ಬೆಂಗಳೂರು: ಚಿತ್ರರಂಗದ ದಿಗ್ಗಜ ನಟಿ ಬಿ. ಸರೋಜಾ ದೇವಿ ಅವರು ಇಂದು (ಜುಲೈ 14) ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಆರೋಗ್ಯ ಕ್ಷೀಣಿಸಿತ್ತು.
ಪತಿ ಹರ್ಷ ಅವರ ಸಮಾಧಿಯ ಪಕ್ಕದಲ್ಲೇ ಕೊಡಿಗೆಹಳ್ಳಿಯ ತೋಟದಲ್ಲಿ ಸರೋಜಾ ದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರು ಒಕ್ಕಲಿಗೆ ಸಂಪ್ರದಾಯದಂತೆ ಅಂತಿಮ ಸಂಸ್ಕಾರಗೊಳ್ಳಲಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.
ಬಿ. ಸರೋಜಾ ದೇವಿ 1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಬೈರಪ್ಪ ಅವರು ಪೊಲೀಸ್ ಅಧಿಕಾರಿಯಾಗಿದ್ದು, ತಾಯಿ ರುದ್ರಮ್ಮಾ ಗೃಹಿಣಿಯಾಗಿದ್ದರು. ಬಾಲ್ಯದಿಂದಲೇ ನೃತ್ಯದಲ್ಲಿ ಆಸಕ್ತಿ ತೋರ್ಪಡಿಸಿದ್ದ ಸರೋಜಾ ಅವರಿಗೆ ತಂದೆ ಪ್ರೋತ್ಸಾಹ ನೀಡಿದರು. ಇದೇ ನೃತ್ಯ ಕಲೆ ಚಿತ್ರರಂಗದ ಬಾಗಿಲು ತಟ್ಟುವಂತಾಯಿತು.
ಅವರು ಸುಮಾರು ಆರೂವರೆ ದಶಕಗಳ ಕಾಲ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಗುರುತಿನ ಓರೆಯ ನಟಿಯಾಗಿ ಬೆಳದಿದ್ದರು. ಪುನೀತ್ ರಾಜ್ಕುಮಾರ್ ಅವರ ‘ನಟಸಾರ್ವಭೌಮ’ (2019) ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ಕೊನೆಯ ಚಿತ್ರವಾಗಿತ್ತು.
1967ರಲ್ಲಿ ಹರ್ಷ ಅವರನ್ನು ವಿವಾಹವಾದ ಅವರು, 1986ರಲ್ಲಿ ಪತಿಯ ಅಗಲಿಕೆಯನ್ನು ಅನುಭವಿಸಿದ್ದರು. ಭಾರತೀಯ ಚಲನಚಿತ್ರ ಕ್ಷೇತ್ರದಲ್ಲಿ ಅಚ್ಚಳಿಯ ಸ್ಥಾನ ಹೊಂದಿದ ಬಿ. ಸರೋಜಾ ದೇವಿ ಅವರ ನಿಧನದಿಂದ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

[…] […]