ಇತ್ತೀಚಿಗೆ ಸೋಶಿಯಲ್ ಮೀಡಿಯಾದ ತುಂಬಾ ʼದೇವರ ನಾಡುʼ ಎಂದು ಖ್ಯಾತಿಯಾದ ಕೇರಳದ ಮಾನಂದವಾಡಿಯಿಂದ ಅನತಿದೂರದಲ್ಲಿರುವ ಪರಿಸರ ರಮಣೀಯ ತಾಣವೊಂದು ಯಾವುದೋ ಒಂದು ನದಿಯ ತೀರದಲ್ಲಿ, ಸುತ್ತಲೂ ಗುಡ್ಡ-ಗಾಡು ಕಾನನದ ತಪ್ಪಲಿನಲ್ಲಿ ಅಸಂಖ್ಯಾತ ಜನರು ದೂರದ ಊರುಗಳಿಂದ ಕೊಟ್ಟಿಯೂರಿಗೆ ಲಗ್ಗೆ ಇಡುತ್ತಿರುವುದು ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ ಸ್ಟಾಗ್ರಾಂ ತುಂಬಾ ಆನೆಗಳ ಮೇಲೆ ಮಾವುತರು ಕುಳಿತು ಯಾವುದೋ ಶತಮಾನಗಳ ಸಂಪ್ರದಾಯವನ್ನು ಉತ್ಸವದಂತೆ ಆಚರಿಸುತ್ತಿರುವುದು ವಿಡೀಯೋ ಮೂಲಕ ನನ್ನ ಗಮನಕ್ಕೆ ಬಂತು.
ಈ ಕಾಡು ಬೆಟ್ಟಗಳೆಂದರೆ ಮೊದಲೇ ಪ್ರೀತಿ ಇದ್ದ ನನಗೆ ಈ ಜಾಗಕ್ಕೆ ಹೋಗಲೇಬೇಕಾದ ಉತ್ಕಟ ಆಸೆಯಾಗಿ ಭಾನುವಾರದಂದು ಸ್ನೇಹಿತರೊಡಗೂಡಿ ಕೊಟ್ಟಿಯೂರಿಗೆ ಹೊರಡಲು ಸಿದ್ದನಾದೆ. ಮುಂಗಾರಾದ್ದರಿಂದ ಕೇರಳದ ಗಡಿಯಂಚಿನಿಂದಲೇ ಸೋನೆ ಮಳೆ ಅಲ್ಲಲ್ಲಿ ಕಾರಿನ ಗ್ಲಾಸಿಗೆ ರಾಚುತ್ತಿತ್ತು. ನಮ್ಮ ಭಾರತ ದೇಶದಲ್ಲಿ ಮುಂಗಾರು ಮೊದಲು ಬೀಳುವುದೇ ಕೇರಳದಲ್ಲಿ ದಾರಿಯುದ್ದಕ್ಕೂ ರಸ್ತೆಯ ಬದಿಯಲ್ಲಿ ಬೆಳೆದಿದ್ದ ರಬ್ಬರ್ ಮರಗಳ ಮೇಲೆ ಪಚ್ಚ ಹಸುರಿನ ಪಾಚಿ ಮೈಗೆ ಮೆತ್ತಿಕೊಂಡಿರುವ ಚರ್ಮದಂತೆ ಕಾಣುತ್ತಿತ್ತು.
ಕೇರಳದ ಮಾದರಿಯಲ್ಲಿನ ಮನೆಗಳನ್ನು ನೋಡುವುದೇ ಒಂದು ಚೆಂದ ಕಣ್ರೀ,,, ಅದೆಷ್ಟು ಸೊಗಸಾಗಿರ್ತಾವೆ ಅಂದ್ರೆ ಜೀವನದಲ್ಲಿ ಒಂದ್ಸಾರಿಯಾದ್ರೂ ಈ ಮನೆಯಲ್ಲಿ ವಸತಿ ಹೂಡಿ ಒಂದ್ ಸೆಲ್ಪಿ ತೆಗೆದು ಸೋಶಿಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಬೇಕನ್ನುವಷ್ಟು ಮುದ್ದಾಗಿರ್ತಾವೆ.
