ಬೆಂಗಳೂರು : ನಾಳೆ ಐತಿಹಾಸಿಕ ನಂದಿಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಸಾರ್ವಜನಿಕರಿಗೆ ನಂದಿಗಿರಿಧಾಮ ಪ್ರವೇಶ ಬಂದ್ ಮಾಡಲಾಗಿದೆ.
ನಾಳೆ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ನಂದಿಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಸಂಪುಟ ಸಭೆ ಹಿನ್ನೆಲೆಯಲ್ಲಿ ನೆಹರು ನಿಲಯ, ಗಾಂಧಿ ನಿಲಯ ಸೇರಿದಂತೆ ಪಾರಂಪಾರಿಕ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯಲಾಗಿದ್ದು, ಗಿರಿಧಾಮದ ರಸ್ತೆಗಳಿಗೆ ಡಾಂಬರೀಕರಣ ಸೇರಿ ಗಣ್ಯರ ವಾಸ್ತವ್ಯ ಮಾಡುವ ಅತಿಥಿಗೃಹಗಳು, ಸಚಿವ ಸಂಪುಟ ಸಭೆ ನಡೆಯುವ ಮಯೂರ ಹೋಟೆಲ್ ಸಭಾಂಗಣವನ್ನು ಸಜ್ಜುಗೊಳಿಸಲಾಗಿದೆ.
ಗಣ್ಯರ ಕಾರುಗಳ ಪಾರ್ಕಿಂಗ್ ವ್ಯವಸ್ಥೆ, ಸಚಿವರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಭೋಜನ ವ್ಯವಸ್ಥೆಗಾಗಿ ಸ್ಥಳಗಳನ್ನು ಗುರುತಿಸಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಿದೆ.
1986ಲ್ಲಿ ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಅಧ್ಯಕ್ಷತೆಯಲ್ಲಿ ಸಾರ್ಕ್ ಸಮ್ಮೇಳನ ನಂದಿಗಿರಿಧಾಮದಲ್ಲಿ ನಡೆದಿತ್ತು. ಇದಾದ ಬಳಿಕ ಈಗ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಸಭೆಯ ನಂದಿಬೆಟ್ಟದಲ್ಲಿ ಆಯೋಜಿಸಿದೆ. ಜಿಲ್ಲಾಡಳಿತವೇ ನಂದಿಬೆಟ್ಟದಲ್ಲಿ ಬೀಡುಬಿಟ್ಟು ಸಂಪುಟ ಸಭೆ ಯಶಸ್ವಿಗೆ ಸಿದ್ಧತೆಯಲ್ಲಿ ತೊಡಗಿದೆ. ಸುಮಾರು 1200ಕ್ಕೂ ಹೆಚ್ಚು ಮಂದಿಗೆ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ.
ನಂದಿ ಬೋಗನಂದೀಶ್ವರ ದರ್ಶನ ಬಳಿಕ ಸಂಪುಟ ಸಭೆ
ಜೂನ್ 19 (ಗುರುವಾರ) ಬೆಳಗ್ಗೆ 10ಗಂಟೆಗೆ ಸರಿಯಾಗಿ ಇಡೀ ಸಚಿವ ಸಂಪುಟ ಸದಸ್ಯರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮೊದಲಿಗೆ ನಂದಿ ಗ್ರಾಮದಲ್ಲಿರುವ ದಕ್ಷಿಣ ಕಾಶಿಯೆಂದು ಖ್ಯಾತಿ ಪಡೆದಿರುವ ಬೋಗ ನಂದೀಶ್ವರನ ದರ್ಶನ ಪಡೆಯಲಿದೆ. ಅಲ್ಲಿಯೆ ಸಿಎಂ, ಡಿಸಿಎಂ ಹಾಗೂ ಸಚಿವ ಸಂಪುಟ ಸದಸ್ಯರು ಫೋಟೋ ಸೆಷನ್ ನಡೆಯಲಿದೆ. ಬಳಿಕ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಅಲ್ಲಿಂದ ನೇರವಾಗಿ ನಂದಿಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲಿದ್ದಾರೆ.

[…] […]