ನನ್ನ ವೃತ್ತಿಜೀವನವನ್ನು 1984 ನೆ ಇಸವಿಯ ಜನವರಿ ತಿಂಗಳಂದು ಪ್ರಾರಂಭಿಸಿದೆ. ಆಗತಾನೆ ನಾನು ನನ್ನ ಮನಸ್ಸನ್ನು ಅರಿಯುವ ಪ್ರಾರಂಭಿಕ ದಿನಗಳು. ಮನಸ್ಸಿನಲ್ಲಿ ಅಳಕು ಮತ್ತು ಆತಂಕ ಮನೆ ಮಾಡಿದ್ದ ಸಮಯ. ಅತ್ತ ನಗರ ಇತ್ತ ಪಟ್ಟಣವಲ್ಲದ ಹಾಸನದಲ್ಲಿ ನನ್ನ ಖಾಸಗಿ ವೃತ್ತಿ ಜೀವನವನ್ನು ಶುರು ಮಾಡಿಯೇ ಬಿಟ್ಟೆ. ಸಕಾಲದಲ್ಲಿ ನನ್ನ ಆಪ್ತ ವೈದ್ಯ ಮಿತ್ರರು, ಮಿತ್ರರು, ಬಂಧುಗಳು ನನ್ನ ನೆರವಿಗೆ ಆದರು. ನಾನು ಅವರೆಲ್ಲರನ್ನು ಮರೆಯುವ ಹಾಗಿಲ್ಲ. ನಾನು ಅವರಿಗೆಲ್ಲಾ ಸದಾ ಚಿರಋಣಿ. ಸಾಕಷ್ಷು ಮಿತ್ರರಿದ್ದರೂ ಸಾಂಧಂರ್ಭಿಕ ವಿಚಾರಗಳಿಗಾಗಿ ವಕೀಲರ ಜೊತೆ ಒಡನಾಟ ಹೆಚ್ಚಾಗಿತ್ತು. ನನ್ನ ಮತ್ತು ವಕೀಲ ಸ್ನೇಹಿತರ ನಡುವಿನ ವಿಚಾರ ಧಾರೆಗಳಾದ ತರ್ಕ, ಅಧ್ಯಾತ್ಮ, ಮನಸ್ಸು, ಪ್ರಭುತ್ವ ಹೀಗೆ ಒಳಗೊಂಡಿದ್ದವು. ಆಗ ನನ್ನ ವೃತ್ತಿ ಜೀವನದಲ್ಲಿ ಅಷ್ಟೊಂದು ಕಾರ್ಯ ನಿರತವಾಗಿಲ್ಲದ ಸಮಯದಲ್ಲಿ ನನ್ನಲ್ಲಿಗೆ ಸಲಹಗೆ ಬಂದ ಒಬ್ಬ ನಾರಿಯ ಬಗ್ಗೆ ಹಲವಾರು ತಿಂಗಳ ಕಾಲ ವಕೀಲ ಸ್ನೇಹಿತರ ಜೊತೆ ಚರ್ಚೆ ಮಾಡಿದ್ದ ವಿಚಾರವನ್ನು ಸಂಕ್ಷಿಪ್ತವಾಗಿ ತಿಳಿಸುವೆ.