ದಾರಿಯುದ್ದಕ್ಕೂ ಮಳೆಯೋ ಮಳೆ ಸುರಿವ ಸೋನೆಗೂ, ಬೀಸೋ ಗಾಳಿಗೂ, ಹಬೆಯಂತೆ ಬೆಟ್ಟದ ಮೇಲಿಂದ ಎದ್ದೇಳ್ತಿರೋ ಮಂಜಿಗೂ, ನಡು ನಡುವೆ ಮುತ್ತಿನ ಮಣಿಗಳಂತೆ ರಪ ರಪನೆ ಬೀಳ್ತಿರೋ ಮಳೆ ಹನಿಗೂ ʼದೇವ್ರೇ ಇವತ್ತು ಈ ಹಾಳಾದ್ ಮಳೇಲಿ ಕೊಟ್ಟಿಯೂರ್ ಶಿವನನ್ನ ದರ್ಶನ ಮಾಡೋದೆ ಡೌಟುʼ ಅಂತ ಮನಸ್ಸಿನಲ್ಲಿಯೇ ಅಂದುಕೊಂಡವಾದರೂ ದೂರದ ದಾರಿ ಬಂದಿದ್ದೇವೆ ವರ್ಷದಲ್ಲಿ ಮುವ್ವತ್ತು ದಿನಗಳು ಮಾತ್ರ ಓಪನ್ ಇರೋ ದೇವರು ಮಳೇಲಿ ನೆಂದ್ರು ಪರವಾಗಿಲ್ಲ ದರ್ಶನ ಮಾಡೇ ತೀರಬೇಕು ಎಂದುಕೊಂಡು ಕೊಟ್ಟಿಯೂರಿನ ಶಿವನ ದೇವಾಲಯದ ಕಡೆ ಸಾಗಿದೆವು.

ಭಾನುವಾರವಾದ್ದರಿಂದ ನೂರಾರು ಕಿಲೋ ಮೀಟರುಗಳಿಂದ ಬಂದಿದ್ದ ಜನ ಜಂಗುಳಿಯಲ್ಲಿ ಆ ಕಾಡಿನ ಕಿರಿದಾದ ರಸ್ತೆ ವಾಹನಗಳಿಂದ ತುಂಬಿ ಹೋಗಿತ್ತು. ಆದರೂ ಕೇರಳದ ಆ ದೇವಾಲಯದ ಮಾರ್ಗ ಮಧ್ಯದ ಮನೆಗಳ ಮುಂದೆ ವಾಹನಗಳಿಗೆ ʼಪೇ ಪಾರ್ಕಿಂಗ್ʼ ವ್ಯವಸ್ಥೆ ಇದ್ದರಿಂದಲೂ ದೇವಾಲಯದ ಕಮಿಟಿಯವರು ಅಲ್ಲಲ್ಲಿ ನಿಂತು ವಾಹನಗಳಿಗೆ ದಾರಿ ಹೋಕರಿಗೆ ರಿಕ್ವೆಸ್ಟ್ ಮಾಡಿ ಸಂಚಾರ ದಟ್ಟಣೆಗೆ ಅನುವು ಮಾಡಿಕೊಡುತ್ತಿದ್ದದ್ದುದರಿಂದ ಹೇಳಿಕೊಳ್ಳಲಾರದಂತಹ ತೊಂದರೆಯೇನೂ ಸಂಭವಿಸಲಿಲ್ಲ.
