ಅದು 2018 ರ ಜುಲೈ 1. ಬೆಳಗ್ಗೆ 7 ಗಂಟೆ ಸುಮಾರಿಗೆ ದೆಹಲಿಯ ಬುರಾರಿಯಲ್ಲಿ ಗುರುಚರಣ್ ಎಂಬವರು ವಾಕಿಂಗ್ಗೆ ಎಂದು ನೆರೆಮನೆಯ ಚಂದಾವತ್ ಕುಟುಂಬದ ಹಿರಿಯ ಮಗನಾದ ಲಲಿತ್ ಗಾಗಿ ಕಾಯುತ್ತಿದ್ದರು. ಎಷ್ಟು ಹೊತ್ತು ಕಾದರೂ ಆತ ಬಾರದೇ ಇದ್ದಾಗ, ಪ್ರತಿದಿನ ಆ ಸಮಯಕ್ಕಾಗಲೇ ತೆರೆದಿರುತ್ತಿದ್ದ ಚಂದಾವತ್ ಕುಟುಂಬದ ಅಂಗಡಿಯ ಬಳಿ ಬಂದು ಗಮನಿಸುತ್ತಾರೆ.
ಹಿಂದಿನ ದಿನ ಹಾಕಿದ್ದ ಬಾಗಿಲನ್ನು ತೆರೆದ ಸುಳಿವೇ ಇರಲಿಲ್ಲ. ಹಾಗಾಗಿ ನೇರ ಅವರ ಮನೆಯ ಬಳಿ ತೆರಳಿದ ಅವರು ಒಂದೆರಡು ಬಾರಿ ಕರೆಗಂಟೆ ಹೊಡೆದು, ಬಾಗಿಲು ತಟ್ಟಿದ್ದಾರೆ. ಚಿಲಕ ಸರಿಯಾಗಿ ಹಾಕದೇ ಇದ್ದುದರಿಂದಲೋ ಏನೋ ಬಾಗಿಲು ಸ್ವಲ್ಪ ಹಿಂದೆ ಸರಿದಿದೆ. ಇದೇನಿದು ಬಾಗಿಲು ತೆರೆದೇ ಇದೆ ಎಂದು ಒಳ ಹೊಕ್ಕಿದವರಿಗೆ ಎದುರಾಗಿದ್ದು ಕನಸು ಮನಸಿನಲ್ಲೂ ಊಹಿಸದ ಭೀಕರ ದೃಶ್ಯ! ಅಲ್ಲಿ ಆಲದ ಮರದ ಬಳ್ಳಿಗಳಂತೆ ಮನೆಯ ಸೀಲಿಂಗ್ನ ಸರಳಿಗೆ ನೇಣು ಹಾಕಿಕೊಂಡು ನೇತಾಡುತ್ತಿದ್ದ ಹತ್ತು ಶವಗಳು !… ಈ ದೃಶ್ಯವನ್ನು ಕಂಡವರೇ ದಂಗಾಗಿ ಹೋಗಿದ್ದರು. ಕೂಡಲೇ ಅಕ್ಕಪಕ್ಕದವರನ್ನೆಲ್ಲಾ ಕೂಗಿ ಕರೆದು ಪೊಲೀಸರಿಗೂ ಕರೆ ಮಾಡಿ ಮಾಹಿತಿ ನೀಡಿದ್ದರು.