ನನ್ನ ಚಿಕ್ಕ ಸಲಹಾ ಕೊಠಡಿಯಲ್ಲಿ ಬೆಳಿಗ್ಗೆ ಎಂದಿನಂತೆ ದಿನ ಪತ್ರಿಕೆ ಓದುತ್ತಿದ್ದಾಗ “ಮೆ ಐ ಕಮ್ ಇನ್ ಡಾಕ್ಟರ್” ಧ್ವನಿ. ಬಾಗಿಲ ಕಡೆ ತಿರುಗಿ “ಎಸ್ ಎಸ್” ಅಂದೆ. ಆಕೆ ಆಸಿನಾರಾದರು. ಸುಮಾರು 32 ಅಥವ 35 ವರ್ಷ ಆಸುಪಾಸಿನ ಮಿಸ್ ಎಕ್ಸ್. ಮದುವೆ ಆಗಿಲ್ಲ. ನಡು ಕಂದು ಬಣ್ಣ ಅವರದ್ದು. ಅಷ್ಟೇನು ಸುಂದರವಲ್ಲ ಆದರೇ ನೋಟ ತೆಗೆಯುವಹಾಗಿಲ್ಲ. ಉಟ್ಟಿದ್ದ ಬೂದು ಬಣ್ಣದ ಸೀರೆಯಲ್ಲಿ ಸುಂದರವಾಗೇ ಕಾಣುತ್ತಿದ್ದರು. ಅವರ ಮೈ ಮಾಟ ಮಾತ್ರ ಎಲ್ಲರನ್ನು ಆಕರ್ಷಿಸುತಿತ್ತು. ಅಚ್ಚು ಬೂದು ಬಣ್ಣದ ಕುಪ್ಪಸ ಉಟ್ಟಿದ್ದ ಸೀರೆಗೆ ಹೊಂದಾಣಿಕೆ ಆಗುತ್ತಿತ್ತು. ಆಕರ್ಷಣೆಗೆ ತಕ್ಕಂತೆ ಕುಪ್ಪಸವನ್ನು ಹೊಲಿಸಲಾಗಿತ್ತು. ಸೀರೆ ಉಟ್ಟ ರೀತಿ ನೋಡುಗರಿಗೆ ಮಾದಕತೆ ನೀಡುತ್ತಿತ್ತು. ನಾನು ನಿಮ್ಹಾನ್ಸ್ ನಲ್ಲಿ ನನ್ನ ಡಿಪ್ಲೊಮ ಮುಗಿಸಿದ ನಂತರ ಹಿರಿಯ ಪ್ರೊಫೆಸರ್ ಒಬ್ಬರನ್ನು ಬೇಟಿ ಆಗಿ ಆಶೀರ್ವಾದ ಪಡೆಯಲು ಹೋಗಿದ್ದೆ. ಅವರು ನನ್ನ ವೃತ್ತಿ ಬಗ್ಗೆ ವಿಚಾರಿಸಿದಾಗ ನಾನು ಪ್ರಾಕ್ಟಿಸ್ ಮಾಡುತ್ತೇನೆ ಎಂದಿದ್ದೆ. ಅಗ ಅವರು ನನಗೆ ಒಂದು ಕಿವಿ ಮಾತನ್ನು ಹೇಳಿದ್ದರು. ಅದೇನೆಂದರೆ “ನೋಡಪ್ಪ ನಾಗೇಶಾ, ಕೆಲವೊಮ್ಮೆ ಹೆಂಗಸರ ಜೂತೆಯಲ್ಲಿ ಚಿಕಿತ್ಸೆಯನ್ನು ವ್ಯವಹರಿಸುವಾಗ ಅರಿವಿಲ್ಲದ ಭಾವನೆ, ಮೋಹಕತೆ ಮತ್ತು ಸರಿ ಅಲ್ಲದ ವರ್ತನೆಗಳು ಬಂದುಬಿಡುತ್ತವೆ. ತುಂಬಾ ಜೋಪಾನವಾಗಿ ಇರಬೇಕು” ಎಂದು ತಿಳಿಸಿದ್ದರು. ಈಕೆಯ ಎದರು ಪಟ್ಟನೆ ನನ್ನ ಹಿರಿಯ ಪ್ರೊಫೆಸರ್ ಹೇಳಿದ್ದ ನುಡಿಗಳು ಜ್ಞಾಪಕಕ್ಕೆ ಬಂತು. ಎಚ್ಚರದಿಂದ ಕಾರ್ಯ ನಿರತನಾದೆ.
ನಾನು ಆಕೆ ಹೇಳುತ್ತಾ ಹೋಗುತ್ತಿದ್ದನ್ನು ಕೇಳುತ್ತಾ ಹೋದೆ. ಆಕೆಯು ತನ್ನ ಸಮಸ್ಯೆಗಳ ಮಹಾಪೂರವನ್ನೆ ಹರಿಸಿದ್ದಳು. ಸುಮಾರು ಅರ್ಧ ಗಂಟೆಗಳ ಕಾಲ ಆಲಿಸಿದಾಗ ನನಗೆ ಈಕೆ ಖಿನ್ನತೆಗೆ ಒಳಗಾಗಿದ್ದಾಳೆ ಎನ್ನಿಸಿತ್ತು. ಆಕೆಗೆ ಔಷಧಿ ನೀಡದೆ ಮತ್ತೊಮ್ಮೆ ಬರಲು ಹೇಳಿ ಕಳಿಸಿದ್ದೆ. ಸುಮಾರು ವಾರಕ್ಕೊಮ್ಮೆ ಹಲವಾರು ತಿಂಗಳು ಬಂದರು. ಆತ್ಮ ಸಮಾಲೋಚನೆ ಸಂದರ್ಭದಲ್ಲಿ ಆಕೆಯ ಒಳ ಮನಸ್ಸಿನ ಅಂಶಗಳನ್ನು ಕೆದಕಿ ಹೊರ ತೆಗೆಯುತ್ತಿದ್ದೆ. ಈ ವಿಷಯಗಳು ಮಾರ್ಮಿಕವಾಗಿ ಕೂಡಿದ್ದು ಆಂತರಿಕ ಕಾಮನೆಗಳಿಗೆ ಸಂಬಂಧ ಪಟ್ಟ ಚಂಚಲತೆಗಳ ಗೊಂದಲದ ಗೂಡಾಗಿದ್ದವು. ಈ ವಿಷಯಗಳ ಬಗ್ಗೆ ದಿನಂ ಪ್ರತಿ ನನ್ನ ಹಿರಿಯ ವಕೀಲರ ಜೊತೆ ಆಕೆಯ ಗುರುತು ಬಿಟ್ಟುಕೊಡದೆ ಚರ್ಚಿಸುತಿದ್ದೆ. ವಕೀಲ ತನ್ನ ಕಕ್ಷಿದಾರನ ಮನಸ್ಸಿನೊಳಗೆ ಹೋಗದಿದ್ದರೆ ಅವನ ಅಥವಾ ಅವಳ ವ್ಯಕ್ತಿತ್ವವನ್ನು ಅರಿಯಲು ಸಾಧ್ಯವಾಗುವುದಿಲ್ಲ. ಮಾನಸಿಕ ಸಮಸ್ಯೆಗಳನ್ನು ಅರಿಯಲು ಕೆಲ ವೃತ್ತಿಪರರಿಗೆ ಮಾತ್ರ ಸಾಧ್ಯ. ಅವರಲ್ಲಿ ಮನೋ ವೈದ್ಯರು, ಮನ ಶಾಸ್ತ್ರಜ್ಞರು, ಪೋಲಿಸ್ ವೃಂದ ಮತ್ತು ನ್ಯಾಯಾಂಗದವರು.
ಮನಸ್ಸನ್ನು ಅರಿಯುವದು ಆಷ್ಟು ಸುಲಭದ ಕೆಲಸ ಅಲ್ಲ. ಮನಸ್ಸು ಬ್ರಹ್ಮನೇ ಸರಿ. ನನ್ನ ವಕೀಲ ಸ್ನೇಹಿತರ ವಾಗ್ವಾದ ಹೇಗಿತ್ತು ಎಂದರೆ ಅವರ ಯೋಚನೆಗಳು ಉದಾರಿತನ ಹಾಗು ಪ್ರಗತಿಪರವಾಗಿ ಇದ್ದು ಮತ್ತು ನನ್ನದು ಮಹತ್ವ ವಿಜ್ಞಾನ ವಿಷಯಗಳ ಆಧಾರವಾಗಿರುತ್ತಿತ್ತು. ಉದಾಹರಣೆಗೆ ‘ಆಸೆ’. ಪ್ರಗತಿಪರರಿಗೆ ಈ ಆಸೆ ಎಲ್ಲರಿಗೂ ಸಮಾನವಾಗಿ ಸಿಗಬೇಕೆನ್ನುವ ವಾದವಾದರೇ ನನಗೆ ಈ ಆಸೆ (Desire or Happyness) ಯ ವಾಖ್ಯಾನದ ಸಂಕ್ಷಿಪ್ತ ವಿವರಣೆಯನ್ನೇ (Definition) ಕಂಡುಕೊಳ್ಳದಿದ್ದಾಗ ಎಲ್ಲರಿಗೂ ನಿರ್ಧಿಷ್ಟವಾದ ಆಸೆಗಳನ್ನು ಹೇಗೆ ನೀಡಬಲ್ಲೆವು ಎಂಬುದು. ಹೀಗೆ ಅನೇಕ ವಿಷಯಗಳ ಬಗ್ಗೆ ನಾವು ಚರ್ಚೆಗಳಲ್ಲಿ ನಿರತವಾಗುತ್ತಿದ್ದೆವು.