ನಾವು ಕಾರನ್ನು ಮಾರ್ಗ ಮಧ್ಯದ ಮನೆಯೊಂದರ ಹೊರಾಂಡದಲ್ಲಿ ಪಾರ್ಕ್ ಮಾಡಿ ನಡೆದುಕೊಂಡೆ ಒಂದು ಕಿಲೋ ಮೀಟರ್ ನಡೆದು ದೇವಾಲಯದ ಕಡೆ ಹೊರಟೆವು. ದೂರದಿಂದಲೇ ಬಿಳಿ ಶಲ್ಯ ಪಂಚೆ ಧರಿಸಿ ಸೇತುವೆಯೊಂದರ ಮಾರ್ಗ ಮಧ್ಯದಲ್ಲಿ ಜನ ಕ್ಯೂ ನಿಂತಿದ್ದು ನೋಡಿ ಆಶ್ಚರ್ಯವಾಯಿತು. ವಾವಲಿ ನದಿಯು ಸೇತುವೆ ಕೆಳಗೆ ಶಾಂತವಾಗಿ ಹರಿಯುತ್ತಿತ್ತು. ನಾವು ಜನರ ಕ್ಯೂ ನೋಡಿ, ದೇವಾಲಯ ಎಲ್ಲಿ ಎಂದು ಹುಡುಕಿದೆವು.
ಇದನ್ನು ಓದಿ: ನಾನ್-ಸ್ಟಿಕ್ ಪಾತ್ರೆಗಳ ಟೆಫ್ಲಾನ್ ಕೋಟಿಂಗ್ ಅಪಾಯ – ಆರೋಗ್ಯ ತಜ್ಞರಿಂದ ಎಚ್ಚರಿಕೆ
ಸುತ್ತಲೂ ಬೆಟ್ಟ ದಟ್ಟವಾದ ಕಾನನ ಅದರ ಮಧ್ಯದಲ್ಲಿ ತಾಳೆ ಗರಿಗಳಿಂದ ನಿರ್ಮಿಸಲ್ಪಟ್ಟ ದೇವಾಲಯದ ಪ್ರಾಂಗಣ ಅದರ ಸುತ್ತಲೂ ವಾವಲಿ ನದಿಯ ನೀರು, ಆ ನೀರಿನಲ್ಲಿ ಭಕ್ತಿಯಿಂದ ಕೈ ಮುಗಿಯುತ್ತಾ ತೆರಳುವ ಜನ ಅದರ ನಡುವೆ ಭಾನೆತ್ತರಕ್ಕೆ ಬೆಳೆದು ನಿಂತ ಟಬೆಬುಯಾ ರೋಸಿಯದ ಮರದಂತಿರುವ ನೀಳವಾದ ಮರ ತುಳಸಿ ಕಟ್ಟೆಯಂತಿರುವ ಸತಿ ದೇವಿಯ ವೃತ್ತಾಕಾರದ ಪೀಠ ಅದರ ಪಾರ್ಶ್ವ ದಿಕ್ಕಿನಲ್ಲಿಯೇ ಇರುವ ಉಧ್ಬವ ಕಲ್ಲುಬಂಡೆಯ ಸ್ವಯಂಭೂ ಶಿವ ದೇವರು, ಮಳೆ ಗಾಳಿಯಿದ್ದರೂ ಪ್ರಕಾಶಮಾನವಾಗಿ ಬೆಳಗುವ ಜ್ಯೋತಿ, ಭಕ್ತರಿಗೆ ಮಲಯಾಳಂ ಭಾಷೆಯಲ್ಲಿಯೇ ದೇವಾಲಯದ ವಿಧಿವಿಧಾನಗಳ ಬಗ್ಗೆ ತಿಳಿ ಹೇಳುವ ರೀತಿ, ತಾಳೆ ಗರಿಯ ಗುಡಿಸಲುಗಳಲ್ಲಿ ಋಷಿಗಳಂತೆ ಗಂಧವನ್ನು ತೇದು ಚೂರು ಬಾಳೆ ಎಲೆಯಲ್ಲಿ ಭಕ್ತರಿಗೆ ನೀಡುವ ರೀತಿ ಆಲಯವೇ ಇಲ್ಲದಿರುವ ಆ ತಾಳೆ ಗರಿಯ ಗುಡಿಸಲಿನ ಸುತ್ತ ರೌಂಡ್ ಹಾಕುತ್ತಾ ತ್ರಿಶೂಲ ಮತ್ತು ಬೆಳಗುವ ಜ್ಯೋತಿಯಿಂದಲೇ ದೇವರೆಲ್ಲಿ ಕೊಟ್ಟಿಯೂರಿನ ಶಿವ ದೇವರೆಲ್ಲಿ ಎಂದು ಭಕ್ತರ ಕಣ್ಣುಗಳು ಹುಡುಕುವ ಪರಿ, ʼಕೊಟ್ಟಿಯೂರು ವ್ಯಸಖ ಮಹೋತ್ಸವದ ಪೂಜೆ ಪುನಾಸ್ಕಾರಗಳು ಆರಂಭವಾಗುವಾಗ ಒಂದು ಮೂಲೆಯಿಂದ ಬರುವ ಎರಡು ದೈತ್ಯ ಆನೆಗಳು,ಆನೆಗಳ ಹಿಂದೆ ಬಂದ ಮಾವುತ ದೇವಾಲಯದ ಆವರಣ ತಲುಪಿ ಆನೆಯನೇರಿ ಭಕ್ತಿಯಿಂದ ಪೊರಮೊಟ್ಟು ಛತ್ರಿ ಚಾಮರ, ತುಳಸಿ, ಕನಕಾಂಬರ ಹೂಗಳಿಂದಲಂಕಾರವಾದ ಸತಿ ದೇವಿ ಹಾಗೂ ಶಿವನ ಮೂರ್ತಿಗಳನ್ನು ಆನೆಯ ಮೇಲಿರಿಸಿಕೊಂಡು ಗಜಗಾಂಭೀರ್ಯದ ಮಾವುತನ ನೋಟ ಹಾಗೂ ಆನೆಗಳ ನಡಿಗೆ , ವಿವಿಧ ವಾದ್ಯಗಳ ಮೇಳೈಸಿ ಮೊಳಗುವ ಸದ್ದು, ಆ ಮೆರವಣಿಗೆಯ ಮುಂದೆ ಬಿದಿರು ಬೊಂಬಿನ ನಳಿಕೆಯಲ್ಲಿ ಎಣ್ಣೆ ಹಾಗೂ ಪಂಜಿಗೆ ಬೆಂಕಿ ಹಚ್ಚಿಸಿಕೊಂಡು ತಾಳೆ ಗರಿಗಳಿಂದ ತಯಾರಿಸಿದ ಛತ್ರಿಗಳನ್ನು ಧರಿಸಿಕೊಂಡು ಶಂಕವ ಮೊಳಗಿಸುತಾ, ಸಾಗುವ ಸೇವಕರು ಈ ಮಹೋತ್ಸವದ ಮೆರವಣಿಗೆ ನೋಡುಗರನ್ನು ಸ್ಟನ್ನಾಗಿಸಿ ಯಾವುದೋ ಶತಮಾನದ ಆಚರಣೆ ಸಂಪ್ರದಾಯಗಳ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

ಇದೆಲ್ಲಾ ಆಚರಣೆ ಸಂಪ್ರದಾಯಗಳನ್ನು ನೋಡಿದ ಮೇಲೆ ಆ ದೃಶ್ಯ ನಿಮ್ಮನ್ನು ಕಾಡದೆಯೇ ಬಿಡುವುದಿಲ್ಲ ಪ್ರಕೃತಿದತ್ತವಾದ ಈ ಶಿವ ದೇವಾಲಯದ ವೈಭವದ ಮೆರವಣಿಗೆ ನೋಡಿದ ಮೇಲೆ ನನಗನಿಸಿದ್ದು, ಇದು ಸಾಮಾನ್ಯವಾದ ಆಚರಣೆಯಲ್ಲ ಇದೊಂದು ಶತಶತಮಾನಗಳಿಂದ,ಯುಗ ಯುಗಗಳಿಂದಲೂ ನಡೆದುಕೊಂಡು ಬಂದ ಹಲವು ಪುರಾಣ ಪ್ರಸಿದ್ಧ ಕಥೆಗಳುಳ್ಳ ದೇವಾಲಯವಾಗಿದೆ. ಎಂಬುದು ಖಚಿತವಾಯಿತು.
