ಹಾಸನ- ಜಿಲ್ಲೆಯ ಅಭಿವೃದ್ಧಿಯ ಜೊತೆಗೆ ಎಲ್ಲ ಸಮಸ್ಯೆ ಅರಿಯಲು ಜನರೊಂದಿಗೆ ಬೆರೆತು ಅವರ ಕಷ್ಟ-ಸುಖ ಆಲಿಸಿ ಕೆಲಸ ಮಾಡುವ ಮೂಲಕ ಎಲ್ಲ ಜನರ ಪ್ರೀತಿ ಸಂಪಾದಿಸಿ ಕೆಲಸ ಮಾಡುವೆ ಎಂದು ನೂತನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆತ್ಮೀಯ ಸ್ವಾಗತ ಹಾಗೂ ಸನ್ಮಾನ ಸ್ವೀಕರಿಸಿದದ ಬಳಿಕ ಸಂವಾದದಲ್ಲಿ ಅವರು ಮಾತನಾಡಿ, ಸರ್ಕಾರಿ ಕೆಲಸವೆಂದರೆ ಕೇವಲ ಕಚೇರಿಯಲ್ಲಿ ಕುಳಿತು ನಿರ್ವಹಿಸುವುದಲ್ಲ. ಜನಸಾಮಾನ್ಯರೊಂದಿಗೆ ಮುಖಾಮುಖಿಯಾಗಿ ಅವರ ಸಮಸ್ಯೆ ಬಗೆಹರಿಸುವುದು ಮುಖ್ಯ. ಜಿಲ್ಲೆಯ ಜನರು ನನ್ನ ಹೆಸರು ಮತ್ತು ಕೆಲಸ ನೆನಪಿಟ್ಟುಕೊಳ್ಳುವ ರೀತಿ ಕರ್ತವ್ಯ ನಿರ್ವಹಿಸುವೆ. ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದು ಕೋರಿದರು.
ಸರ್ಕಾರ-ಜನರ ಸೇತುವೆಯಾಗಿ, ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ. ಜಿಲ್ಲೆಯ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಎಲ್ಲ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇತ್ತೀಚೆಗೆ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ತಗುಲಿದೆ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬುದು ಸ್ವತಃ ನಾನು ಭೇಟಿ ನೀಡಿದಾಗ ಅನುಭವಕ್ಕೆ ಬಂದಿದೆ. ಅನೇಕ ಸರ್ಕಾರಿ ಶಾಲೆಗಳ ಕಟ್ಟಡ ದುರಸ್ತಿ ಆಗಬೇಕಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳ ಅನುದಾನ ಮತ್ತು ಖಾಸಗಿ ವಲಯದಿಂದಲೂ ಕೂಡ ಸಹಕಾರ ಪಡೆದು ಮೂಲ ಸೌಲಭ್ಯ ಜೊತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಒತ್ತು ನೀಡುವೆ ಎಂದರು.
ಕಂದಾಯ ಇಲಾಖೆಯಲ್ಲಿ ರಾಜ್ಯದಲ್ಲೇ ಹಾಸನ ಮುಂಚೂಣಿಯಲ್ಲಿದೆ. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 6ನೇ ಸ್ಥಾನದಲ್ಲಿರುವುದನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸುವೆ ಎಂದರು.
ಜಿಲ್ಲೆ ಸಾಂಸ್ಕಂತಿಕವಾಗಿ ಸಾಕಷ್ಟು ಹೆಸರುವಾಸಿಯಾಗಿದ್ದು, ಹಾಸನಾಂಬ ಕಲಾ ಕ್ಷೇತ್ರದಲ್ಲಿ ತಾಲೀಮು ನಡೆಸಲು ಜಾಗವಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಪಕ್ಕದಲ್ಲಿರುವ ಜಾಗ ಬಳಸಿ ತಾಲೀಮಿಗೆ ಕೊಠಡಿ ನಿರ್ಮಾಣ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಕಲೇಶಪುರ ಭಾಗದಲ್ಲಿ ಹೆದ್ದಾರಿ ಅಗಲೀಕರಣ ವಿಳಂಬ, ಭೂಕುಸಿತ, ಆನೆ-ಮಾವನ ಸಂಘರ್ಷ ಹೆಚ್ಚಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇನೆ. ಅದಕ್ಕಾಗಿ ಶತಪ್ರಯತ್ನ ನಡೆಸುವೆ, ಕೇವಲ ನಾನೊಬ್ಬಳೇ ಎಲ್ಲವನ್ನೂ ಮಾಡಿ ಮುಗಿಸುತ್ತೇನೆ ಎಂಬುದು ಸರಿಯಲ್ಲ. ಅಧೀನ ಅಧಿಕಾರಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಪತ್ರಕರ್ತರು ಹಾಗೂ ಎಲ್ಲ ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದರು.
