ಚನ್ನರಾಯಪಟ್ಟಣ, ಜೂನ್ 21: ಪಟ್ಟಣದ ಗಾಂಧಿ ಸರ್ಕಲ್ನಲ್ಲಿ ಇರುವ ಶಾಲಿನಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ 11ನೇ ವಿಶ್ವ ಯೋಗ ದಿನಾಚರಣೆ ವಿಜೃಂಭಣೆಯಿಂದ ನಡೆಯಿತು. ಶಾಲಾ ಮಕ್ಕಳಿಂದ ವಿವಿಧ ಬಗೆಯ ಯೋಗಾಸನ ಪ್ರದರ್ಶನಗಳು ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣ ಕುಮಾರಿ ಅವರು ಮಾತನಾಡಿ, “ಯೋಗವು ಆರೋಗ್ಯ ಕಾಪಾಡಿಕೊಳ್ಳಲು ಅತ್ಯಂತ ಉಪಯುಕ್ತವಾಗಿದೆ. ಪ್ರತಿದಿನ 10 ನಿಮಿಷವಾದರೂ ಯೋಗ ಅಭ್ಯಾಸ ಮಾಡುವುದರಿಂದ ರೋಗಗಳು ದೂರವಿರುತ್ತವೆ. ಇವತ್ತಿನ ದಿನವನ್ನು ವಿಶ್ವದ ನಾನಾ ದೇಶಗಳಲ್ಲಿ ಯೋಗ ದಿನದಂತೆ ಆಚರಿಸುತ್ತಿರುವುದು ಭಾರತೀಯ ಸಂಸ್ಕೃತಿಯ ಗೌರವವಾಗಿದೆ,” ಎಂದರು.
ಈ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರಾದ ಕುಸುಮ, ಪರಿಸರ ಪ್ರೇಮಿ ಸಿ.ಎನ್. ಅಶೋಕ್, ಶಾಲೆಯ ಸಂಸ್ಥಾಪಕ ನಂಜುಂಡೇಗೌಡ, ಪುರಸಭೆ ಮುಖ್ಯಾಧಿಕಾರಿ ಯತೀಶ್ ಕುಮಾರ್, ಸಮಾಜ ಸೇವಕ ಮನೋಹರ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
- ಮಂಜುನಾಥ್ ಐ.ಕೆ