ದೇವಾಲಯದ ಸುತ್ತಲೂ ಪೋಟೋ ವೀಡಿಯೋ ಮಾಡಿಕೊಂಡು ಹೊರಡುವಾಗ ದಾರಿಯುದ್ದಕ್ಕೂ ಬಿದಿರಿನ ಕಟ್ಟಿಗೆಯನ್ನು ಚೆನ್ನಾಗಿ ಚಚ್ಚಿ ಶಾವಿಗೆ ರೂಪದ ಬಿದಿರಿನಿಂದ ತಯಾರಿಸಿದ ವಿಶೇಷ ಗೃಹಲಂಕಾರದ ವಸ್ತುವನ್ನು ಕಂಡು ಅದರ ಬಗ್ಗೆ ತಿಳಿದುಕೊಳ್ಳುವ ನೆಪದಲ್ಲಿ ʼಈ ದೇವಾಲಯದ ವಿಶೇಷವೇನೆಂದುʼ ಕೇಳಿದಾಗ ಕನ್ನಡ ಮಿಶ್ರಿತ ಮಲಯಾಳಂ ಭಾಷೆಯಲ್ಲಿ ಆ ಪ್ರದೇಶದ ಸ್ಥಳೀಯ ವೃದ್ಧನೊಬ್ಬ “ಕೊಟ್ಟಿಯೂರು ವ್ಯಸಖ ಮಹೋತ್ಸವ ಇದರ ಹೆಸರು ಇದೊಂದು 27 ದಿನಗಳ ಕಾಲ ನಡೆಯುವ ಹಿಂದೂ ತೀರ್ಥಯಾತ್ರೆಯಾಗಿದೆ.
ಹಿಂದೂ ಪುರಾಣಗಳಲ್ಲಿ ಮಹತ್ವದ ಘಟನೆಯಾದ ದಕ್ಷ ಯಾಗವನ್ನು ನೆನಪಿಸುವ ಪ್ರಯಾಗ್ನಲ್ಲಿ ನಡೆಯುವ ಕುಂಭಮೇಳದಂತೆಯೇ ಧಾರ್ಮಿಕ ಶುದ್ಧೀಕರಣವನ್ನು ಒಳಗೊಂಡಿರುವ ಆಚರಣೆಯಾಗಿದ್ದು, ಈ ಕಾರಣಕ್ಕಾಗಿ ದಕ್ಷಿಣಕಾಶಿ/ದಕ್ಷಿಣ ವಾರಣಾಸಿ ಎಂತಲೂ ಕೊಟ್ಟಿಯೂರನ್ನು ಕರೆಯುತ್ತಾರೆ” ಎಂದು ಹೇಳಿಯಷ್ಟೇ, ಸುಮ್ಮನಾದರೂ.

ಈ ಸಣ್ಣ ಕಥೆಯನ್ನು ಕೇಳಿದ ನನಗೆ ಇದೊಂದು ಯಜ್ಞ ಭೂಮಿಯಂತೆ ಕಾಣತೊಡಗಿತು. ತಾಳೆ ಗರಿಗಳಿಂದ ಕಟ್ಟಲಾದ ಆಶ್ರಮ ಚಹರೆಗಳ ಕೇಂದ್ರ ಬಿಂದುವಾಗಿರುವುದು ಪರಮಾಶ್ಚರ್ಯವಾಗಿ ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸ್ಥಳೀಯ ಬಲ್ಲವರನ್ನು ಕೇಳಿದಾಗ ಸುಮಾರು 50,000 ಹೆಚ್ಚೂ ಎಕರೆ ಭೂಪ್ರದೇಶವನ್ನು ಹೊಂದಿರುವ ವನ್ಯಜೀವಿ ಅರಣ್ಯ ವಲಯದೊಳಗಿರುವ ನದಿ ಮತ್ತು ಕಲ್ಲುಗಳಿಂದ ಮಾಡಿದ ಎತ್ತರದ ಪೀಠ ಮೇಲೆ ನಿಂತಿದೆ. ಅದರ ಸುತ್ತಲೂ ಕೊಳವಿದೆ, ಕೊಳದ ನೀರು ವಾವಲಿ ನದಿಗೆ ಹರಿಯುತ್ತದೆ. ಮೇಲಿನಿಂದ ನೋಡಿದಾಗ, ಇಡೀ ದೇವಾಲಯ ಶಿವಲಿಂಗವನ್ನು ಹೋಲುವುದು, ಇದರ ವಿಶೇಷ ಹಾಗೂ ಇಲ್ಲಿನ ಶಿವಲಿಂಗ ಸ್ವಯಂಭೂ ಶಿವಲಿಂಗವಾಗಿದೆ. ಈ ದೇವಾಲಯದ ವಿಧಿ ವಿಧಾನಗಳನ್ನು ಒಟ್ಟುಗೂಡಿಸಿದ ಕೀರ್ತಿ ಶಂಕರಚಾರ್ಯರಿಗೆ ಸಲ್ಲುತ್ತದೆ.

