ಜಗದೀಪ್ ಧನಕರ್ ಅವರು ಆರೋಗ್ಯ ಸಂಬಂಧಿ ಕಾರಣಗಳನ್ನು ನೀಡಿ ಭಾರತದ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ಉಪರಾಷ್ಟ್ರಪತಿಯ ಸ್ಥಾನ ಖಾಲಿಯಾಗಿದ್ದು, ಸದ್ಯದಲ್ಲೇ ಹೊಸ ಅಭ್ಯರ್ಥಿಯನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುವುದು. ಇದರ ಬೆನ್ನಲ್ಲೇ ರಾಷ್ಟ್ರದಾದ್ಯಂತ ಮುಂದಿನ ಉಪರಾಷ್ಟ್ರಪತಿ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ.
ಹಲವರ ಹೆಸರು ಈ ರೇಸ್ನಲ್ಲಿದ್ದು, ಒಬ್ಬ ಕನ್ನಡಿಗರು ಕೂಡ ಇದ್ದಾರೆ. ಹಲವರು ಕನ್ನಡಿಗನಿಗೆ ಉಪ ರಾಷ್ಟ್ರಪತಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದು ಯಾರು ಗೊತ್ತಾ?
ಕರ್ನಾಟಕ ಮೂಲದವರಾದ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಅವರು 2025ರ ಉಪರಾಷ್ಟ್ರಪತಿ ಸ್ಥಾನಕ್ಕೆ ಪ್ರಮುಖ ಅಭ್ಯರ್ಥಿಯಾಗಿ ಎಂದು ಹೇಳಲಾಗುತ್ತಿದೆ. ಅಬ್ದುಲ್ ನಝೀರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಭಾಗದವರು. ಇಲ್ಲಿಂದಲೇ ತಮ್ಮ ವಿದ್ಯಾಭ್ಯಾಸ ಮತ್ತು ವಕೀಲ ಹುದ್ದೆಯಲ್ಲಿ ಶುರು ಮಾಡಿದ್ದ ಅವರು ನಂತರ ಅವರು ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. 2023ರಿಂದ ಅವರು ಆಂಧ್ರಪ್ರದೇಶ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಉಪರಾಷ್ಟ್ರಪತಿ ಸ್ಥಾನಕ್ಕೆ ಅವರ ಹೆಸರು ಕೇಳಿಬರುತ್ತಿದೆ.
2017ರ ತ್ರಿವಳಿ ತಲಾಖ್ ಪ್ರಕರಣ ಮತ್ತು ಅಯೋಧ್ಯೆ ಭೂ ವಿವಾದ ಸಂಬಂಧಿ ನಿರ್ಣಯಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಜಗದೀಪ್ ಧನಕರ್ ಅವರ ರಾಜೀನಾಮೆಯ ನಂತರ, ಅಬ್ದುಲ್ ನಝೀರ್ ಅವರ ಹೆಸರು ಚಾಲ್ತಿಯಲ್ಲಿದೆ. ಒಂದು ವೇಳೆ ಇದೇ ಸತ್ಯವಾದರೆ ಕರ್ನಾಟಕ ಕೀರ್ತಿ ಮತ್ತೆ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಅಧಿಕೃತ ಅಭ್ಯರ್ಥಿ ಘೋಷಣೆ ಮತ್ತು ಚುನಾವಣೆ ಪ್ರಕ್ರಿಯೆಯ ನಂತರ ಅಂತಿಮ ಅಭ್ಯರ್ಥಿ ಯಾರು ಅನ್ನೋದು ತಿಳಿಯಲಿದೆ.
ರೇಸ್ನಲ್ಲಿ ಯಾರೆಲ್ಲ ಇದ್ದಾರೆ?
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೂಡ ಮುಂದಿನ ಉಪ ರಾಷ್ಟ್ರಪತಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ. ಅವರು ಮೋದಿ ಮತ್ತು ಅಮಿತ್ ಶಾ ಅವರ ಸಮೀಪದಲ್ಲಿದ್ದು, ಬಿಜೆಪಿ ಅಧ್ಯಕ್ಷತ್ವ ಅವಧಿ ಮುಕ್ತಾಯವಾಗುತ್ತಿರುವುದರಿಂದ ನಡ್ಡಾ ಅವರಿಗೆ ಈ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪರಾಷ್ಟ್ರಪತಿ ಚುನಾವಣೆ ರೇಸ್ನಲ್ಲಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರಿಗೂ ಈ ಹುದ್ದೆಗೇರುವ ಅವಕಾಶವಿದೆ ಸೋಷಿಯಲ್ ಮೀಡಿಯಾದಲ್ಲಿ ಹಲವರು ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರು. ತಮ್ಮ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ತಮ್ಮ ರಾಜೀನಾಮೆ ಕುರಿತು ಅವರು ರಾಷ್ಟ್ರಪತಿಗಳಿಗೆ ಪತ್ರದ ಮೂಲಕ ತಿಳಿಸಿದ್ದು, ಇದರ ಬೆನ್ನಲ್ಲೇ ಹೊಸ ಅಭ್ಯರ್ಥಿಗೆ ಈ ಸ್ಥಾನ ಒಲಿಯಲಿದೆ.

[…] […]