ಅಪ್ಪನ ಹೆಸರು ಸಿನಿಮಾ ಉದ್ಯಮಕ್ಕೆ ಕಾಲಿಡಲು ‘ರೆಡ್ ಕಾರ್ಪೆಟ್’ ಆಗಿರಬಹುದು. ಆದರೆ ಮೂರು ತಲೆಮಾರುಗಳ ಪ್ರೇಕ್ಷಕರಿಗೆ ‘ಸೂಪರ್ ಸ್ಟಾರ್’ ಆಗಿ ಉಳಿದು, ನಾಲ್ಕನೆ ತಲೆಮಾರಿಗೆ ಮುಂದುವರೆಯಲು ಯಾರಿಗೂ ಅಪ್ಪನ ಹೆಸರೂ ಸಹಾಯ ಮಾಡುವುದಿಲ್ಲ. ಸಿನಿಮಾ ಉದ್ಯಮ ಮಾತ್ರ ಅಲ್ಲ, ಯಾವ ಉದ್ಯಮದಲ್ಲೂ ಅಪ್ಪ ಎಷ್ಟೇ ಹಣ ಮತ್ತು ಹೆಸರು ಮಾಡಿಟ್ಟಿದ್ದರೂ ಅದನ್ನು ಉಳಿಸಿಕೊಂಡು, ಮುಂದುವರೆಸಿಕೊಂಡು ಹೋಗಲು ಮಕ್ಕಳಲ್ಲಿ ಸ್ವಂತ ಪ್ರತಿಭೆ ಇದ್ದರೆ ಮಾತ್ರ ಸಾಧ್ಯ.
ಧೀರೂಭಾಯಿ ಅಂಬಾನಿಯ ಇಬ್ಬರ ಮಕ್ಕಳಲ್ಲಿ ಒಬ್ಬ ಮಗ ಮಾತ್ರ ಅಪ್ಪನನ್ನು ಮೀರಿಸುವ ಯಶಸ್ಸು ಕಂಡಿರುವುದು. ಭಾರತೀಯ ಚಿತ್ರರಂಗದ ಲೆಜೆಂಡುಗಳ ಮಕ್ಕಳಲ್ಲಿ ಗೆದ್ದ ಮಕ್ಕಳಿಗಿಂತ, ಸೋತ ಮಕ್ಕಳೇ ಹೆಚ್ಚು. ತನ್ನತನ ಹಾಗೂ ಸತ್ವ ಇಲ್ಲದಿದ್ದರೆ ರಾಜ್ಕುಮಾರ್ ಹೆಸರಿನಿಂದಲೇ ಶಿವ ರಾಜ್ಕುಮಾರ್ ಇಷ್ಟು ದೂರ ಕ್ರಮಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗೆ ರಾಜ್ಕುಮಾರ್ ಹೆಸರಿನಿಂದ ಸೂಪರ್ ಸ್ಟಾರುಗಳಾಗಲು ಸಾಧ್ಯವಿದ್ದರೆ ಆ ಕುಟುಂಬದಿಂದ ಕನಿಷ್ಟ 10 ಜನ ಸೂಪರ್ ಸ್ಟಾರುಗಳಾಗಬೇಕಿತ್ತು. ಆದರೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು ಶಿವಣ್ಣ ಮತ್ತು ಅಪ್ಪು ಮಾತ್ರ.
ರಜಿನಿಕಾಂತ್ ಹೇಳ್ತಾರೆ ಒಬ್ಬ ರಾಜ್ಕುಮಾರ್ ಹತ್ತು ಎಂ.ಜಿ.ಆರ್ ಮತ್ತು ಶಿವಾಜಿ ಗಣೇಶನ್ ಅವರಿಗೆ ಸಮ ಅಂತ. ಒಬ್ಬ ಶಿವಣ್ಣ ಸರಳತೆ ಹಾಗೂ ಸಜ್ಜನಿಕೆಯಲ್ಲಿ ಹತ್ತು ರಜಿನಿಕಾಂತ್ಗೆ ಸಮ. ಆ ಕಾರಣದಿಂದಲೇ ಕನ್ನಡ ಚಿತ್ರೋದ್ಯಮದಲ್ಲಿ ಶಿವಣ್ಣನ ಪ್ರತಿಭೆಗಿಂತ ಅವರಿಗಿರುವ ಮಾರ್ಕೆಟ್ ಹಾಗೂ ಹೆಸರನ್ನೆ ಹೆಚ್ಚಾಗಿ ದುಡಿಸಿಕೊಳ್ಳಲಾಗಿದೆ.
