ಹಾಸನ, ಜುಲೈ 29 – ಪ್ರತಿಷ್ಠಿತ ಬಡಾವಣೆಯಾಗಿ ಪರಿಗಣಿಸಲಾದ ಎಸ್ಬಿಎಂ ಕಾಲೋನಿ, ಬಿ ಕಾಟಿಹಳ್ಳಿ ಬಳಿಯ ಉದ್ಯಾನವನವು ಮೂರು ವರ್ಷಗಳಾದರೂ ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ ಎಂಬ ಅಸಮಾಧಾನಕ್ಕೆ ಸ್ಥಳೀಯ ನಿವಾಸಿಗಳು ಧ್ವನಿ ನೀಡುತ್ತಿದ್ದಾರೆ.
ಈ ಉದ್ಯಾನವನದ ಕಾಮಗಾರಿ ಮಾಜಿ ಶಾಸಕರಾದ ಪ್ರೀತಮ್ ಜೆ ಗೌಡರ ಅವಧಿಯಲ್ಲಿ ಪೂರ್ಣಗೊಂಡಿದ್ದು, ಆಗಿನಿಂದಲೂ ಉದ್ಘಾಟನೆಯಿಲ್ಲದೆ ಬಿಟ್ಟಿರುವುದರ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ. ಉದ್ಯಾನವನದ ದ್ವಾರ ಮುರಿದಿರುವುದು, ದೀಪಗಳು ದಿನವೂ ಉರಿಯದಿರುವುದು, ಅವು ಮೂರು ವರ್ಷಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಕೊಳೆಯುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಉದ್ಘಾಟನೆ ಬೇಡ, ಸ್ವಚ್ಛತೆ ಬೇಕು” ಎಂಬ ನಿವಾಸಿಗಳ ಬೇಡಿಕೆ
“ಯಾರು ಉದ್ಘಾಟನೆ ಮಾಡೋದು ಅನಿವಾರ್ಯವಿಲ್ಲ. ನಮಗೆ ಬೇಕಾಗಿರುವುದು ಸ್ವಚ್ಛತೆ ಹಾಗೂ ಸಧ್ಯದಲ್ಲೇ ಉಪಯೋಗಕ್ಕೆ ಬರುವ ಕ್ರಮ,” ಎಂದು ಕೆಲ ನಿವಾಸಿಗಳು ಅಸಹನೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಆಟದ ಸ್ಥಳ, ವೃದ್ಧರ ವಿಶ್ರಾಂತಿ ಕುರ್ಚಿಗಳು, ಬೆಳಕು, ಶೌಚಾಲಯ ಎಲ್ಲವೂ ಇಲ್ಲದ ಪರಿಸ್ಥಿತಿಯಲ್ಲಿ ಈ ಉದ್ಯಾನವನ ‘ಹೆಸರಿಗೆ ಮಾತ್ರ’ ಉದ್ಯಾನವನವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಗರ ಪಾಲಿಕೆಗೆ ಹಲವಾರು ಮನವಿ ವ್ಯರ್ಥ
ಬಡಾವಣೆಯವರು ಈ ಕುರಿತಾಗಿ ಮಹಾನಗರ ಪಾಲಿಕೆಗೆ ಹಲವಾರು ಬಾರಿ ದೂರು ನೀಡಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಇಲ್ಲದೇ ಹೋಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ದೀಪಗಳು ಯಾವುದೇ ದಿನವೂ ಉರಿದಿಲ್ಲ; ಗೇಟು ಮುರಿದು ಬಿದ್ದಿದೆ; ದುರಸ್ತಿಗೆ ಕೈ ಹಾಕಿಲ್ಲ.

ಪ್ರತಿಭಟನೆಯ ಎಚ್ಚರಿಕೆ
ಸ್ಥಳೀಯ ನಿವಾಸಿಗಳು ಈ ಸಂಬಂಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ಇದು ಹಾಗೇ ಮುಂದುವರೆದರೆ, ನಾವು ಮಹಾನಗರ ಪಾಲಿಕೆ ಕಚೇರಿಯ ಮುಂದೆ ಸಮೂಹ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