ದಂತಕಥೆಗಳ ಪ್ರಕಾರ ದಕ್ಷನ ಕಿರಿ ಮಗಳಾದ ಸತಿ ಶಿವನನ್ನು ತುಂಬಾ ಪ್ರೀತಿಸುತ್ತಿದ್ದಳು ಮತ್ತು ಆತನ ಮಡದಿಯಾಗಲು ಆಶಿಸಿದಳು. ದಕ್ಷನು ತನ್ನ ಪ್ರಭಾವ ಮತ್ತು ಶಕ್ತಿಗಳಿಂದಲೇ ಪ್ರಸಿದ್ಧನಾಗಿದ್ದ, ಇದಕ್ಕೆ ತದ್ವಿರುದ್ಧವಾಗಿ ಶಿವ ಸಾಧರಣ ಜೀವನವನ್ನು ತುಳಿತಕ್ಕೊಳಗಾದವರ ನಡುವೆ ವಾಸಿಸುತ್ತಿದ್ದರಿಂದ ಶಿವನನ್ನು ಸತಿ ವಿವಾಹವಾಗುವುದನ್ನು ವಿರೋಧಿಸಿದನು. ಅದಾಗ್ಯೂ ಸ್ವಯಂವರಯಾಗದಲ್ಲಿ ಸತಿ ನಿಸ್ಸಂದೇಹವಾಗಿ ಶಿವನನ್ನು ಆರಿಸಿಕೊಂಡಳು. ಹೀಗೆ ಸತಿ ಮತ್ತು ಶಿವನ ವಿವಾಹವಾಯಿತು. ಒಮ್ಮೆ ಬ್ರಹ್ಮದೇವ ದಕ್ಷನ ತಂದೆ ಒಂದು ಮಹಾ ಯಜ್ಞವನ್ನು ಕೈಗೊಂಡನು. ಇದರಲ್ಲಿ ಚಕ್ರವರ್ತಿಗಳು, ರಾಜರು ಮತ್ತು ವಿವಿಧ ಪ್ರದೇಶದ ಗೌರವಾನ್ವಿತರು ಭಾಗವಹಿಸಿದ್ದರು. ದಕ್ಷನು ಈ ಸಭೆಗೆ ಬಂದಾಗ ಶಿವ ಮತ್ತು ಸತಿ ಎದ್ದು, ನಿಂತು ಸ್ವಾಗತಿಸಲಿಲ್ಲ ಎಂಬ ಕಾರಣಕ್ಕಾಗಿ ಭೃಗ ಋಷಿಗೆ ಯಜ್ಞನದ ಅಧ್ಯಕ್ಷತೆ ನೀಡಿ, ಶಿವ ಮತ್ತು ಸತಿಯನ್ನು ಉದ್ದೇಶಪೂರಕವಾಗಿ ಹೊರಗಿಟ್ಟನು. ಶಿವನು ಆಹ್ವಾನವಿಲ್ಲದ ಸಭೆಗೆ ಹಾಜರಾಗಲು ನಿರಾಕರಿದಾಗ ಸತಿ ಸಮಾರಂಭಕ್ಕೆ ಹಾಜರಾಗಲು, ಶಿವನಲ್ಲಿ ಕೇಳಿಕೊಂಡಾಗ ಶಿವನು ನಂದಿಯೊಂದಿಗೆ ಸತಿಗೆ ಹೆತ್ತವರನ್ನು ಭೇಟಿ ಮಾಡಲು ಅವಕಾಶ ನೀಡಿದನು.
