ಹಾಸನ: ತಾಲೂಕಿನ ಚನ್ನಂಗಿಹಳ್ಳಿ ದಲಿತ ಮಹಿಳೆಯರು ಮತ್ತು ಯುವಕನ ಮೇಲೆ ಹಲ್ಲೆ ನಡೆಸಿ ಜಾತಿ ದೌರ್ಜನ್ಯ ಎಸಗಿರುವವರನ್ನು ಬಂಧಿಸಿ, ದಲಿತರ ಮೇಲೆ ಹಾಕಿರುವ ಸುಳ್ಳು ಕೇಸು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಹಾಗೂ ಡಿಸಿ ಅವರ ಅಧ್ಯಕ್ಷತೆಯಲ್ಲಿ ಜಿಪಂ ಸಂಭಾಂಗಣದಲ್ಲಿ ನಡೆಯುತ್ತಿದ್ದ ಎಸ್.ಸಿ/ಎಸ್ಟಿ ಕುಂದುಕೊರತೆ ಸಭೆ ಬಹಿಷ್ಕರಿಸಿ ಜಿಪಂ ಕಚೇರಿ ಮುಂಭಾಗ ದಲಿತ ಹಕ್ಕುಗಳ ಸಮಿತಿ-ಕರ್ನಾಟಕ (ಡಿಎಚ್ಎಸ್) ವತಿಯಿಂದ ಪ್ರತಿಭಟನೆ ನಡೆಸಿ ಡಿಸಿ-ಎಸ್ಪಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಡಿ.ಎಚ್.ಎಸ್ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ಚನ್ನಂಗಿಹಳ್ಳಿ ಗ್ರಾಮದ ಕಮಲಮ್ಮ ಮತ್ತು ಅವರ ತಂಗಿ ರಾಜಮ್ಮ ಎಂಬ ದಲಿತ ಮಹಿಳೆಯರ ಮೇಲೆ ಅಣ್ಣೆಗೌಡ (ಕರಿಯಣ್ಣ) ಮತ್ತು ಆತನ ಮಗ ಹರೀಶ್ ಹಲ್ಲೆ ಮಾಡಿದ್ದಾರೆ. ಚಿಕ್ಕಮ್ಮ ಎಂಬುವರ ಮೇಲೆ ಹಲ್ಲೆ ಮಾಡುವುದನ್ನು ಬಿಡಿಸಲು ಹೋದ ಕಿರಣ್ ಕುಮಾರ್ ಎಂಬ ದಲಿತ ಯುವಕನ ಮೇಲೂ ಹಲ್ಲೆ ನಡೆಸಿ ಜಾತಿ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿದರು.
ಈ ಬಗ್ಗೆ ಆಗಲೇ ಪೊಲೀಸರಿಗೂ ದೂರು ನೀಡಲಾಗಿದೆ. ಜು.24 ರಂದು ಅಣ್ಣೇಗೌಡ(ಕರಿಯಣ್ಣ) ಮತ್ತು ಹರೀಶ್ ಮೇಲೆ ಎಫ್ಐಆರ್ ದಾಖಲಾಗಿದೆ. ಆದರೆ ಹಲ್ಲೆ ದೌರ್ಜನ್ಯ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಬದಲು ಹಲ್ಲೆಗೊಳಗಾಗಿ ನೊಂದ ಮಹಿಳೆಯರು ಸೇರಿದಂತೆ 6 ದಲಿತರ ಮೇಲೆಯೇ ಸುಳ್ಳು ಕೇಸ್ ದಾಖಲಿಸಿರುವ ಪೊಲೀಸ್ ಇಲಾಖೆಯ ಕ್ರಮ ಖಂಡನೀಯ ಮತ್ತು ದಲಿತ ವಿರೋಧಿಯಾಗಿದೆ ಎಂದು ಕಿಡಿ ಕಾರಿದರು. ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳಲ್ಲಿ ಈ ರೀತಿಯ ಕೌಂಟರ್ ಕೇಸ್ ಮಾಡುವುದರಿಂದ ದೌರ್ಜನ್ಯ, ಅಪಮಾನ, ಅನ್ಯಾಯಕ್ಕೆ ಒಳಗಾದ ದಲಿತರಿಗೆ ಮಾಡುವ ದ್ರೋಹ ಹಾಗೂ ಅನ್ಯಾಯ ಎಸಗಿದಂತಾಗುತ್ತದೆ. ಈ ಬೆಳವಣಿಗೆಗಳಿಂದಾಗಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚನ್ನಂಗಿಹಳ್ಳಿ ದಲಿತರ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ತಪ್ಪಿತಸ್ಥ ಅಣ್ಣೆಗೌಡ, ಹರೀಶ್ ಎಂಬುವವರನ್ನು ಇದುವರೆಗೂ ಬಂಧಿಸದೇ ಇರುವುದು, ಅಲ್ಲದೆ ದೌರ್ಜನ್ಯಕ್ಕೊಳಗಾದ ದಲಿತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವುದು ಪೊಲೀಸ್ ಇಲಾಖೆ ಮತ್ತು ಕಾನೂನು ವ್ಯವಸ್ಥೆಯ ವೈಫಲ್ಯ ಎಂದು ಕಿಡಿ ಕಾರಿದರು. ಆದ್ದರಿಂದ ಈ ಪ್ರಕರಣದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದವರನ್ನು ಕೂಡಲೇ ಬಂಧಿಸಬೇಕು ಹಾಗೂ ನೊಂದ ದಲಿತರ ಮೇಲೆ ದಾಖಲಿಸಿರುವ ಸುಳ್ಳು ಮೊಕದ್ದಮೆ ರದ್ದುಗೊಳಿಸಲು ಕೂಡಲೇ ಕ್ರಮ ಕೈಗೊಂಡು ನೊಂದ ದಲಿತರಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ದಸಂಸ ಮುಖಂಡ ಮಂಜುನಾಥ್, ಚನ್ನಂಗಿಹಳ್ಳಿ ಚಿಕ್ಕಯ್ಯ, ಸ್ವಾಮಿ, ಶೇಖರ್, ರಾಜಮ್ಮ, ಕಿರಣಕುಮಾರ್ ಇತರರು ಭಾಗವಹಿಸಿದ್ದರು.
