಶಿಸಿ, ಹಲವು ಪ್ರಾಮಾಣಿಕ ಪೆÇಲೀಸ್ ಅಧಿಕಾರಿಗಳ ತಲೆದಂಡ ಮಾಡಿರುವುದು ಅಕ್ಷಮ್ಯ ಆದರೆ ಈ ಕಾಲ್ತುಳಿತ ಪ್ರಕರಣಕ್ಕೆ ನೇರ ಹೊಣೆಗಾರರಾಗಿರುವ ಅಧಿಕಾರಿಗಳ ಮೇಲೆ ದರ್ಪ ತೋರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ತಾವೇ ಐಪಿಎಲ್ ಟ್ರೋಫಿ ಜೈಸಿದಷ್ಟು ಉಮೇದಿನಲ್ಲಿದ್ದ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಬೇಜವಾಬ್ದಾರಿತನದ ನಡವಳಿಕೆಗಳನ್ನು ಒಪ್ಪಿಕೊಳ್ಳದಿರುವುದು ದುರದೃಷ್ಟಕರ ಎಂದರು.
ಈ ದೇಶದಲ್ಲಿ ಕಳೆದೊಂದು ವರ್ಷದಲ್ಲಿ ಅತ್ಯಂತ ಹೆಚ್ಚು ಜನ ಸಂದಣಿ ಇರುವ ಕಾರ್ಯಕ್ರಮಗಳಲ್ಲಿ ಕಾಲ್ತುಳಿತಕ್ಕೊಳಗಾಗಿ ಈಗಾಗಲೇ ನೂರಾರು ಜನರು ಸಾವನ್ನಪ್ಪಿರುವ ಘಟನೆಗಳು ಉತ್ತರ ಪ್ರದೇಶ, ಗೋವಾ ಹಾಗೂ ತಿರುಪತಿ ಸೇರಿದಂತೆ ಸಾಕಷ್ಟು ಕಡೆ ಉದಾಹರಣೆ ಸಹಿತ ಪ್ರಕರಣಗಳು ಕಣ್ಣ ಮುಂದಿದ್ದರು ಮುಂಜಾಗ್ರತೆ ಕ್ರಮ ವಹಿಸದೆ ಇದ್ದದ್ದು ಆಡಳಿತಗಾರರ ದಿವ್ಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿ ಎಂದು ದೂರಿದರು.
ಇದೇ ಸಂದರ್ಭದಲ್ಲಿ ಈ ಪ್ರಕರಣದ ಸೂಕ್ತ ತನಿಖೆ ನಡೆಸದೆ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಆತ್ಮಸ್ಥೆರ್ಯ ಕುಗ್ಗಿಸುವಂತಹ ಮತ್ತು ಅವರ ಸಾಮಥ್ರ್ಯವನ್ನು ಪ್ರಶ್ನಿಸುವಂತಹ ಅಮಾನತ್ತು ಆದೇಶವನ್ನು ಹಿಂಪಡೆಯಬೇಕೆಂದು ಹಾಗೂ ಈ ದುರ್ಘಟನೆಯ ನೈತಿಕ ಹೊಣೆಗಾರಿಕೆಯಿಂದ ನುಣಚಿಕೊಳ್ಳದಂತೆ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಉತ್ತರದಾಯಿತ್ವದ ಅರಿವು ಮೂಡಿಸಬೇಕೆಂದು ವಿದ್ಯಾರ್ಥಿ ಪರಿಷತ್ ಒತ್ತಾಯಿಸುತ್ತದೆ ಎಂದರು.
ಎಬಿವಿಪಿ ಮುಖಂಡರಾದ ಶ್ರೀನಿವಾಸ್ ಸಾವರ್ಕರ್, ಲೇಪಾಕ್ಷ ಇತರರು ಉಪಸ್ಥಿತರಿದ್ದರು.
