ಶ್ಲೋಕ – 19
ನಾ[S]ನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾSನುಪಶ್ಯತಿ ।
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋSಧಿಗಚ್ಛತಿ ॥೧೯॥
ನ ಅನ್ಯಮ್ ಗುಣೇಭ್ಯಃ ಕರ್ತಾರಮ್ ಯದಾ ದ್ರಷ್ಟಾ ಅನುಪಶ್ಯತಿ ।
ಗುಣೇಭ್ಯಃ ಚ ಪರಮ್ ವೇತ್ತಿ ಮತ್ ಭಾವಮ್ ಸಃ ಅಧಿಗಚ್ಛತಿ – ಈ ಎಲ್ಲಾ ಪರಿಣಾಮಗಳಿಗೆ ತ್ರಿಗುಣಗಳಲ್ಲದೆ ಬೇರೆ ಕಾರಣವಿಲ್ಲ ಎಂದು ಕಂಡುಕೊಂಡವನು[ತ್ರಿಗುಣಗಳಿಂದ ಭಿನ್ನನಾದ ಭಗವಂತನೆ ಎಲ್ಲದರ ಮೂಲ ಕಾರಣ ಎಂದು ತಿಳಿದವನು] ಮತ್ತು ಗುಣಗಳಿಂದ ಅತೀತನೆಂದು ಭಗವಂತನನ್ನು ತಿಳಿದವನು[ನಿಜವಾದ ಮನುಷ್ಯ] ನನ್ನಲ್ಲೆ ನೆಲೆಸುತ್ತಾನೆ.
ನಮ್ಮ ಜೀವನದಲ್ಲಿ ಏನೇನು ನಡೆಯುತ್ತದೆ ಅದು ಈ ಮೂರು ಗುಣಗಳ ಪ್ರಕ್ರಿಯೆ. ನಾವು ನಾವಾಗಿ ಏನೂ ಮಾಡುವುದಿಲ್ಲ. ಬದಲಿಗೆ ಎಲ್ಲವೂ ತ್ರಿಗುಣಗಳ ಪ್ರಭಾವದಿಂದ ನಡೆಯುತ್ತಿರುತ್ತದೆ. ಪ್ರಕೃತಿಯಿಂದ ಬಂದು, ನಮ್ಮ ಸ್ವರೂಪವನ್ನು ಮುಚ್ಚಿ ಅವು ಕೆಲಸ ಮಾಡುತ್ತಿರುತ್ತವೆ. ಹಾಗಾಗಿ ಒಬ್ಬ ವ್ಯಕ್ತಿಯ ಮೇಲ್ನೋಟದ ವರ್ತನೆಯಿಂದ ಆತನ ನಿಜ ಸ್ವಭಾವವನ್ನು ಅರಿಯುವುದು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ನಾವು ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ನಿರ್ವೀಕಾರರಾಗಿ ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು.
