ಹಾಸನ: ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಇಂದು ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.
ಆಟ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ, ಮಹಾನಗರಪಾಲಿಕೆ ಮೇಯರ್ ಎಂ.ಚಂದ್ರೇಗೌಡ, ಪತ್ರಕರ್ತರು ಕ್ರೀಡಾಕೂಟದ ಮೂಲಕ ಕೆಲಸದ ಜೊತೆಗೆ ಆರೋಗ್ಯವೂ ಮುಖ್ಯ ಎಂಬ ಸಂದೇಶ ರವಾನಿಸಿದ್ದೀರಿ ಎಂದರು.
ಹಿಂದೆ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿದ್ದೀರಿ. ಬಳಿಕ ಕೆಸರು ಗದ್ದೆ ಆಟೋಟ, ಇಂದು ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜನೆ ಮಾಡಿರುವುದು ಸ್ವಾಗತಾರ್ಹ.
ಈ ಮೂಲಕ ದೇಶಿ ಕ್ರೀಡೆಯನ್ನು ಉಳಿಸಿ ಬೆಳೆಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೀರಿ ಎಂದು ಶ್ಲಾಘಿಸಿದರು. ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡಲು ಕೊಡುಗೆ ನೀಡುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಿಂದ ಸಾಧ್ಯ ಎನ್ನುವ ಸಂದೇಶವನ್ನು ಕೊಟ್ಟಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಈ ರೀತಿಯ ಕ್ರೀಡಾಕೂಟಗಳನ್ನು ಆಗಾಗ ಆ ಯೋಜನೆ ಮಾಡಿ ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರತಿ ವರ್ಷ ಪತ್ರಕರ್ತರ ದಿನಾಚರಣೆ ಹಿನ್ನೆಲೆಯಲ್ಲಿ ನಡೆಸುವ ಕ್ರೀಡಾ ಕೂಟಗಳು ಒಳ್ಳೆಯ ಬೆಳವಣಿಗೆ ನಮ್ಮ ಮಹಾನಗರ ಪಾಲಿಕೆ ವತಿಯಿಂದ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿಮ್ಮ ಮಾತನಾಡಿ, ಪತ್ರಕರ್ತರು ಎಂದರೇ ಯಾವ ಸಮಯದಲ್ಲೂ ವಿರಾಮವೇ ಇರುವುದಿಲ್ಲ.
ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಲೆ ಇರುತ್ತಾರೆ. ಯಾವ ಸಂಕಷ್ಟ ಪರಿಸ್ಥಿತಿಯಲ್ಲೂ ಕೆಲಸ ಮಾಡಲೇಬೇಕು. ಇಂತಹ ಒತ್ತಡದಲ್ಲೂ ಕೂಡ ಪ್ರತಿವರ್ಷ ಪತ್ರಿಕಾ ದಿನಾಚರಣೆ ಅಂಗವಾಗಿ ಇಂತಹ ಕ್ರೀಡಾಕೂಟ ಹಮ್ಮಿಕೊಂಡಿರುವುದು ಸಂತೋಷದ ವಿಷಯ. ಎಲ್ಲರೂ ಒಂದು ಕುಟುಂಬದಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನೆರವಾಗುವ ಈ ಕ್ರೀಡಾಕೂಟದಲ್ಲಿ ಸಂತೋಷದಿಂದ ಪಾಲ್ಗೊಳ್ಳಿ, ಸೋಲು ಗೆಲುವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಇದೇ ವೇಳೆ ಶುಭ ಹಾರೈಸಿದರು.
ರಾಜ್ಯ ಪತ್ರಕರ್ತರ ಸಂಘದ ವಿಶೇಷ ಪ್ರತಿನಿಧಿ ರವಿ ನಾಕಲಗೂಡು ಮಾತನಾಡಿ, ಶಿವಾನಂದ ತಗಡೂರು, ಕೆ.ಆರ್. ಮಂಜುನಾಥ್ ಅವರು ಚಾಲನೆ ನೀಡಿದ ಕ್ರೀಡಾಕೂಟವನ್ನು ಕಳೆದ 20 ವರ್ಷಗಳಿಂದ ಪ್ರತಿವರ್ಷ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್, ಕೆಲ ದಿನಗಳ ಹಿಂದೆ ಕೆಸರು ಗದ್ದೆ ಕ್ರೀಡಾಕೂಟ ಏರ್ಪಡಿಸಿದ್ದು, ಯಶಸ್ವಿಯಾಗಿ ನಡೆದಿದೆ. ಇಂದು ಶೆಟಲ್ ಬ್ಯಾಡ್ಮಿಂಟನ್ ಏರ್ಪಡಿಸಿದ್ದು, ಮುಂದಿನ ದಿನಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದರು. ನಂತರ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಲೀಲಾವತಿ, ಕೆ.ಆರ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷ ಮೋಹನ್ ಕುಮಾರ್, ಕೆ.ಎಂ.ಹರೀಶ್, ಖಜಾಂಚಿ ಕುಮಾರ್, ಕಾರ್ಯದರ್ಶಿ ಪಿ.ಎ. ಶ್ರೀನಿವಾಸ್, ಸಿ.ಬಿ. ಸಂತೋಷ್ ಹಾಗೂ ಜಿಲ್ಲೆಯ ಇತರೆ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು, ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಹುಮಾನ:-
ಎ ವಿಭಾಗದಲ್ಲಿ ಶರತ್ ಹೆಚ್.ಎಸ್ ಮತ್ತು ಅಕ್ಬರ್ ಜುನೈದ್ ಜೋಡಿ ಪ್ರಥಮ ಬಹುಮಾನ ಪಡೆದರೆ, ಅತೀಖುರ್ ರೆಹಮಾನ್ ಮತ್ತು ನಂದನ್ ಜೋಡಿ ದ್ವಿತೀಯ ಸ್ಥಾನ ಪಡೆಯಿತು. ರವಿ ನಾಕಲಗೂಡು-ನಟರಾಜ್ ಜೋಡಿ ತೃತೀಯ ಸ್ಥಾನ ಪಡೆಯಿತು.
ಬಿ ವಿಭಾಗದಲ್ಲಿ ಮಂಜು ಬನವಾಸೆ-ನವೀನ್ ಆಲೂರು ಜೋಡಿ ಪ್ರಥಮ ಸ್ಥಾನ ಪಡೆದರೆ, ಗಿರೀಶ್ ದೇಶಾಣಿ-ಮೋಹನ್ ಕುಮಾರ್ ಜೋಡಿ ದ್ವಿತೀಯ ಮತ್ತು ಬ್ಯಾಕರವಳ್ಳಿ ವೆಂಕಟೇಶ್ -ಸಂದೀಪ್ ಜೋಡಿ ತೃತೀಯ ಸ್ಥಾನ ಪಡೆದುಕೊಂಡಿದೆ.
ಮಹಿಳೆಯರ ವಿಭಾಗದಲ್ಲಿ ಜನಮಿತ್ರ ಡಿಜಿಟಲ್ ವಿಭಾಗದ ಪುಷ್ಪಾ ಜೆ.ಎಂ. ಓಬಳಾಪುರ ಪ್ರಥಮ ಮತ್ತು ಪೂಜಾ ರಘು ದ್ವಿತೀಯ ಸ್ಥಾನ ಪಡೆದರು.
