ಆಲೂರು, ಜುಲೈ 9 – ಖಾಸಗಿ ಕಟ್ಟಡದಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಆಲೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಶೀಘ್ರದಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.
ಪಟ್ಟಣದಲ್ಲಿ ಶಾಲೆ ಮತ್ತು ನಿಲಯಕ್ಕೆ ಭೇಟಿ ನೀಡಿ ಅಡುಗೆಮನೆ, ಶೌಚಾಲಯ, ವಿದ್ಯಾರ್ಥಿನಿಯರ ಮಲಗುವ ಕೋಣೆ, ದಾಸ್ತಾನು ಕೊಠಡಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. “ಇತ್ತೀಚೆಗಷ್ಟೇ ಪಾಳ್ಯ ಬಳಿಯಲ್ಲಿ 24 ಕೋಟಿ ರೂ ವೆಚ್ಚದಲ್ಲಿ 250 ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ನೂತನ ಕಟ್ಟಡ ನಿರ್ಮಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸ್ಥಳಾಂತರಕ್ಕಾಗಿ ತುರ್ತಾಗಿ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರು ಮತ್ತು ತಹಸೀಲ್ದಾರರೊಂದಿಗೆ ಸಮಾಲೋಚನೆ ನಡೆಸಿ, ಕಟ್ಟಡದ ಬಳಿಯೇ ಆಟದ ಮೈದಾನಕ್ಕೆ ಸ್ಥಳ ಗುರುತಿಸಲಾಗುವುದು” ಎಂದು ಹೇಳಿದರು.

ಶಾಸಕರು ಸ್ಥಳದಲ್ಲೇ ವಿದ್ಯಾರ್ಥಿನಿಯರೊಂದಿಗೆ ಊಟ ಸೇವಿಸಿ, ಅಡುಗೆಯ ಗುಣಮಟ್ಟವನ್ನು ಮೆಚ್ಚಿದರು. ಆದರೆ ಅಡುಗೆಗೆ ಬಳಸುವ ಗ್ಯಾಸ್ ಸಿಲಿಂಡರ್ಗಳನ್ನು ಕಟ್ಟಡದ ಒಳಗೆ ಇರಿಸಲಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು, “ಈ ಕ್ರಮ ಅಪಾಯಕಾರಿಯಾಗಿದೆ. ಸಿಲಿಂಡರ್ಗಳನ್ನು ಕಟ್ಟಡದ ಹೊರಗೆ ಇರಿಸಿ ಸುರಕ್ಷತೆ ಖಚಿತಪಡಿಸಬೇಕು” ಎಂದು ಪ್ರಾಂಶುಪಾಲರಿಗೆ ಸೂಚಿಸಿದರು.
ಇದನ್ನು ಓದಿ: ಹಾಸನ: ಕೆಡಿಪಿ ತ್ರೈಮಾಸಿಕ ಸಭೆ – ಶಾಸಕರಿಂದ ಇಲಾಖೆಗಳಿಗೆ ಕಠಿಣ ತಾಕೀತು
ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಶ್ವೇತಾ ಉಪಸ್ಥಿತರಿದ್ದು, ವಸತಿ ನಿಲಯದ ಸಮಸ್ಯೆಗಳ ಬಗ್ಗೆ ಶಾಸಕರಿಗೆ ವಿವರಿಸಿದರು. ಹೊಸ ಕಟ್ಟಡದಲ್ಲಿ ಮಂಚ, ಹಾಸಿಗೆ, ದಿಂಬು, ಸೊಳ್ಳೆಪರದೆ, ಶೌಚಾಲಯ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. “ನೂತನ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊಳ್ಳಲು ಸಾಧ್ಯವಾದಷ್ಟು ಬೇಗ ಕ್ರಮ ಕೈಗೊಳ್ಳಬೇಕು” ಎಂಬ ಮನವಿಯನ್ನು ಅವರು ಸಲ್ಲಿಸಿದರು.
– ವರದಿ: ಆಲೂರು ಪ್ರತಿನಿಧಿ

[…] […]
[…] […]