ಸತ್ವಕ್ಕೆ ಶ್ರುತಿಗೂಡಿದ ಮನಸ್ಸು ಸತ್ವಕ್ಕೆ ಅನುಗುಣವಾದ ವಿಷಯವನ್ನೇ ಗ್ರಹಿಸುತ್ತದೆ. ಅಂಥಹ ವ್ಯಕ್ತಿ ಎಂದೂ ‘ನಾನು ಮಾಡಿದೆ’ ಎಂದು ಭ್ರಮೆ ಪಡುವುದಿಲ್ಲ. ಇಲ್ಲಿ ಗುಣಗಳಿಗಿಂತ ಬೇರೆಯಾದ ಕರ್ತಾ ಇಲ್ಲ ಎಂದಿದ್ದಾರೆ. ಜಡಕ್ಕೆ ಎಂದೂ ಕರ್ತಾ ಎನ್ನುವುದಿಲ್ಲ. ಆದ್ದರಿಂದ ಗುಣ ಅಂದರೆ ಕೇವಲ ಜಡವಾದ ಗುಣವಲ್ಲ. ಅದಕ್ಕೆ ಅಭಿಮಾನಿಯಾದ ಚೈತನ್ಯವನ್ನು ಗುರುತಿಸು ಎನ್ನುವ ಸಂದೇಶ ಈ ಶ್ಲೋಕದಲ್ಲಿದೆ.[ಶ್ಲೋಕ ೧೭ರಲ್ಲಿ ನಾವು ಈ ಬಗ್ಗೆ ಚರ್ಚಿಸಿದ್ದೇವೆ]. ಕರ್ತೃತ್ವದಲ್ಲಿ ಅನೇಕ ವಿಧ. ಇಚ್ಛಾಪೂರ್ವಕ ಕೃತಿ ಎಲ್ಲಿದೆಯೋ ಅದು ಕರ್ತಾ. ಇದು ಇರುವುದು ಚೇತನಕ್ಕೆ ಮಾತ್ರ. ಆದರೆ ನಿಜವಾದ ಕರ್ತೃತ್ವ ‘ಸ್ವತಂತ್ರ ಇಚ್ಛಾಪೂರ್ವಕ ಕೃತಿ’. ಇದು ಇರುವುದು ಕೇವಲ ಭಗವಂತನಲ್ಲಿ. ‘ನಾಹಂ ಕರ್ತಾ ಹರಿಃ ಕರ್ತಾ’ ಎನ್ನುವ ಪ್ರಸಿದ್ಧವಾದ ಮಾತು ನಮಗೆ ತಿಳಿದೇ ಇದೆ. ಇದನ್ನು ಮೊಕ್ಷಧರ್ಮಪರ್ವದಲ್ಲಿ ಈ ರೀತಿ ಹೇಳಿದ್ದಾರೆ:
ನಾಹಂ ಕರ್ತಾ ನ ಕರ್ತಾ ತ್ವಂ ಕರ್ತಾಯಸ್ತು ಸದಾ ಪ್ರಭುಃ ||
ಸೋSಯಂ ಪಚತಿ ಕಾಲೋ ಮಾಮ್ ವೃಕ್ಷೇ ಫಲಂ ಇವಾಗತಂ || ೧೨-೨೨೦-೮೪ ||
“ನೀನೂ ಮಾಡಿಲ್ಲ, ನಾನೂ ಮಾಡಿಲ್ಲ- ‘ಅವನು’ ನಮ್ಮಿಂದ ಮಾಡಿಸಿದ”. ಈ ಎಚ್ಚರ ಇದ್ದಾಗ ನಮಗೆ ಕರ್ತೃತ್ವದ ಅಹಂಕಾರ ಬರಲು ಸಾಧ್ಯವಿಲ್ಲ. ಇದರಿಂದ ದ್ವೇಷವಿಲ್ಲ, ಮಮಕಾರವಿಲ್ಲ. ‘ನಾನು ಮಾಡಿದೆ , ನನ್ನಿಂದಾಯ್ತು’ ಎನ್ನುವುದು ಕೇವಲ ಭ್ರಮೆ. ಈ ಜಗತ್ತಿನಲ್ಲಿ ಏನೇ ನಡೆದರೂ ಅದು ಈ ಮೂರು ಗುಣಗಳ ಪ್ರಭಾವದಿಂದ ನಡೆದಿದೆ. ಅದನ್ನು ಮೀರಿ ನನ್ನಷ್ಟಕ್ಕೆ ನಾನು ಏನೂ ಮಾಡಿಲ್ಲ. ಈ ಅರಿವು ನಮಗೆ ಬರಬೇಕು.
