ರಾಯಚೂರು, ಜುಲೈ 23: “ಜವರಾಯ ಯಾವಾಗ ಎಲ್ಲಿ ಬರುವನು ಎಂಬುದು ಯಾರಿಗೂ ಗೊತ್ತಿಲ್ಲ” ಎಂಬಂತೆ, ರಾತ್ರಿ ಊಟ ಮಾಡಿ ಮಲಗಿ ಬೆಳಗಾಗುವಷ್ಟರಲ್ಲಿ ವಿಷಪೂರಿತ ಆಹಾರದ ಶಂಕಿತದಿಂದ ಮೂವರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಸಿರವಾರ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ, ಕುಟುಂಬದ ಆರು ಸದಸ್ಯರಲ್ಲಿ ಮೂವರು — ತಂದೆ 38 ವರ್ಷದ ರಮೇಶ್, ಮಕ್ಕಳು ನಾಗಮ್ಮ (8) ಮತ್ತು ದೀಪಾ (6) — ಮೃತಪಟ್ಟಿದ್ದಾರೆ. ಪತ್ನಿ ಪದ್ಮಾ ಹಾಗೂ ಇಬ್ಬರು ಮಕ್ಕಳಾದ ಕೃಷ್ಣ ಮತ್ತು ಚೈತ್ರಾ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ: ಕನ್ನಡಿಗ ಎಸ್ ಅಬ್ದುಲ್ ನಜೀರ್ ಗೆ ಹೊಲಿಯುತ್ತ ಉಪರಾಷ್ಟ್ರಪತಿ ಸ್ಥಾನ.? ರೇಸ್ನಲ್ಲಿ ಯಾರೆಲ್ಲ ಇದ್ದಾರೆ
ಕುಟುಂಬ ಜಮೀನಿನಲ್ಲಿ ಬೆಳೆದಿದ್ದ ಚವಳೆಕಾಯಿ ಪಲ್ಯ, ರೊಟ್ಟಿ, ಅನ್ನ ಮತ್ತು ಸಾಂಬಾರ್ ಸೇವಿಸಿದ್ದರು. ಸಂಬಂಧಿಕರ ಪ್ರಕಾರ, ಎರಡು ದಿನಗಳ ಹಿಂದಷ್ಟೆ ಚವಳೆಕಾಯಿಗೆ ಕ್ರಿಮಿನಾಶಕ ಸಿಂಪಡಿಸಲಾಗಿತ್ತು. ಅದೇ ತರಕಾರಿಯಿಂದ ಪಲ್ಯ ಮಾಡಿರುವ ಶಂಕೆ ಇದೆ.
ರಾತ್ರಿ ಎರಡು ಗಂಟೆ ವೇಳೆಗೆ ಎಲ್ಲರಿಗೂ ಹೊಟ್ಟೆನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದಾರೆ. ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಿದಾಗಲೇ ಪರಿಸ್ಥಿತಿ ಗಂಭೀರವಾಗಿತ್ತು. ದೀಪಾ ರಿಮ್ಸ್ಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಪ್ರಾಣಬಿಟ್ಟಳು.
ವೈದ್ಯರು ಕ್ರಿಮಿನಾಶಕದ ಅಂಶ ಆಹಾರದಲ್ಲಿ ಸೇರಿರುವ ಸಾಧ್ಯತೆ ಎಂದಿದ್ದು, ಪ್ರಯೋಗಾಲಯ ವರದಿ ಬಾಕಿಯಿದೆ.