ಮಿಸ್ ಎಕ್ಸ್ ಖಿನ್ನತೆಗೆ ಒಳಗಾಗಿದ್ದು ಮೇಲ್ನೋಟಕ್ಕೆ ಅತಿಯಾದ ಭಾವನಾತ್ಮಕತೆ ಹೊರಸೂಸಿದರೂ ಆಂತರಿಕವಾಗಿ ಭಾವನಾತ್ಮಕ ಅಸ್ಥರಿತೆಯನ್ನು ಹೊಂದಿದ್ದರು. ಸ್ವಸ್ಥ ಮನೋ ಚಂಚಲತೆಗಳು ಹೇರಳವಾಗಿದ್ದವು. ಬೇಡ ಬೇಕು ಗೋಜಲಗಳು ಅಧಿಕವಾಗಿದ್ದವು. ನಿರ್ಧಾರದ ಮನಸ್ಸುಗಳು ಕಡಿಮೆ ಇದ್ದು ಉದ್ಭವ ಆದ ಉತ್ತರಗಳಿಗೆ ವಿರೂಪದೃಷ್ಟಿಕೋನಗಳ ಲೇಪನವಾಗಿರುತಿತ್ತು. ತಾನು ವಯಸ್ಸ್ಕಳಿದ್ದಾಗ ತನ್ನ ಮಣಿಕಟ್ಟನ್ನು ಬ್ಲೇಡ್ನಿಂದ ಕೂಯ್ಕೊಂಡಿದ್ದ ಚಿಹ್ನೆಗಳು ಕಾಣುತಿದ್ದವು (ಇಂತಹ ಲಕ್ಷಣ ಹೊಂದಿರುವ ಹೆಣ್ಣುಮಕ್ಕಳ ವ್ಯಕ್ತಿತ್ವವನ್ನು – Borderline Personality ಎಂದು ಮನೋವಿಜ್ಞಾನ ಹೇಳುತ್ತದೆ). ಇವರ ನಡುವಳಿಕೆ ಹೇಗೆ ಇರುತ್ತಿತ್ತು ಅಂದರೆ ಇಷ್ಟವಾದ ಸಿಹಿ ಬಾಯಿ ಹತ್ತಿರ ತಂದು ಎಸೆಯುವುಂತೆ ಇತ್ತು.
ಅವರು ಒಬ್ಬಾತನನ್ನು ಪ್ರೀತಿಸುತ್ತಿದ್ದರು. ಆಕೆಯ ಅಧಿಕಾರ ಹೇಗಿತ್ತಂದರೆ ಆತನನ್ನು ಗುಲಾಮನಂತೆ ನೋಡುತಿದ್ದರು. ಈಕೆಯ ವರ್ತನೆ ಆತನನ್ನು ಅಡಿಕೆ ಕತ್ತರಿಯಲ್ಲಿ ಸಿಕ್ಕಿಕೊಂಡಂತೆ ಮಾಡಿತ್ತು. ಮದುವೆ ಈಗ ಆಗ ಮಾಡಿಕೊಳ್ಳುತ್ತೆನೆ ಎಂಬ ಬರವಸೆಯನ್ನು ನೀಡಿ ಮುಂದೂಡುತಿದ್ದಳು. ಪಾಪ ಬಡಪಾಯಿ, ಹೇಳುತ್ತಿದ್ದಂತೆ ಕೇಳುತ್ತಿದ್ದರು ಇವರು. ಇತರರೊಂದಿಗೆ ಆತನನ್ನು ಬಲುವಾಗಿ ಪ್ರೀತಿ ತೋರುಸುತಿದ್ದೇನೆ ಎಂದು ವರ್ತಿಸಿ ಒಬ್ಬನೇ ಇದ್ದಾಗ ಮಾತಿನ ಹರಿತದಲ್ಲಿ ಚುಚ್ಚುತ್ತಿದ್ದಳು. ಆತನಿಗೆ ಈಕೆಯನ್ನು ಬಿಡಬೇಕೋ ಅಥವ ಬಿಡಬಾರದೋ ಎಂಬ ಇಕ್ಕಳದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆಕೆಯ ಒಳಗೆ ಬೃಹತ್ ಹುತ್ತ ಬೆಳದಿದ್ದು ಅದರಲ್ಲಿ ಅನುಮಾನ, ಧೋರಣೆ, ತಪ್ಪುಗಳು, ಸಿಡುಕುತನ, ಅಶಾಂತಿ, ಗಲಿಬಿಲಿ, ಉದ್ವೇಗ ಇತ್ಯಾದಿಗಳೇ ಸೇರಿಕೊಂಡಿದ್ದವು. ಈ ಹುತ್ತ ಆಕೆಯ ಪ್ರಿಯತಮನಿಗೆ ಭಯಂಕರವಾಗಿ ತೋರುತಿತ್ತು.