ತ್ರಿಗುಣಗಳ ಪ್ರಭಾವ ಜಡದಲ್ಲೂ ಇದೆ, ಚೇತನದಲ್ಲೂ ಇದೆ. ಅದರ ಪ್ರಭಾವದಿಂದ ಕ್ರಿಯೆ ನಡೆಯುತ್ತದೆ. ಯಾರೋ ಒಬ್ಬರು ನಿಮಗೆ ಬೈದರು ಎಂದರೆ-ಆತನಲ್ಲಿ ಆ ಕ್ಷಣದಲ್ಲಿ ರಜೋಗುಣ ಜಾಗೃತವಾಗಿ ಕೆಲಸ ಮಾಡುತ್ತಿದೆ ಎಂದರ್ಥ. ನಾವು ಈ ಅರಿವಿನಿಂದ ಆ ಕ್ಷಣದಲ್ಲಿ ವರ್ತಿಸಬೇಕು. ಇದನ್ನು ಶ್ರೀರಾಮಚಂದ್ರ ತನ್ನ ಜೀವನದಲ್ಲಿ ನಡೆದು ತೋರಿಸಿದ್ದಾನೆ. ರಾಮಾಯಣದಲ್ಲಿ ವಾಲ್ಮೀಕಿ ಹೇಳುತ್ತಾರೆ:
ಸ ಹಿ ನಿತ್ಯಂ ಪ್ರಶಾಂತಂ ಮೃದುಪೂರ್ವಃ ಚ ಭಾಷತೆ |
ಉಚ್ಚಮಾನೋSಪಿ ಪರುಷಮ್ ನೋತ್ತರಂ ಪ್ರತಿಪದ್ಯತೆ ||ಅಯೋಧ್ಯಾ-೧.೧೫||
ರಾಮನಲ್ಲಿ ಯಾರಾದರೂ ಜಗಳಕ್ಕೆ ನಿಂತರೆ ಆತ ಎಂದೂ ಸಿಟ್ಟಿಗೇಳುತ್ತಿರಲಿಲ್ಲ. “ಮತ್ತೆ ಮಾತನಾಡೋಣ” ಎಂದು ಹೊರಟು ಹೋಗುತ್ತಿದ್ದನಂತೆ. ಏಕೆಂದರೆ ಒಬ್ಬ ವ್ಯಕ್ತಿಯಲ್ಲಿ ರಜೋಗುಣ ಕೆಲಸ ಮಾಡುತ್ತಿರುವಾಗ, ಅವರೊಂದಿಗೆ ನಾವು ರಜೋಗುಣದಿಂದ ವರ್ತಿಸಬೇಕಾದ ಪ್ರಸಂಗ ಬಂದುಬಿಡುತ್ತದೆ. ಇದು ಬಹಳ ಅಪಾಯಕಾರಿ. ಆದ್ದರಿಂದ ರಜೋಗುಣಕ್ಕೊಳಗಾದವರೊಂದಿಗೆ ನೀನು ರಾಜಸನಾಗಬೇಡ. ತಟಸ್ಥನಾಗಿ ದೂರ ನಿಲ್ಲು(Act but never React). ಆಗ ಅವರ ರಜೋಗುಣ ತನ್ನಷ್ಟಕ್ಕೆ ಕುಸಿಯುತ್ತದೆ. ಸಿಟ್ಟು ಮಾಡುವವರ ಮುಂದೆ ಮೌನಿಯಾದರೆ ಅವರ ಸಿಟ್ಟು ಬಹುಬೇಗ ಕರಗುತ್ತದೆ. ಹೀಗೆ ನಾವು ಈ ಗುಣಗಳ ಪ್ರಭಾವವನ್ನು ಗುರುತಿಸಿದಾಗ ನಮ್ಮ ಬದುಕಿನ ನಡೆಯೂ ಬೇರೆಯಾಗುತ್ತದೆ.
ಮೇಲೆ ಹೇಳಿರುವ ವಿಷಯವನ್ನಷ್ಟೇ ತಿಳಿದರೆ ಸಾಲದು. ಈ ತ್ರಿಗುಣಗಳನ್ನು ಮೀರಿ ನಿಂತವ ಭಗವಂತ. ಅವನನ್ನು ತಿಳಿದಾಗ ನೀನು ತ್ರಿಗುಣಗಳನ್ನು ಮೀರಿ ನಿಲ್ಲಲು ಸಹಾಯವಾಗುತ್ತದೆ. ಆ ಭಗವಂತನನ್ನು ಸೇರಲು ನಾನು ಈ ತ್ರಿಗುಣಗಳ ಪ್ರಭಾವದಿಂದ ಹೊರ ಬರಬೇಕು ಎನ್ನುವ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. “ಇಂಥವರ ಮನಸ್ಸು ನನ್ನಲ್ಲಿ ನೆಲೆಗೊಳ್ಳುತ್ತದೆ ಮತ್ತು ಅದರಿಂದಾಗಿ ಮುಂದೆ ಅವರು ನನ್ನನ್ನು ಬಂದು ಸೇರಿ ನನ್ನಲ್ಲೇ ನೆಲೆಸುತ್ತಾರೆ” ಎನ್ನುತ್ತಾನೆ ಕೃಷ್ಣ.