ಚಂದಾವತ್ ಕುಟುಂಬವು ಸಮಾಜದಲ್ಲಿ ಗೌರವಯುತವಾಗಿ ಜೀವಿಸುತ್ತಿದ್ದ ಒಂದು ಸುಂದರ ಕುಟುಂಬ. 11 ಮಂದಿಯನ್ನು ಹೊಂದಿದ ಕೂಡು ಕುಟುಂಬದಲ್ಲಿ ನಾರಾಯಣಿ ದೇವಿ (77) ಹಿರಿಯಾಕೆ. ಆಕೆಗೆ ಐದು ಜನ ಮಕ್ಕಳು. ಅದರಲ್ಲಿ ಇಬ್ಬರು ಬೇರೆ ಮನೆಯಲ್ಲಿ ವಾಸಿಸುತ್ತಿದ್ದು, ಭುವನೇಶ್(50), ಲಲಿತ್(45), ಪ್ರತಿಭಾ(57), ಸವಿತಾ, ಟೀನಾ, ಮೋನು ಮೆನಕಾ, ನೀತು, ದ್ರುವ್, ಶಿವಮ್, ಪ್ರಿಯಾಂಕಾ ಇವರು ಮನೆಯಲ್ಲಿ ಒಂದಾಗಿ ವಾಸಿಸುತ್ತಿದ್ದರು. ಸುಂದರವಾದ ಸಂಸಾರ, ಹಣ, ಆಸ್ತಿ, ಮರ್ಯಾದೆ ಎಲ್ಲಾ ಇರಬೇಕಾದರೆ ಈ ಕುಟುಂಬಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆಯಾದರೂ ಏನಿತ್ತು?

ಇವರ ಆತ್ಮಹತ್ಯೆಯ ಸುದ್ದಿ ಸುದ್ದಿವಾಹಿನಿ ತಲುಪುವ ಮೊದಲೇ ಊರಿನವರಿಗೆ ತಲುಪಿತ್ತು. ಮನೆಯ ಮುಂದೆ ಜನರ ದಂಡೇ ದೌಡಾಯಿಸಿತ್ತು. ಪೊಲೀಸರು ಬಂದವರೇ ಸ್ಥಳ ಪರಿಶೀಲಿಸಿದರು. ಮನೆಯಲ್ಲಿದ್ದದ್ದು ಒಟ್ಟು 11 ಮಂದಿ. ಆದರೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಾತ್ರ 10 ಮಂದಿ. ಇನ್ನೊಬ್ಬರು ಎಲ್ಲಿ ಎಂಬ ಪ್ರಶ್ನೆ ಮೂಡಿ ಮನೆಯ ಮೂಲೆ ಮೂಲೆಯನ್ನೂ ಹುಡುಕಾಡಿದಾಗ ಕಂಡಿದ್ದು ಕೋಣೆಯೊಂದರಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದ ಮನೆಯ ಹಿರಿಯ ಸದಸ್ಯೆ ನಾರಾಯಣಿ ದೇವಿ.

ನೇಣು ಹಾಕಿಕೊಂಡವರಲ್ಲಿ ಕೆಲವರ ಕಾಲು, ಕಣ್ಣು, ಬಾಯಿಯನ್ನು ಬಟ್ಟೆಯಿಂದ ಕಟ್ಟಲಾಗಿತ್ತು. ಜೊತೆಗೆ ಕಿವಿಯನ್ನು ಹತ್ತಿಯಿಂದ ಮುಚ್ಚಲಾಗಿತ್ತು. ನೆಲದಲ್ಲಿ ಐದು ಸ್ಟೂಲ್ಗಳು ಇದ್ದವು, ಹಾಗೆಯೆ ಒಂದೇ ಬೆಡ್ಶೀಟ್ನ ತುಂಡುಗಳಿಂದ ಅವರ ಮುಖವನ್ನು ಮುಚ್ಚಲಾಗಿತ್ತು. ಮನೆಯ ಮಹಡಿಯ ಮೇಲೆ ಕಟ್ಟಿದ್ದ ನಾಯಿ ಟಾಮಿ ಮಾತ್ರ ಬೊಗಳಿಯೋ, ಹಸಿವಿನಿಂದಲೋ ನಿತ್ರಾಣವಾಗಿ ಜ್ವರದಿಂದ ಬಳಲಿ ತನ್ನವರನ್ನು ಕಳೆದುಕೊಂಡು ಮೂಕವಾಗಿ ರೋಧಿಸುತ್ತಿತ್ತು. ಕೂಡಲೇ ಅದಕ್ಕೆ ಚಿಕಿತ್ಸೆ ನೀಡಿ ಹೌಸ್ ಆಫ್ ಸ್ಟ್ರೇ ಎನಿಮಲ್ಸ್ ಎಂಬಲ್ಲಿಗೆ ಕಳುಹಿಸಲಾಯಿತು.