ಇದನ್ನು ಓದಿ: “ಉಭಯಸಂಕಟ-ಡೇನಿಯಲ್ ಡೆನ್ನೆಟ್ – ಸಾದೃಶ್ಯ- ಹುಳು”
ಆಹ್ವಾನಿಸದ ಕಾರ್ಯಕ್ರಮಕ್ಕೆ ಬಂದ ಸತಿಯನ್ನು ದಕ್ಷ ಅಪಾರವಾಗಿ ಅವಮಾನಗೊಳಿಸಿ ಶಿವನು ನಾಸ್ತಿಕ ಮತ್ತು ಸ್ಮಶಾನವಾಸಿ ಎಂದು ಜರಿದನು. ದಕ್ಷನ ಈ ದುರಹಂಕಾರದ ವರ್ತನೆಯನ್ನು ಶಪಿಸಿದ ಸತಿ, ಅವಮಾನವನ್ನು ಸಹಿಸಲಾಗದೆ ಸತಿ ಯಜ್ಞದ ಬೆಂಕಿಗೆ ಹಾರಿ ದುರಂತವಾಗಿ ಆತ್ಮಹುತಿಯಾದಳು. ತನ್ನ ಪತ್ನಿಯ ಸಾವಿನ ಸುದ್ದಿ ಕೇಳಿದ ಶಿವನು ದುಃಖ ಮತ್ತು ಕೋಪದಿಂದ ಶಸ್ತ್ರಸಜ್ಜಿತ ಭಯಂಕರ ವೀರಭದ್ರ ಮತ್ತು ಭದ್ರಕಾಳಿಯನ್ನು ಕಳಿಸಿ ದಕ್ಷನನ್ನು ಕೊಂದು ಯಜ್ಞವನ್ನು ನಾಶಪಡಿಸುವಂತೆ ಆಜ್ಞಾಪಿಸಿದಾಗ ಉಗ್ರವೀರಭದ್ರ, ಭದ್ರಕಾಳಿ ಮತ್ತು ಭೂತಗಣರು ದಕ್ಷನ ಮೇಲೆ ದಾಳಿ ನಡೆಸಿ ದಕ್ಷನನ್ನು ಸೆರೆಹಿಡಿದು ಶಿರಚ್ಛೇದ ಮಾಡಿ ವಿಜಯದ ಅಂತಿಮ ಕ್ರಿಯೆಯಾಗಿ ಭೃಗು ಋಷಿಯ ಬಿಳಿ ಗಡ್ಡವನ್ನು ಕಿತ್ತುಹಾಕಿದರೆಂದು ವಾಯುಪುರಾಣದಲ್ಲಿ ಉಲ್ಲೇಖವಿದೆ. ಮಹಾಯಜ್ಞ ಇಂತಹ ಅಡಚಣೆಯಿಂದ ವಿನಾಶವನ್ನು ಉಂಟುಮಾಡಬಹುದೆಂದು, ಬ್ರಹ್ಮ ಮತ್ತು ವಿಷ್ಣು ದುಃಖಿತ ಶಿವನನ್ನು ಯಜ್ಞವನ್ನು ಮುಂದುವರೆಸಲು ಒತ್ತಾಯಿಸಿದಾಗ ಶಿವನ ಹೃದಯ ವಿದ್ರಾವಕ ದುಃಖಕ್ಕೆ ಜಗತ್ತು ಕಲಕಿತು.