ಈ ಶ್ಲೋಕಕ್ಕೆ ಇನ್ನೊಂದು ಮುಖವಿದೆ. “ಗುಣೇಭ್ಯಃ ಅನ್ಯಂ ಕರ್ತಾರಂ ಯದಾ ದ್ರಷ್ಟಾ ಅನುಪಶ್ಯತಿ ತದಾ ಸಃ ‘ನಾ’ ಭವತಿ”. ಇಲ್ಲಿ “ಗುಣೇಭ್ಯಃ ಅನ್ಯಂ” ಅಂದರೆ ತ್ರಿಗುಣಮಾನಿನಿಯಾಗಿರತಕ್ಕಂತಹ, ಗುಣಶಬ್ದವಾಚ್ಯಳಾದ, ಶ್ರೀ-ಭೂ-ದುರ್ಗ ನಾಮಕಳಾದ, ಮಹಾಲಕ್ಷ್ಮಿಗಿಂತಲೂ ಅತೀತವಾದ ಒಂದು ಶಕ್ತಿ. ಅವನೇ ನಿಜವಾದ ಕರ್ತಾ. ಯಾರಾತ? ಮುಂಡಕೋಪನಿಷತ್ತಿನಲ್ಲಿ ಹೇಳುವಂತೆ:
ಯದಾ ಪಶ್ಯಃ ಪಶ್ಯತೇ ರುಕ್ಮವರ್ಣಂ ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಂ || ೩-೧-೩||
ಯಾರು ಚತುರ್ಮುಖನಿಗೂ ತಂದೆಯೋ, ಯಾರು ಚಿತ್ಪ್ರಕೃತಿಗೂ ನಿಯಾಮಕನೋ, ಯಾರು ಸಮಸ್ತ ವೇದಗಳಿಂದ ವಾಚ್ಯನೋ –ಅವನೊಬ್ಬನೆ ಕರ್ತಾ. ಇದನ್ನು ತಿಳಿದವನು ನಿಜವಾದ ಮಾನವ.
ಎಲ್ಲಾ ಅಧ್ಯಾತ್ಮ ಸಾಧನೆ ಮಾಡುವ ಸೌಕರ್ಯವಿರುವ ಶರೀರ-ಮನುಷ್ಯ ಶರೀರ ಮಾತ್ರ. ಅಂಥಹ ಶರೀರವನ್ನು ಉಪಯೋಗಿಸಿಕೊಳ್ಳುವವ ನರ. ಧರ್ಮ-ಅರ್ಥ-ಕಾಮಗಳಿಂದ ಬಿಡಿಸಿಕೊಳ್ಳುವುದು ಎಂದರೆ ಸತ್ವ-ರಜಸ್ಸು-ತಮೋಗುಣಗಳಿಂದ ಬಿಡಿಸಿಕೊಂಡು ಭಗವಂತನನ್ನು ಸೇರುವುದು. ಇದು ಮನುಷ್ಯನ ಜೀವನದ ಗುರಿ. “ಈ ಮೂರು ಗುಣಗಳು ನನ್ನಲ್ಲಿ ಕೆಲಸ ನಡೆಸಿವೆ, ನಾನು ಈ ಪ್ರಭಾವದಿಂದ ಕಳಚಿಕೊಂಡು ಮೇಲೇರಬೇಕು” ಎನ್ನುವ ಎಚ್ಚರವಿರುವುದು ಮನುಷ್ಯನಿಗೆ ಮಾತ್ರ. ಈ ಎಚ್ಚರದಿಂದಾಗಿ “ಮದ್ಭಾವಂ ಸೋSಧಿಗಚ್ಛತಿ”-ಅವನಲ್ಲಿ ಭಕ್ತಿಜ್ಞಾನಗಳು ಮನಸ್ಸಿನಲ್ಲಿ ತುಂಬಿ ಆತ ಮೋಕ್ಷವನ್ನು ಸೇರುತ್ತಾನೆ.
