ಹಾಸನ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿನಿಂದಲೂ ಪಕ್ಷಕ್ಕಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರನ್ನು ಹಿಂದೆ ಪಕ್ಷಗಳು, ಸರ್ಕಾರಗಳು ನೇಮಿಸುವ ಮೂಲಕ ಪಕ್ಷ ಸಂಘಟನೆಗೆ ಮತ್ತು ನಗರದ ಅಭಿವೃದ್ಧಿಗೆ ಆಯಾ ಸರ್ಕಾರಗಳು ಒತ್ತು ನೀಡಿವೆ. ಹಾಗೆಯೇ ನಮ್ಮ ಸರ್ಕಾರ ಹಾಗೂ ಪಕ್ಷ ಸಹ ದುಡಿದವರಿಗೆ ಮಣೆ ಹಾಕಬೇಕು ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಕುಮಾರಶೆಟ್ಟಿ ಮನವಿ ಮಾಡಿದರು.
ಪ್ತರಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದಾಹರಣೆಗೆ ಸೈಯ್ಯದ್ ಅಕ್ಬರ್, ಬಿ.ಕೆ.ಮಂಜುನಾಥ, ಬಿ.ಕೆ.ರಂಗಸ್ವಾಮಿ, ಎಸ್.ಎಂ.ಆನಂದ್, ಕೆ.ಎಂ.ರಾಜೇಗೌಡ, ಕೃಷ್ಣಕುಮಾರ್, ಲಲಾಟ್ ಮೂರ್ತಿ ಮೊದಲಾದವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 2 ವರ್ಷ ಕಳೆದಿದ್ದರೂ, ಹುಡಾಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ನಮ್ಮ ಒತ್ತಾಯ ಎಂದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ತನು, ಮನ, ಧನ ಖರ್ಚು ಮಾಡಿ ಪಕ್ಷ ಸಂಘಟನೆ ಮಾಡಿದ ಹಲವು ಮುಖಂಡರಿದ್ದು, ಹಾಸನದಲ್ಲಿ ಒಕ್ಕಲಿಗರೇ ಪ್ರಾಬಲ್ಯರಾಗಿರುವುದರಿಂದ ಒಕ್ಕಲಿಗರನ್ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ಒತ್ತಾಯಿಸಿದರು.
ಒಕ್ಕಲಿಗ ಸಮುದಾಯಕ್ಕೆ ಅವಕಾಶ ನೀಡಲಾಗದಿದ್ದರೆ, ಇದೇ ಕ್ಷೇತ್ರದ ಹಿಂದುಳಿದ, ಅಲ್ಪ ಸಂಖ್ಯಾತ ಅಥವಾ ದಲಿತ ವರ್ಗದವರನ್ನು ಪರಿಗಣಿಸಿ, ಇದರಿಂದ ಪಕ್ಷ ಸಂಘಟನೆಗೆ ಅನುಕೂಲ ಆಗಲಿದೆ ಎಂದರು. ಒಂದು ವೇಳೆ ನಮ್ಮ ಒತ್ತಾಸೆ ಮೀರಿದರೆ ಪಕ್ಷದ ಕಾರ್ಯಕರ್ತರು ವಿಮುಖರಾಗುತ್ತಾರೆ, ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕರ್ತರಿಗೂ ಅನ್ಯಾಯ ಆಗಲಿದೆ. ಪಕ್ಷ ಸಂಘಟನೆಗೂ ಕಷ್ಟವಾಗುತ್ತದೆ ಎಂಬ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಅನ್ಯ ಕ್ಷೇತ್ರದವರಿಗೆ ಮಣೆ ಹಾಕಿದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಈ ವೇಳೆ ನೇತ್ರಾವತಿ, ರಾಮಚಂದ್ರು, ಶಂಕರ ಶೆಟ್ಟಿ, ರಾಜು ಇತರರು ಉಪಸ್ಥಿತರಿದ್ದರು.