ಆಕೆಯ ಖಿನ್ನತೆಗೆ ಔಷದಿ ನೀಡಿದ್ದೆ, ಆದರೇ ಆಕೆ ತಿರಸ್ಕರಿಸಿದ್ದರು. ಆಕೆ ಕಾರಣ ಕೊಟ್ಟಿದ್ದು ಆ ಔಷಧಿಗಳ ಅಡ್ಡ ಪರಿಣಾಮಗಳು. ನನ್ನ ಹತ್ತಿರ ಬರುವ ಮುನ್ನ ಮನಶಾಸ್ತ್ರಜ್ಞರ ಬಳಿ ತನ್ನ ಮನಸ್ಸಿನ ಸ್ಥಿತಿಗೆ ಆತ್ಮಸಮಾಲೋಚನೆಗಳನ್ನು ಸ್ವೀಕರಿಸಿದ್ದಾರೆ ಮತ್ತು ಕೆಲವು ಮನೋ ವೈದ್ಯರಿಂದ ಚಿಕಿತ್ಸೆಯನ್ನು ಸಹ ಪಡೆದಿದ್ದಾರೆ. ಏನು ಉಪಯೋಗ ಕಂಡಿರಲಿಲ್ಲ. ಒಮ್ಮೆ ಈಕೆಯ ಪ್ರಿಯತಮ ನನ್ನಲ್ಲಿ ಬಂದು ಅಳತೊಡಗಿದರು. ಅವರ ಅಳು ನೋಡಲು ಆಗದೆ ಅವರಿಗೆ ಅವಳ ವ್ಯಕ್ತಿತ್ವವನ್ನು ವಿಸ್ತಾರವಾಗಿ ಹೇಳಿಬಿಟ್ಟೆ. ಇವೆಲ್ಲವನ್ನು ಕೇಳಿದ ಇವರು “ಸರ್ ಏನು ಮಾಡಬೇಕು” ಎಂದರು. ನಿರ್ಣಯ ಅವರಿಗೆ ಬಿಟ್ಟೆ. ಅವರು ಮನೆಯಲ್ಲಿ ವಿಚಾರಿಸಿ ಒಂದು ನಿರ್ಣಯಕ್ಕೆ ಬಂದು ಆಕೆಯಿಂದ ದೂರ ಇರಲು ನಿರ್ಧರಿಸಿದ್ದರು. ಇಲ್ಲಿಂದ ಶುರು ಆಯಿತು ನೋಡಿ ಮುಂದಿನ ಅವಾಂತರ.
