ಚನ್ನರಾಯಪಟ್ಟಣ, ಜುಲೈ 29: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಗುಲಸಿಂದ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶ್ರೀ ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಜೂನ್ 6ರಿಂದ 48 ದಿನಗಳ ಕಾಲ ಮಂಡಲ ಪೂಜಾ ಮಹೋತ್ಸವದ ಅಂಗವಾಗಿ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿದವು.
ಅಖಿಲ ಭಾರತೀಯ ಸಂಗೀತ-ನೃತ್ಯ ಕಲಾವಿದರ ಒಕ್ಕೂಟದ (ಬೆಂಗಳೂರು) ನೇತೃತ್ವದಲ್ಲಿ ಹಾಗೂ ಮಂದಿರದ ಧರ್ಮದರ್ಶಿಗಳಾದ ಶ್ರೀ ರಾಧಾಕೃಷ್ಣರವರ ಮಾರ್ಗದರ್ಶನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಶ್ರೇಷ್ಠ ಕಲಾವಿದರು ಭಾಗವಹಿಸಿದರು. ವಿಶೇಷವಾಗಿ ಚೆನ್ನೈ, ಪುಣೆ, ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದ 270ಕ್ಕೂ ಹೆಚ್ಚು ಕಲಾವಿದರು ದಾಸವಾಣಿ, ಶಾಸ್ತ್ರೀಯ ಸಂಗೀತ, ನೃತ್ಯ ಇತ್ಯಾದಿ ಕಲಾಪ್ರದರ್ಶನಗಳನ್ನು ಸಲ್ಲಿಸಿದರು.
ಈ ಉತ್ಸವದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ ಡಾ. ಸ್ವಾತಿ ಪಿ ಭಾರದ್ವಾಜ್ ಅವರು ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿಯ ವೈಭವವನ್ನು ಜನತೆಗೆ ಪರಿಚಯಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರತಿದಿನವೂ ಕಲಾವಿದರಿಗೆ ವಿಶೇಷ ದರ್ಶನ, ಭೋಜನ ವ್ಯವಸ್ಥೆ, ಪ್ರಶಸ್ತಿ ಪತ್ರ, ಸ್ಮರಣಿಕೆ ಫಲಕ ಹಾಗೂ ಭಗವಂತನ ಪ್ರಸಾದ ನೀಡಲಾಯಿತು.
ಗ್ರಾಮದ ನಾಗರಿಕರು ಈ ಉತ್ಸವಕ್ಕೆ ಭಾರೀ ಪ್ರತಿಸ್ಪಂದನೆ ನೀಡಿದ್ದು, ಈವರೆಗಿನ ಹಾಸನ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ 48 ದಿನಗಳ ಕಾಲ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶ್ರೀ ರಾಘವೇಂದ್ರ ಸೇವೆಯಲ್ಲಿ ಇತಿಹಾಸ ನಿರ್ಮಿಸಲಾಗಿದೆ.