ಈ ಪ್ರಕರಣವನ್ನು ಪೊಲೀಸರಿಂದ ಭೇದಿಸಲು ಸಾಧ್ಯವಾಗದೆ ಇದ್ದಾಗ ಅದನ್ನು ಅಪರಾಧ ವಿಭಾಗಕ್ಕೆ ನೀಡಲಾಗುತ್ತದೆ. ಅವರಿಗೆ ಈ ಪ್ರಕರಣವು ಒಂದು ದೊಡ್ಡ ಸವಾಲಾಗಿತ್ತು ಎಂದರೆ ತಪ್ಪಿಲ್ಲ.
ಪುನಃ ಮೊದಲಿನಿಂದ ಪ್ರಾರಂಭವಾದ ತನಿಖೆಯಲ್ಲಿ ಈ ಪ್ರಕರಣವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪರೀಕ್ಷಿಸಲಾಗುತ್ತದೆ. ಮನೆಯ ಯಾವೊಂದು ವಸ್ತುವಿನ ಮೇಲೆಯೂ ಹೊರಗಿನವರ ಬೆರಳಚ್ಚಿರಲಿಲ್ಲ, ಯಾವುದೇ ಸಂದೇಹಾಸ್ಪದ ಕರೆ ಕಂಡುಬರಲಿಲ್ಲ. ಯಾರ ಮೇಲೆಯೂ ಅನುಮಾನವಿಲ್ಲ.. ಹಾಗಾದರೆ ಏನಾಗಿರಬಹುದು…?
ಮನೆಯಲ್ಲಿ ಲಭಿಸಿದ ಮತ್ತೊಂದು ಬಹುದೊಡ್ಡ ಸಾಕ್ಷಿಯು ಕೊಲೆಯಾಗಿರಬಹುದೆಂಬ ಊಹೆಯನ್ನೇ ತಲೆಕೆಳಗಾಗಿಸಿತ್ತು. ಆ ಸಾಕ್ಷಿಯೇ ಮನೆ ಹೊರಗಡೆ ಅಳವಡಿಸಿದ್ದ ಸಿಸಿಟಿವಿ. ಅದರಲ್ಲಿ ಮನೆಯ ಸದಸ್ಯರು ಸ್ಟೂಲ್ ಹಾಗೂ ಬಳ್ಳಿಯನ್ನು ಮನೆ ಹೊರಗಿನಿಂದ ಒಳಗಡೆ ಸಾಗಿಸುತ್ತಿರುವುದು ಕಂಡು ಬರುತ್ತದೆ. ಇದರಿಂದ ಅಪರಾಧ ವಿಭಾಗಕ್ಕೆ ಇದು ಕೊಲೆ ಅಲ್ಲ ಎಂದು ಮನದಟ್ಟಾಗಿತ್ತು. ಕೆಲವು ವಾರಗಳ ಹಿಂದೆಯಷ್ಟೇ ಮನೆ ಮಗಳ ನಿಶ್ಚಿತಾರ್ಥ ನೆರವೇರಿಸಿದ್ದ ಕುಟುಂಬವು ಮದುವೆಯ ಸಂಭ್ರಮದಲ್ಲಿತ್ತು. ಹಾಗಿದ್ದರೆ ಆ ಮನೆಯವರು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡರು ಎನ್ನುವುದೇ ಅವರ ಮುಂದಿದ್ದ ಯಕ್ಷ ಪ್ರಶ್ನೆ…
