ಕೊರಟಗೆರೆ:- ರಸ್ತೆ ಗುಂಡಿ ತಪ್ಪಿಸಲು ಹೋಗಿದ್ದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವವಿವಾಹಿತೆ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸಮೀಪದ ಕುರಂಕೋಟೆ ಕ್ರಾಸ್ ಬಳಿ ಗುರುವಾರ ನಡೆದಿದೆ.

ಮೃತರನ್ನು ಕುರಂಕೋಟೆ ಗ್ರಾಮದ ಮಂಜುನಾಥ್ ಅವರ ಪತ್ನಿ ಮಂಜುಳಾ (20) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಶೈಲಮ್ಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜುಳಾ ಹಾಗೂ ಅವರ ಅತ್ತಿಗೆ ಶೈಲಮ್ಮ ಅವರು ಕುರಂಕೋಟೆ ಕ್ರಾಸ್ನಲ್ಲಿರುವ ಶಾರದ ಶಾಲೆಗೆ ಅತ್ತಿಗೆಯ ಮಗುವನ್ನು ಕರೆತರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ, ಕೂಲಿಂಗ್ ಶೀಟ್ ಸಾಗಿಸುತ್ತಿದ್ದ ಲಾಂಗ್ ಚಾರ್ಸಿ ಲಾರಿ ರಸ್ತೆ ಗುಂಡಿಯನ್ನು ತಪ್ಪಿಸಲು ಏಕಾಏಕಿ ವಾಹನ ತಿರುಗಿಸಿದ ಪರಿಣಾಮ ಬೈಕ್ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಮಂಜುಳಾ ಸ್ಥಳದಲ್ಲೇ ಮೃತಪಟ್ಟರೆ, ಶೈಲಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಜುಳಾ ಅವರಿಗೆ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದು, ಹೊಸ ಬದುಕಿನ ಕನಸು ಕಾಣುತ್ತಿದ್ದ ಯುವತಿ ರಸ್ತೆ ಅವ್ಯವಸ್ಥೆಗೆ ಬಲಿಯಾಗಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಕಂಬನಿ ಮಿಡಿದಿದ್ದಾರೆ.
ಘಟನೆಯ ಬಳಿಕ ಸ್ಥಳಕ್ಕೆ ನೂರಾರು ಸಾರ್ವಜನಿಕರು ಆಗಮಿಸಿ, ರಸ್ತೆಯಲ್ಲಿನ ಅಪಾಯಕಾರಿ ಗುಂಡಿಗಳೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಹಲವು ಬಾರಿ ರಸ್ತೆ ದುರಸ್ತಿ ಮಾಡುವಂತೆ ಮನವಿ ಸಲ್ಲಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದೇ ಅಮಾಯಕ ಜೀವ ಬಲಿಯಾಗಲು ಕಾರಣವಾಗಿದೆ ಎಂದು ಸ್ಥಳೀಯರು ದೂರಿದರು.
ಘಟನಾ ಸ್ಥಳಕ್ಕೆ ಕೊರಟಗೆರೆ ಸಿಪಿಐ ಪುರುಷೋತ್ತಮ್ ಹಾಗೂ ಪಿಎಸ್ಐ ತೀರ್ಥೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ ವಿರುದ್ಧ ತನಿಖೆ ಮುಂದುವರಿದಿದೆ.
– ಶ್ರೀನಿವಾಸ್ ಕೊರಟಗೆರೆ.
