ಮಿನಿ ವಿಧಾನಸೌದ ಮಾದರಿ ಕಟ್ಟಡಕ್ಕೆ ತಂಡಗಳ ಭೇಟಿ
ಆಲೂರು: ಮಿನಿ ವಿಧಾನಸೌಧ ಮಾದರಿಯಲ್ಲಿ ವಿನ್ಯಾಸಗೊಳಿಸಿರುವ ಪಾಳ್ಯ ಗ್ರಾಮ ಪಂಚಾಯಿತಿ ಕಟ್ಟಡವನ್ನು ವೀಕ್ಷಿಸಿ ಸಲಹೆ ಪಡೆಯಲು ರಾಜ್ಯದ ಮೂಲೆ ಮೂಲೆಯಿಂದ ವಿವಿಧ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿದಿನಗಳು ತಂಡೋಪ ತಂಡವಾಗಿ ಭೇಟಿ ನೀಡುತ್ತಿದ್ದಾರೆ.
ಭಾನುವಾರ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ತಳಕಾಲ್ ಹಾಗೂ ಬಾನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ತಂಡ, ತಾಲ್ಲೂಕಿನ ಜೆಡಿಎಸ್ ಅಧ್ಯಕ್ಷ ಕೆ. ಎಸ್. ಮಂಜೇಗೌಡ ಹಾಗೂ ಪಾಳ್ಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಎರಡು ಅಂತಸ್ತಿನ ಗ್ರಾಮ ಪಂಚಾಯತಿ ಕಟ್ಟಡವನ್ನು ವೀಕ್ಷಿಸಿದರು.
ಕಟ್ಟಡದ ಕೆಳ ಅಂತಸ್ತಿನಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಕಾರ್ಯದರ್ಶಿ, ಲೆಕ್ಕಾಧಿಕಾರಿ, ಡಾಟಾ ಎಂಟ್ರಿ ಆಪರೇಟರ್ ಮತ್ತು ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲಾಗಿದೆ.
ಎರಡನೇ ಅಂತಸ್ತಿನಲ್ಲಿ ಸಭೆ, ಸಮಾರಂಭ ಮಾಡಲು ವಿಧಾನಸಭೆ ಮಾದರಿ ಸಭಾಂಗಣದಲ್ಲಿ 28 ಸದಸ್ಯರು ಕುಳಿತುಕೊಳ್ಳಲು ಕುಶನ್ ಚೇರ್ಗಳು, ಹವಾ ನಿಯಂತ್ರಿತ ವ್ಯವಸ್ಥೆ, ಪ್ರತಿ ಆಸನದ ಬಳಿ ಮೈಕ್ ಇರುವುದನ್ನು ತಂಡದವರು ವೀಕ್ಷಿಸಿ ಬೆರಗಾಗಿ ಸಂತಸ ಹಂಚಿಕೊಂಡರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದ ತಾ. ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡರು ಭೇಟಿ ನೀಡಿದ್ದ ತಂಡದೊಂದಿಗೆ ಮಾತನಾಡಿ, ಗ್ರಾಮ ಪಂಚಾಯಿತಿಗೊಳಪಡುವ ಜನಸಾಮಾನ್ಯರು ಕಚೇರಿಯಿಂದ ಕಚೇರಿಗೆ ಅಲೆಯಬಾರದು ಎನ್ನುವ ಉದ್ದೇಶದಿಂದ ಹೆಚ್. ಡಿ. ದೇವೇಗೌಡರು ದೇಶದ ಮುಖ್ಯಮಂತ್ರಿ, ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಗ್ರಾಮದಲ್ಲಿರುವ 4.15 ಎಕರೆ ಜಾಗ ಮಂಜೂರು ಮಾಡಿಸಿ ನಾಡ ಕಚೇರಿ, ಪ್ರಾಥಮಿಕ ಅರೋಗ್ಯ ಕೇಂದ್ರ. ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್, ಸರ್ಕಾರಿ ಪದವಿಪೂರ್ವ ಕಾಲೇಜು, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ, ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ಜನಸಾಮಾನ್ಯರಿಗೆ ಅನುಕೂಲಮಾಡಲಾಗಿದೆ. ನಂತರದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪುರುಷೋತ್ತಮ, ಪ್ರಕಾಶ್ ಮತ್ತು ಭವ್ಯ ರವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸರ್ಕಾರದ ಅನುದಾನದ ಜೊತೆಗೆ ಬೇರೆಯವರಿಂದ ದೇಣಿಗೆ ಮತ್ತು ಸ್ವಂತ ಹಣದಿಂದ ಕಟ್ಟಡದ ನವೀಕರಣಕ್ಕೆ ಹಗಲು-ರಾತ್ರಿ ಶ್ರಮಿಸಿದ್ದಾರೆ ಎಂದು ವಿವರಿಸಿದರು.
ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕು ತಳಕಾಲ್ ಗ್ರಾಮ ಪಂಚಾಯಿತಿ ಪಿಡಿಒ ವೀರಣ್ಣ ಚನ್ನಾವೀರಗೌಡ ಮಾತನಾಡಿ, ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಪಾಳ್ಯ ಗ್ರಾಮ ಪಂಚಾಯಿತಿ ಕಟ್ಟಡ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಗ್ರಾಮ ಪಂಚಾಯಿತಿಯನ್ನು ಹೀಗೆಲ್ಲ ಅಭಿವೃದ್ಧಿ ಮಾಡಬಹುದಾ ಎಂದು ತಿಳಿದು, ಪ್ರತ್ಯಕ್ಷವಾಗಿ ನೋಡಲೇಬೇಕು ಎನ್ನುವ ಉದ್ದೇಶದಿಂದ ತಳಕಾಲ್ ಮತ್ತು ಬಾನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪ್ರಮುಖ ಮುಖಂಡರ ಜೊತೆ ಪಾಳ್ಯ ಗ್ರಾಮ ಪಂಚಾಯಿತಿ ಕಟ್ಟಡ ವೀಕ್ಷಿಸಿದೆವು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷರು ಆಗಿರುವ ಕೆ. ಎಸ್. ಮಂಜೇಗೌಡ ರವರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ವಿಧಾನ ಸಭೆ ಮಾದರಿಯಲ್ಲಿ ಸಭಾಂಗಣ ನಿರ್ಮಾಣ ಮಾಡಲಾಗಿದೆ. ಪುರುಷೋತ್ತಮ್ ರವರಿಂದ ಸಂಪೂರ್ಣ ಮಾಹಿತಿ ಪಡೆದು ನಾವು ಕೂಡ ಮಾದರಿಯಾಗಿ ಕಟ್ಟಡ ನಿರ್ಮಾಣ ಮಾಡಲು ನಮ್ಮ ಶಾಸಕರ ಜೊತೆ ಚರ್ಚಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಳಕಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಹೀರಾಬಾನ್ ಬೇಗಂ, ಬಾನಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಪ್ಪ ಹಳ್ಳಿಕೆರೆ, ಪಿಡಿಒ ರಮೇಶ್, ರಾಯಚೂರು ಕೃಷಿ ವಿಶ್ವ ವಿದ್ಯಾಲಯ ಸಿಂಡಿಕೇಟ್ ಸದಸ್ಯ ತಿಮ್ಮಣ್ಣ ಚೌಡಿ, ಮಾಜಿ ಸೈನಿಕ ನೀಲಕಂಠ ಸ್ವಾಮಿ ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