ಸಮಾಜದಲ್ಲಿ ಹೆಣ್ಣು ಮಕ್ಕಳು ಕೇವಲ ಅಡುಗೆ ಮತ್ತು ಸಂಸಾರ ನಿಭಾಯಿಸಲು ಮಾತ್ರ ಎಂಬ ಮನೋಭಾವನೆ ಈಗಲೂ ಇದೆ. ಎಲ್ಲಾ ರಂಗದಲ್ಲೂ ಕೂಡ ಮಹಿಳೆ ಕರ್ತವ್ಯ ನಿರ್ವಹಿಸುತ್ತಿದ್ದಾಳೆ, ಇನ್ನಷ್ಟು ಅವಕಾಶ ಸಿಗಬೇಕು. ಅಡುಗೆ ಮನೆಗೆ ಸೀಮಿತ ಆಗಬಾರದು. ಮಗಳಿಗೆ ಚಮಚ ನೀಡದೆ ಗ್ರೀನ್ ಪೆನ್ ನೀಡಿ, ಅದೇ ಪ್ರೇರಣೆ ಆಗಿ ಗೆಜೆಟೆಡ್ ಆಫೀಸರ್ ಆಗಬಹುದು. ನಾನು ಹಾಸನ ಡಿಸಿಯಾಗಿ ಅಧಿಕಾರ ಸ್ವೀಕರಿಸುವಾಗ ನನ್ನ ತಂದೆ ನನಗೆ ಸಹಿ ಮಾಡಲು ಗ್ರೀನ್ ಇಂಕ್ ಪೆನ್ ನೀಡಿ ಹರಿಸಿದರು ಎಂದು ನೆನಪಿಸಿಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ಡಿಸಿ ಅವರು, ಉತ್ತಮ ಕೆಲಸ ಮಾಡಿ ಎಲ್ಲರ ವಿಶ್ವಾಸಗಳಿಸಲಿ. ಹಿಂದೆ ಚಿಕ್ಕಮಗಳೂರು ಡಿಸಿಯಾಗಿದ್ದ ಹರ್ಷಗುಪ್ತ ಹಾಗೂ ಎಸ್ಪಿ ಮಧುಕರ್ಶೆಟ್ಟಿ ಮಾದರಿ ಕೆಲಸ ಮಾಡಿದಂತೆ ನಿಮ್ಮಿಂದಲೂ ಅಂಥ ಮಾದರಿ ಕೆಲಸ ಆಗಲಿ, ಸಂಘದ ಸಹಕಾರ ನಿಮಗೆ ಸಂಪೂರ್ಣ ಇರಲಿದೆ ಎಂದರು.
ಹಾಸನಾಂಬೆ ಉತ್ಸವದ ಬಗ್ಗೆ ತಿಳಿದಿದ್ದೇನೆ. ಈ ಉತ್ಸವವನ್ನು ಹಿಂದಿನಂತೆಯೇ ವಿಜೃಂಭಣೆಯಿಂದ ಯಾವುದೇ ಲೋಪ ಆಗದಂತೆ ನಡೆಸಲಾಗುವುದು, ಎಲ್ಲರ ಸಹಕಾರದಿಂದ ಸರ್ವರ ಉತ್ಸವವಾಗಿಸಲು ಒತ್ತು ನೀಡಲಾಗುವುದು. ಈಗಾಗಲೇ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇನೆ. ಹಿಂದೆ ಆಗಿರುವ ಸಣ್ಣಪುಟ್ಟ ಲೋಪಗಳ ಬಗ್ಗೆ ಎಚ್ಚರ ವಹಿಸಲಾಗುವುದು. ಹೆಚ್ಚು ಭಕ್ತರು ಬಂದರೂ ಸುಲಭ ದರ್ಶನಕ್ಕೆ ಮಾರ್ಗಸೂಚಿ ರೂಪಿಸಲಾಗುವುದು. ಯಶಸ್ವಿ ಉತ್ಸವ ನಡೆಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.
ಮಾಜಿ ಅಧ್ಯಕ್ಷರಾದ ಆರ್.ಪಿ.ವೆಂಕಟೇಶಮೂರ್ತಿ, ರವಿ ನಾಕಲಗೂಡು, ಲೀಲಾವತಿ, ಪ್ರಧಾನ ಕಾರ್ಯದರ್ಶಿ ಬಿ.ಸಿ.ಶಶಿಧರ್, ಉಪಾಧ್ಯಕ್ಷ ಕೆ.ಎಂ. ಹರೀಶ್ ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು ಇದ್ದರು.

[…] […]