ಕನ್ನಡ ಚಿತ್ರರಂಗದ ಮಾರುಕಟ್ಟೆ ಮೊದಲಿನಿಂದಲೂ ಒಂದು ಚೌಕಟ್ಟಿನೊಳಗೇ ಉಳಿದುಕೊಂಡ ಕಾರಣ ಶಿವಣ್ಣನಂತಹ ಪ್ರತಿಭೆ ಕರ್ನಾಟಕದ ಆಚೆಗೆ ಪರಿಚಯ ಆಗಲಿಲ್ಲ. ಆದರೆ ಶಿವಣ್ಣ ಭಾರತ ಚಿತ್ರರಂಗದ ಯಾವ ನಟರಿಗೂ ಕಮ್ಮಿಯಲ್ಲದವರು. ಸಿನಿಮಾ ಕ್ರೇಜು ಬಹಳ ಕಡಿಮೆ ಇರುವ ಕರ್ನಾಟಕದಲ್ಲಿ, ಕಂಡವರಿಗೆಲ್ಲ ಜೈಕಾರ ಹಾಕದ, ತಲೆಯ ಮೇಲೆ ಕೂರಿಸಿಕೊಳ್ಳದ, ಅಳೆದು ತೂಗಿ ಒಪ್ಪಿಕೊಳ್ಳುವ ಜನರ ನಾಡಿನಲ್ಲಿ ನಲವತ್ತು ವರ್ಷ ‘ಸೂಪರ್ ಸ್ಟಾರ್’ ಆಗಿ ಉಳಿದಿರುವುದೇ ಅದಕ್ಕೆ ಸಾಕ್ಷಿ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದವರು ಶಿವಣ್ಣನನ್ನು ಅದ್ಧೂರಿಯಾಗಿ ಸಂಭ್ರಮಿಸಬೇಕು.
ಸದ್ಯಕ್ಕೆ ಬೇರೆ ಭಾಷೆಯ ಜನಪ್ರಿಯ ನಟರು ಶಿವಣ್ಣನ ನಲವತ್ತು ವರ್ಷಗಳ ವೃತ್ತಿಜೀವನದ ಪ್ರಯಾಣಕ್ಕೆ ಅಭಿನಂದಿಸಿ ಸಂಭ್ರಮಿಸುತ್ತಿದ್ದಾರೆ.
ಈ ನಲವತ್ತು ವರ್ಷಗಳಲ್ಲಿ ಶಿವಣ್ಣ ಪ್ರತಿನಿಧಿಸಿದ್ದು ರಾಜ್ಕುಮಾರ್ ಪರಂಪರೆಯನ್ನಲ್ಲ. ಕರ್ನಾಟಕದ ಸಾಂಸ್ಕೃತಿಕ ಭಾಗವಾದ ಸಿನಿಮಾ ಉದ್ಯಮವನ್ನು. ಮೊನ್ನೆಗೂ, ನೆನ್ನೆಗೂ, ಇಂದಿಗೂ, ನಾಳೆಗೂ ಶಿವಣ್ಣ ಪ್ರತಿನಿಧಿಸುವುದು ಅದನ್ನೇ. “ರಾಜ್ಕುಮಾರ್ ಇಲ್ಲದಿದ್ದರೆ..” ಎಂಬ ಕೊಂಕು ಯಾಕೆ? ರಾಜ್ಕುಮಾರ್ ಇಲ್ಲದಿದ್ದರೆ ಕನ್ನಡ ಹಾಗೂ ಕರ್ನಾಟಕದ ಸಂಸ್ಕೃತಿಯ ಒಂದು ಭಾಗವೇ ಇರುತ್ತಿರಲಿಲ್ಲ. ಒಬ್ಬ ಕಮಲ್ ಹಾಸನ್ ಘಟನೆಯ ಹಿನ್ನೆಲೆಯಲ್ಲಿ ನಾವು ಶಿವಣ್ಣನನ್ನು ಸಂಭ್ರಮಿಸದೇ ಇರುವುದು, ಶಿವಣ್ಣನನ್ನು ಬಿಟ್ಟುಕೊಡುವುದು ಸಾಧ್ಯವೇ ಇಲ್ಲ.
ಅಭಿನಂದನೆಗಳು ಶಿವಣ್ಣ Dr Shiva Rajkumar 💐❤
