ಹಾಸನ: ಸಮಾಜ ಮುಖಿಯಾದ ಮಾಧ್ಯಮ ವೃತ್ತಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತೆ ಕ್ರೀಡಾಕೂಟ ಪ್ರೇರಣೆಯಾಗಲಿ. ಇಂತಹ ಕ್ರೀಡೆಗಳು ಹೆಚ್ಚೆಚ್ಚು ನಡೆಯಬೇಕೆಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲೆಯ ಆಲೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಎರಡನೇ ಬಾರಿ ಆಯೋಜಿಸಲಾಗಿದ್ದ ಪತ್ರಕರ್ತರಿಗೆ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಸದಾ ದಾವಂತದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕ್ರೀಡಾ ಮನೋಭಾವದೊಂದಿಗೆ ಒಂದಾಗಿ ಆಡಲು ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ. ಜಿಲ್ಲೆಯ ಮಾಧ್ಯಮದವರು ಸೇರಿ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಿರುವುದು ಖುಷಿ ತಂದಿದೆ.ಈ ಮೂಲಕ ಭೂಮಿ ತಾಯಿಯ ಋಣ ತೀರಿಸೋ ಕಾರ್ಯವಾಗಲಿ ಎಂದು ಹೇಳಿದರು. ಇಂತಹ ಅವಕಾಶ ಸಿಕ್ಕಾಗ ಸದುಪಯೋಗ ಮಾಡಿಕೊಂಡು ಸಮಾಜ ಮುಖಿಯಾಗಿ ಮಾಧ್ಯಮ ವೃತ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತೆ ಕ್ರೀಡಾಕೂಟದ ಪ್ರೇರಣೆ ಆಗಲಿ ಎಂದು ಶುಭ ಹಾರೈಸಿದ ಅವರು ಕ್ರೀಡಾಕೂಟ ಉದ್ಘಾಟನೆಯ ಸದಾವಕಾಶ ಭಾಗ್ಯವೇ ಸರಿ ಎಂದು ಕಿವಿಮಾತು ಹೇಳಿದರು.
ಶ್ರೀಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಹಿರಿಯರು ಯುವಕರು ವರ್ಷವಿಡಿ ಸುದ್ದಿ ಮಾಡುತ್ತಾ ಜಿಲ್ಲೆಯ ನಾನಾ ಸಮಸ್ಯೆಗಳನ್ನು ಬಿತ್ತರಿಸುತ್ತೀರಿ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೀರಿ. ಈ ನಡುವೆ ಮನೋರಂಜನೆಗೆ ಕ್ರೀಡಾಕೂಟ ಆಯೋಜನೆ ಸಂತಸ ತಂದಿದೆ ಎಂದರು. ಪತ್ರಕರ್ತರ ಸಂಘದಿಂದ ಕೆಸರು ಗದ್ದೆ ಆಟ ಆಯೋಜನೆ ಮಾಡಿರುವುದು ವಿಶೇಷವಾಗಿದೆ, ದೇಸಿ ಕ್ರೀಡೆಗೆ ಇದು ಉತ್ತೇಜನ ನೀಡಿದಂತಾಗಿದೆ ಎಂದು ಹೇಳಿದರು.
ಈಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣು ಕುಮಾರ್ ಅವರು ಮಾತನಾಡಿ, ಎರಡನೇ ಬಾರಿ ಆಲೂರಿನ ಬ್ಯಾಡ್ರಹಳ್ಳಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ಯೋಜನೆ ಮಾಡಲಾಗಿದೆ. ಈ ಬಾರಿ ಉದ್ಘಾಟನೆಗೆ ಸಾಮಾಜಿಕ ಕಳಕಳಿಯ ವ್ಯಕ್ತಿತ್ವ ಹೊಂದಿರುವ ಮಾಜಿ ಶಾಸಕರಾದ ಎ.ಟಿ ರಾಮಸ್ವಾಮಿಯವರನ್ನು ಆಹ್ವಾನಿಸಿದ್ದು, ಅವರು ಸಮಯಕ್ಕೆ ಸರಿಯಾಗಿ ಆಗಮಿಸಿದರು. ಅವರ ಸಹನೆಯ ಕಾರಣ ಇಂದು ಕಾರ್ಯಕ್ರಮ ಅಚ್ಚುಕಟ್ಟಾಗಿ ಉದ್ಘಾಟನೆಯಾಗಿದೆ ಎಂದರು. ಈ ಹಿಂದೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರ ಆಶೀರ್ವಾದ ಕಾರಣ ಪತ್ರಕರ್ತರ ಸಂಘದ ಸದಸ್ಯರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು ಎಂದು ಸ್ಮರಿಸಿದರು.
ಈಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾಕೂಟ ಬೆಳಗಿನಿಂದ ಸಂಜೆವರೆಗೂ ನಡೆದು ಜಿಲ್ಲಾ ಪತ್ರಕರ್ತರು ಕೆಸರಿನಲ್ಲಿ ಇಳಿದು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ, ಬಿ.ಸಿ ಶಶಿಧರ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಆಲೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಿಥ್ವಿ, ಜಿಲ್ಲಾ ಕಾರ್ಯ ಕರ್ತರ ಸಂಘದ ಮಾಜಿ ಅಧ್ಯಕ್ಷ ಬಾಳ್ಳುಗೋಪಾಲ್ ,ಪ್ರಸನ್ನ ಕುಮಾರ್, ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕ ರಘು ಗೌಡ. ಮುರುಳಿಮೋಹನ್, ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ಎಂಸಿಇ ಕಾಲೇಜು ಪ್ರಧಾನ ಕಾರ್ಯದರ್ಶಿ ಜಗದೀಶ್ ಚೌಡಹಳ್ಳಿ, ಸಂಘದ ಉಪಾಧ್ಯಕ್ಷ ಎಚ್.ಟಿ.ಮೋಹನ್ ಕುಮಾರ್, ಕಾರ್ಯದರ್ಶಿ ಪಿ.ಎ ಶ್ರೀನಿವಾಸ್, ಸಿ.ಬಿ. ಸಂತೋಷ್ ಕಾರ್ಯಕಾರಿ ಸಮಿತಿ ಸದಸ್ಯರು, ತಾಲ್ಲೂಕು ಸಂಘದ ಪದಾಧಿಕಾರಿಗಳಿ ಹಾಗೂ ಹಿರಿಯ ಕಿರಿಯ ಸದಸ್ಯರು ಸೇರಿದಂತೆ ಇತರೆ ಗಣ್ಯರು ಹಾಜರಿದ್ದರು.