ಯಜ್ಞಕ್ಕಾಗಿ ಉದ್ದೇಶಿಸಲಾದ ಟಗರಿನ ತಲೆಯನ್ನು ದಕ್ಷನ ಶಿರಚ್ಛೇದಿತ ದೇಹಕ್ಕಿರಿಸಿ ಅವನ ಜೀವವನ್ನು ಪುನಃಸ್ಥಾಪಿಸಿ ಯಜ್ಞವನ್ನು ಪೂರ್ಣಗೊಳಿಸಿದನು. ಶಿವನು ಸತಿಯ ನಿರ್ಜೀವ ದೇಹವನ್ನು ಹೊತ್ತುಕೊಂಡು ಭೂಮಿಯಾದ್ಯಾಂತ ಅಲೆದಾಡಿದನು. ಆ ಪ್ರಯಾಣದ ಸಮಯದಲ್ಲಿ ಅವಳ ದೇಹದ ಭಾಗಗಳು ಎಲ್ಲೆಲ್ಲಿ ಬಿದ್ದವೋ ಅವುಗಳು ಶಕ್ತಿ ಪೀಠಗಳಾದವು.
ಈ ಹಿನ್ನಲೆಯಿಂದ ಕೊಟ್ಟಿಯೂರು ಹೆಸರೇ ಸೂಚಿಸುವಂತೆ ಬ್ರಹ್ಮ, ವಿಷ್ಣು ಮತ್ತು ಶಿವನ ಸಭೆಯಾಗಿದೆ. ಆದ್ದರಿಂದ ಕೂಡಿ ಮತ್ತು ಕೊಟ್ಟಿಯೂರಾಗಿದೆ. ಸತಿ ದೇವಿಯ ಕಣ್ಣೀರು ಮತ್ತು ಶಾಪವನ್ನು ಹೊತ್ತುಕೊಂಡ ಭೂಮಿಯನ್ನು ಕಾಳಿ ಆಳಲು ಪ್ರಾರಂಭಿಸಿದಾಗ ಕೇರಳವು ನೀರಿನಲ್ಲಿ ಮುಳುಗಿತು ಪರುಶುರಾಮನು ವಾಸಿಸಲು ಒಂದು ಸ್ಥಳ ಬೇಕಿತ್ತು ವರುಣನ ಕೋರಿಕೆಯ ಮೇರೆಗೆ ಅವನು ತನ್ನ ಕೊಡಲಿಯನ್ನು ಗೋಕರ್ಣದಿಂದ ಕನ್ಯಾಕುಮಾರಿಗೆ ಎಸೆದಾಗ ಕೇರಳವು ಮತ್ತೆ ಸಮುದ್ರದಿಂದ ಹೊರಹೊಮ್ಮಿತು ಕಾಳಿಯು ಪರಶುರಾಮನ ಮೇಲೆ ದಾಳಿ ಮಾಡಿದಾಗ ಆತನು ಕಾಳಿಯನ್ನು ಸೋಲಿಸಿ ಕಾಳಿಯನ್ನು ಕೊಲ್ಲಲು ತನ್ನ ಕಡಲಿಯನ್ನು ಎತ್ತಿದಾಗ ತ್ರಿಮೂರ್ತಿಗಳು ಅಲ್ಲಿ ಸಾಕರಗೊಂಡು ಪರಶುರಾಮನನ್ನು ತಡೆದರು. ಕೊಟ್ಟಿಯೂರಿನಲ್ಲಿರುವ ಶಿವನ ಸ್ವಯಂ ಭೂಲಿಂಗದ ಆವರಣಕ್ಕೆ ಅವನು ಎಂದಿಗೂ ಬರಬಾರದೆಂದು, ಷರತ್ತು ವಿಧಿಸಿ ಕಾಳಿಯನ್ನು ಬಿಡುಗಡೆ ಮಾಡಿದನು. ಆ ಸ್ಥಳದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಲು ಅವನು ಇಪ್ಪತ್ತೇಳು ದಿನಗಳ ಉತ್ಸವವನ್ನು ಪ್ರಾರಂಭಿಸಿದನು ಎಂಬ ಪ್ರತೀತಿ ಇದೆ.

– ಕೆ.ಶ್ರೀಧರ್ (ಕೆ.ಸಿರಿ)
ಚಾಮರಾಜನಗರ

[…] […]