ನನಗೆ ಸಾಕಷ್ಟು ಪೇಷಂಟ್ಸ್ ಇದ್ದರು. ಎಕಾಎಕಿ ಮಿಸ್ ಎಕ್ಸ ನನ್ನ ಸಲಹಾ ಕೊಠಡಿಗೆ ನುಗ್ಗಿ ಏರು ಧ್ವನಿಯಲ್ಲಿ ನನ್ನನ್ನು ನಿಂದಿಸಲಾರಂಬಿಸಿದರು. ನಾನು ಏನೂ ತೋಚದೆ ಸಮಾಧಾನ ಪಡಿಸುತ್ತಿದ್ದೆ. ಆದರೆ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ “ನೀನು ಯಾವ ಸೀಮೆ ಡಾಕ್ಟ್ರೋ, ಏನ್ ಹೇಳಿದಿಯೋ ಅವನಿಗೆ…ಬಚ್ಚಾ” ಎಂದು ಬೈದು ಹೋದರು. ಹೌದು ನಾನು ಆಗ ಬಚ್ಚಾನೆ. ತತ್ವ ಜ್ಞಾನಿ ಪ್ಲೂಟೂ ಒಮ್ಮೆ ನುಡಿದಿದ್ದರು “ಪ್ರಪಂಚದಲ್ಲಿ ಯಾರನ್ನಾದರೂ ದ್ವೇಷಿಸಬೇಕಾದರೇ ಅದು ನಿಜ ನುಡಿಯುವನನ್ನು ಮಾತ್ರ”. ಇನ್ನೊಂದು ಮಾತಿದೆ “Truth is always a bitter pill” ಎಂದು.
ಕೆಲವಾರು ವರ್ಷಗಳು ಕಳೆದಿರಬಹುದು. ಅವರ ಕಡೆಯ ನೆಂಟರೊಬ್ಬರು ಅವರ ರೋಗಿಯೂಬ್ಬರನ್ನು ಕರೆತಂದಿದ್ದರು. ಅವರೇ ಈ ಹಿಂದೆ ಆದ ಘಟನೆಯನ್ನು ಪ್ರಸ್ತಾಪಿಸಿ ಆಕೆಯು ಬದುಕಿಲ್ಲ ಎಂದರು. ನನಗೆ ಅಯ್ಯೋ ಪಾಪ ಎಂದು ಎನಿಸಿತ್ತು. ಊರಿನಲ್ಲೇ ಇದ್ದ ಬಂಧುಗಳನ್ನು ವಿಚಾರಿಸಿದಾಗ ನಿಜ ಆಗಿತ್ತು. ಆಕೆಯ ಸಾವು ದುರಂತವೇ ಆಗಿತ್ತು. ದೂರವಿದ್ದ ಈಕೆಯ ಪ್ರಿಯತಮನ ಮದುವೆಯ ಸಂದರ್ಭದಲ್ಲಿ ಆಕೆ ಗಲಾಟೆ ಮಾಡಿದ್ದು, ಆಕೆಯ ನೆಂಟರು ಈಕೆಯ ಉಪಟಳವನ್ನು ಸಹಿಸದೆ ತಮ್ಮ ಹಳ್ಳಿಗೆ ಕರೆದೋಯ್ದಿದ್ದು, ಮದುವೆ ಆಗದ ಈಕೆಯನ್ನು ಹಲವಾರು ಆಸ್ಪತ್ರೆಗಳಲ್ಲಿ ತೋರುತ್ತಿದ್ದರೂ ಫಲಕಾರಿ ಆಗದೆ ಕಣ್ಣು ಮುಚ್ಚಿದಳೆಂಬಾ ವಿಚಾರ ತಿಳಿಯಿತು.
ಇಂಗ್ಲಿಷ್ನಲ್ಲಿ “Man with a womb is called a woman” ಅಂತಾರೆ. ಹೆಣ್ಣಿಗೆ ಗರ್ಭ ಚೀಲ ಒಂದು ಭೂಷಣ, ಅದೊಂದೇ ಇದ್ದರೆ ಸಾಲದು, ಹೆಣ್ಣತ್ವಕ್ಕೆ ಹೆಣ್ಣಿನ ಸಾರ ಇರಬೇಕು. ತಾಳ್ಮೆ, ಶ್ರೇಯಸ್ಸನ್ನು ಬಯಸುವ ಗುಣ, ಮೃದುತ್ವ, ನಯಾ ಮತ್ತು ಬಹು ಕಾರ್ಯಗಳೇ ಮುಖ್ಯ. ನಾನು ತಿಳಿಸಿದ ಈ ಗುಣ ಲಕ್ಷಣಗಳು ಆಕೆಯ ಪ್ರೇಮಿಯಲ್ಲಿ ಕಂಡೆ. ಆದರೆ ಈಕೆಯಲ್ಲಿ ಕಾಣಲಿಲ್ಲ. ಈಗ ಹೇಳಿ “ವೊಂಬ್” ಯಾರ ಸೊತ್ತಾಗಿತ್ತು ಎಂದು?…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

