ಮಂಗಳೂರು, ಜುಲೈ 28: ನಿರಂತರ 170 ಗಂಟೆ ಭರತನಾಟ್ಯ (Bharatanatyam) ಪ್ರದರ್ಶಿಸುವ ಮೂಲಕ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ (Remona Pereira) ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿನಿ ರೆಮೋನಾ ಸಾಧನೆ ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (Golden Book of World Records) ಸೇರ್ಪಡೆಯಾಗಿದೆ.
ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್ನಲ್ಲಿ ರೆಮೋನಾ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಸತತ ಏಳು ದಿನಗಳ ಕಾಲ ರಾತ್ರಿ ಹಗಲೆನ್ನದೆ ದಿನವಿಡೀ ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ.
ಸತತ 127 ಗಂಟೆ ಭರತನಾಟ್ಯ ಪ್ರದರ್ಶನ ನೀಡಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದೀಗ 170 ಗಂಟೆ ಸತತ ಪ್ರದರ್ಶನ ನೀಡುವ ಮೂಲಕ ರೆಮೋನಾ ಪಿರೇರಾ ವಿಶ್ವಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.
ನಿರಂತರ ಭರತ ನಾಟ್ಯ: ಹೇಗೆ ಸಾಧ್ಯವಾಯ್ತು ರೆಮೋನಾ ಪಿರೇರಾ ಸಾಧನೆ?
ಕಳೆದ 13 ವರ್ಷಗಳಿಂದ ರೆಮೋನಾ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಭರತನಾಟ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ವಿಶ್ವದಾಖಲೆಗಾಗಿ ಹಲವು ವರ್ಷಗಳಿಂದ ಸಿದ್ಧತೆ ಮಾಡಿದ್ದಾರೆ. ಪ್ರತಿದಿನ 5 ರಿಂದ 6ಗಂಟೆ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ವಿದ್ಯೆಯ ಜೊತೆ ಭರತನಾಟ್ಯಕ್ಕೂ ಸಮಾನ ಪ್ರಾಶಸ್ತ್ಯ ನೀಡಿದ್ದಾರೆ.
