ಹಾಸನ, ಜೂನ್ 19: ಮಲೆನಾಡು ಹಾಗೂ ಚಿಕ್ಕಮಗಳೂರು ಭಾಗದಲ್ಲಿ ತೀವ್ರ ಮಳೆಯಾದ ಹಿನ್ನೆಲೆಯಲ್ಲಿ ಗೊರೂರಿನ ಹೇಮಾವತಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಆಗುತ್ತಿದ್ದು, ಜಲಾಶಯದ ಆರು ಕ್ರಸ್ಟ್ ಗೇಟ್ಗಳ ಮೂಲಕ ಇಂದು 10,000 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ.
ಜಲಾಶಯಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ ಹಾಗೂ ಹಾಸನದ ಸಕಲೇಶಪುರ, ಬೇಲೂರು ಭಾಗಗಳಿಂದ ನಿರಂತರವಾಗಿ ನೀರು ಹರಿದು ಬರುತ್ತಿದೆ. ಇಂದಿನ ದಿನದ ಒಳಹರಿವು 15,567 ಕ್ಯೂಸೆಕ್ ಆಗಿದ್ದು, ಜಲಾಶಯದ ನೀರಿನ ಮಟ್ಟ 2912.50 ಅಡಿಗೆ ಏರಿಕೆಯಾಗಿದೆ. ಈ ವೇಳೆಯಲ್ಲಿ ಕಳೆದ ವರ್ಷ ನೀರಿನ ಮಟ್ಟ 2882.28 ಅಡಿಯಾಗಿತ್ತು.
ಹೇಮಾವತಿಯ ಗರಿಷ್ಟ ಮಟ್ಟ 2922 ಅಡಿ ಇದ್ದು, ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ ಆಗಿದೆ. ಈ ವರ್ಷ ಜೂನ್ 19 ರಂದು ಜಲಾಶಯದಲ್ಲಿ 28.620 ಟಿಎಂಸಿ ನೀರು ಸಂಗ್ರಹವಾಗಿದೆ. ಹೋಲಿಕೆಗೆ ಕಳೆದ ವರ್ಷ ಇದೇ ದಿನ 10.595 ಟಿಎಂಸಿ ಮಾತ್ರ ಸಂಗ್ರಹವಿತ್ತು.
ಭದ್ರತಾ ದೃಷ್ಟಿಯಿಂದ ಜಲಾಶಯದ ಅಧಿಕಾರಿಗಳು ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದ್ದಾರೆ.
