ಹಾಸನ: ಚನ್ನರಾಯಪಟ್ಟಣ ಪುರಸಭೆಗೆ ಸಂಸದ ಶ್ರೇಯಸ್ ಪಟೇಲ್ ಅವರು ಆಗಮಿಸಿದ್ದ ವೇಳೆ ನಡೆದ ಘಟನೆಗೆ ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಮತ್ತವರ ಬೆಂಬಲಿಗರು ಕಾರಣ ಎಂದು ಪುರಸಭೆ ಅಧ್ಯಕ್ಷ ಸಿ.ಎನ್.ಮೋಹನ್ ಕುಮಾರ್ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಸಂಸದರು ಪುರಸಭೆಯ ನನ್ನ ಚೇಂಬರ್ನಲ್ಲೇ ಸಭೆ ನಡೆಸಲು ಒಪ್ಪಿದ್ದರು. ಆದರೂ ಗೋಪಾಲಸ್ವಾಮಿ ಮತ್ತವರ ಕಡೆಯವರು ಬೀಗ ಒಡೆದು ದಾಂಧಲೆ ಎಬ್ಬಿಸಿದರು. ಮಾತ್ರವಲ್ಲ ನನ್ನ ಮೇಲೂ ಹಲ್ಲೆಗೆ ಮುಂದಾದರು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆ ದೂರು ನೀಡಲಾಗಿದೆ ಎಂದರು.
ನಮ್ಮ ಕಡೆಯಿಂದ ತಪ್ಪಾಗಿದ್ದರೆ ಸಂಸದರು ಮಾತನಾಡಬಹುದಿತ್ತು. ಆದರೆ ಅವರು ಏನನ್ನೂ ಮಾತನಾಡಿಲ್ಲ. ಸಭೆ ನಡೆಸಿ ಹೋದರು. ಅವರನ್ನು ನಾವೂ ಕೂಡ ಹೂಗುಚ್ಛ ನೀಡಿ ಸ್ವಾಗತಿಸಿದೆವು. ಆದರೆ ರಾಜಕೀಯ ದುರುದ್ದೇಶದಿಂದಲೇ ಗೋಪಾಲಸ್ವಾಮಿ, ಪುರಸಭೆ ಮಾಜಿ ಸದಸ್ಯರಾದ ಅನ್ವರ್ಪಾಷ, ಮಿಲ್ಟ್ರಿ ಮಂಜು ಮೊದಲಾದವರು ಸೇರಿ ಸಂಘರ್ಷ ಸೃಷ್ಟಿಸಿದರು. ಗೋಪಾಲಸ್ವಾಮಿ ಅವರ ಕುಮ್ಮಕ್ಕು ನಡವಳಿಕೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದರು.
ಇದನ್ನು ಓದಿ: ಹೃದಯಾಘಾತ ಹಾಗೂ ಹಠಾತ್ ಸಾವು ಪ್ರಕರಣಗಳ ಹಿನ್ನೆಲೆ- ಹಾಸನದಲ್ಲಿ ಉಚಿತ ತಪಾಸಣೆ ಮತ್ತು ಅರಿವು ಕಾರ್ಯಕ್ರಮ
ನಂತರ ಸುದ್ದಿಗೋಷ್ಟಿ ನಡೆಸಿದ ಗೋಪಾಲಸ್ವಾಮಿ ನನ್ನ ಬಗ್ಗೆ ಕೆಳಮಟ್ಟದ ಭಾಷೆ ಬಳಸಿ ಟೀಕಿಸಿದ್ದಾರೆ. ಇದು ಅವರಿಗೆ ಶೋಭೆ ಅಲ್ಲ ಎಂದು ಟಾಂಗ್ ನೀಡಿದರು. ತಪ್ಪು-ಒಪ್ಪು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಈ ಬಗ್ಗೆ ಡಿಸಿ ಅವರಿಗೂ ಇಂದು ದೂರು ನೀಡಲಾಗಿದೆ ಎಂದರು. ಇದೇ ವೇಳೆ ಪುರಸಭಾ ಸದಸ್ಯರಾದ ಪ್ರಕಾಶ್, ಸುಜಾತ ಮೊದಲಾದವರು ನಮ್ಮ ಶಾಸಕರು ಹಾಗೂ ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ, ಸತ್ಯಕ್ಕೆ ದೂರವಾಗಿದೆ. ಸಂಸದರ ಹೆಸರು ಕೆಡಿಸಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಅಭಿವೃದ್ಧಿ ಕಾರ್ಯ ಸಹಿಸಲಾಗದೆ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚನ್ನರಾಯಪಟ್ಟಣ ಟಿಎಪಿಸಿಎಂಸ್ ಅಧ್ಯಕ್ಷ ಮರಗೂರು ಅನಿಲ್ ಮಾತನಾಡಿ, ಕಳೆದ ಮೂರು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಅವರು, ಯಾರಿಗೂ ಅಗೌರವ ತೋರಿಲ್ಲ. ಶಾಸಕರಾದ ಮೂರು ಅವಧಿಯಲ್ಲೂ ರಾಜ್ಯದಲ್ಲಿ ಅವರ ಸರ್ಕಾರ ಇಲ್ಲದೇ ಇದ್ದರೂ, ಎಲ್ಲರ ಸಹಕಾರ, ಸೌಹಾರ್ದತೆಯಿಂದ ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪುರಸಭೆ ಸದಸ್ಯರಾದ ಯೋಗೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷೆ ಹೆಚ್.ಸಿ.ರಾಣಿಕೃಷ್ಣ, ಸದಸ್ಯ ಲಕ್ಷ್ಮಣ್, ರಾಮಕೃಷ್ಣ ಮೊದಲಾದವರಿದ್ದರು.

[…] […]