ಹಾಸನ, ಜುಲೈ 29 – ಹಾಸನ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ವಿರುದ್ಧ ಆದಾಯಕ್ಕೆ ಮೀರಿ ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆಯೇ ದಾಳಿ ನಡೆಸಿದ್ದಾರೆ.
ದಾಳಿ ಚನ್ನಪಟ್ಟಣದ ಹೌಸಿಂಗ್ ಬೋರ್ಡ್ನಲ್ಲಿ ಜಯಣ್ಣ ವಾಸಿಸುತ್ತಿರುವ ಮನೆ, ಪತ್ನಿಯ ನಿವಾಸ, ಹಾರ್ಡ್ವೇರ್ ಅಂಗಡಿ ಹಾಗೂ ಇನ್ನಿತರ ಎರಡು ಸ್ಥಳಗಳ ಮೇಲೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ಈ ಸಂದರ್ಭದಲ್ಲಿ ಜಯಣ್ಣ ಮತ್ತು ಅವರ ಕುಟುಂಬದ ಸದಸ್ಯರಿಂದ ಆಸ್ತಿ ದಾಖಲೆಗಳನ್ನು ಪರಿಶೀಲನೆ ಹಾಗೂ ಸರ್ವೆ ಮಾಡುತ್ತಿದ್ದಾರೆ.
ದಾಳಿಗೆ ಲೋಕಾಯುಕ್ತ ಎಸ್ಪಿ ಸ್ನೇಹ ನೇತೃತ್ವ ವಹಿಸಿದ್ದು, ಹಾಸನ ಡಿವೈಎಸ್ಪಿ, ಇನ್ಸ್ಪೆಕ್ಟರ್ಗಳು ಹಾಗೂ ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್ಪಿ ಮತ್ತು ಇನ್ಸ್ಪೆಕ್ಟರ್ಗಳ ತಂಡ ಕೂಡ ಇದರಲ್ಲಿ ಭಾಗವಹಿಸಿದೆ. ಪ್ರಾಥಮಿಕ ತನಿಖೆಯು ಜಯಣ್ಣ ಅವರ ಅಧಿಕೃತ ಆದಾಯಕ್ಕಿಂತ ಹೆಚ್ಚಿನ ಆಸ್ತಿಯ ಸುಳಿವನ್ನು ನೀಡಿರುವುದಾಗಿ ಮೂಲಗಳು ತಿಳಿಸಿವೆ.
ದಾಖಲೆ ಪರಿಶೀಲನೆ, ಬ್ಯಾಂಕ್ ಖಾತೆಗಳ ತಪಾಸಣೆ, ಆಸ್ತಿ ದಾಖಲೆಗಳ ಪರಿಶೀಲನೆ ಸೇರಿದಂತೆ ಐಟಿ ಹಾಗೂ ಭೂಮಿಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ದಾಖಲೆ ಆಧಾರದ ಮೇಲೆ ಮುಂದಿನ ಹಂತದ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
