ದಕ್ಷಿಣ ಕನ್ನಡ: ಧರ್ಮಸ್ಥಳ ( dharmasthala ) ಗ್ರಾಮದಲ್ಲಿ ನಡೆದ ನಿಗೂಢ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಕುರಿತು ಈ ಹಿಂದಿನಿಂದಲೂ ಗುಸುಗುಸು ಕೇಳಿಬರುತ್ತಲೇ ಇದೆ. ಕೊಲೆ ಮಾಡಿದವರು ಯಾರು ಎಂಬುದು ಮಾತ್ರ ಪ್ರಶ್ನಾರ್ಥಕವಾಗಿಯೇ ಉಳಿದುಕೊಂಡಿದೆ.
ಇನ್ನು ಯುಟ್ಯೂಬರ್ ಧೂತ ಸಮೀರ್ ಇದೇ ವಿಷಯದ ಕುರಿತಾಗಿ ಮಾಡಿದ ವಿಡಿಯೊ ಮುಚ್ಚಿ ಹೋಗಿದ್ದ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವನ್ನು ಮತ್ರೆ ಮುನ್ನೆಲೆಗೆ ತಂದಿತ್ತು.
ಅಲ್ಲಿಯವರೆಗೆ ಸೌಜನ್ಯ ಪ್ರಕರಣದ ಬಗ್ಗೆ ಜನರಿಗಿದ್ದ ಹಲವರ ಮನಸ್ಥಿತಿಯನ್ನು ಸಮೀರ್ ಮಾಡಿದ್ದ ʼಧರ್ಮಸ್ಥಳ ಹಾರರ್ʼ ಬದಲಿಸಿಬಿಟ್ಟಿತ್ತು.
ಒದೀಗ ಇದೇ ಧರ್ಮಸ್ಥಳ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತಾನು ಹೂತಿಟ್ಟಿದ್ದ ಹೆಣಗಳನ್ನು ಹೊರತೆಗೆದು ಪೊಲೀಸರಿಗೆ ಶರಣಾಗಲು ಸಿದ್ಧನಿರುವುದಾಗಿ ವಕೀಲರ ಪತ್ರದಲ್ಲಿ ಉಲ್ಲೇಖಗೊಂಡಿದೆ. ಓಜಸ್ವಿ ಗೌಡ ಹಾಗೂ ಸಚಿನ್ ದೇಶಪಾಂಡೆ ಎಂಬ ವಕೀಲರ ಪತ್ರ ಇದಾಗಿದ್ದು, ಇದರಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಹಲವಾರು ಹತ್ಯೆ ಹಾಗೂ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಮುಚ್ಚಿ ಹಾಕುವ ಸಲುವಾಗಿ ಮೃತದೇಹಗಳನ್ನು ಹೂತು ಹಾಕಲಾಗಿದ್ದು, ಆತ ತನ್ನ ಪಾಪ ಪ್ರಜ್ಞೆ ಪರಿಹರಿಸಿಕೊಳ್ಳುವ ಸಲುವಾಗಿ ಪೊಲೀಸರಿಗೆ ಶರಣಾಗಲು ನಿರ್ಧರಿಸಿದ್ದಾನೆ. ಅಲ್ಲದೇ ಹೂತಿಟ್ಟಿರುವ ಮತ್ತಷ್ಟು ಹೆಣಗಳನ್ನು ಪೊಲೀಸರ ಸಮ್ಮುಖದಲ್ಲೇ ಹೊರತೆಗೆದು, ಈಗಾಗಲೇ ಹೊರತೆಗೆದಿರುವ ಶವಗಳ ಕಳೇಬರವನ್ನು ಸಹ ಒಪ್ಪಿಸುತ್ತೇನೆ ಎಂದು ಹೇಳಿಕೊಂಡಿದ್ದಾನೆ ಎಂದು ಪತ್ರದಲ್ಲಿ ಬರೆಯಲಾಗಿದೆ.
