ನವದೆಹಲಿ, ಆಗಸ್ಟ್ 04: “ನಿಜವಾದ ಭಾರತೀಯನಾದವನು ಈ ರೀತಿ ಮಾತನಾಡುವುದಿಲ್ಲ,” ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಟಿಪ್ಪಣಿ ಮಾಡಿದೆ. ಭಾರತ್ ಜೋಡೋ ಯಾತ್ರೆಯ ಸಂದರ್ಭ ಭಾರತೀಯ ಸೇನೆ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಪಟ್ಟ ಮಾನನಷ್ಟ ಮೊಕದ್ದಮೆ ವಿಚಾರವಾಗಿ ರಾಹುಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು ಈ ಹೇಳಿಕೆಯನ್ನು ನೀಡಿದ್ದಾರೆ.
ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ಎ.ಜಿ. ಮಸಿಹ್ ಅವರ ಪೀಠ, “ಚೀನಾ 2,000 ಕಿ.ಮೀ. ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ನಿಮಗೆ ಹೇಗೆ ಗೊತ್ತು? ನಿಜವಾದ ಭಾರತೀಯ ಇಂಥ ಹೇಳಿಕೆ ನೀಡುವುದಿಲ್ಲ,” ಎಂದು ಖಂಡಿಸಿದೆ.
ರಾಹುಲ್ ಪರವಾಗಿ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, “ವಿರೋಧ ಪಕ್ಷದ ನಾಯಕರು ಸಮಸ್ಯೆಗಳನ್ನು ಎತ್ತಿ ಹೇಳಲು ಸಾಧ್ಯವಾಗದಿದ್ದರೆ ಅದು ದುರದೃಷ್ಟಕರ,” ಎಂದು ಅಭಿಪ್ರಾಯಪಟ್ಟರು.
2022ರ ಡಿಸೆಂಬರ್ನಲ್ಲಿ ಭಾರತ-ಚೀನಾ ಗಡಿಘರ್ಷಣೆ ಕುರಿತು ರಾಹುಲ್ ನೀಡಿದ ಹೇಳಿಕೆ ಸೇನೆಯ ಮಾನಹಾನಿಗೆ ಕಾರಣವಾಯಿತೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆ ಹೇಳಿಕೆಯಲ್ಲಿ ಅವರು, “ಚೀನಾ 2,000 ಚದರ ಕಿ.ಮೀ. ಭೂಮಿಯನ್ನು ವಶಪಡಿಸಿಕೊಂಡಿದೆ, 20 ಸೈನಿಕರು ಹುತಾತ್ಮರಾಗಿದ್ದಾರೆ, ಮಾಧ್ಯಮಗಳು ಪ್ರಶ್ನೆ ಮಾಡುತ್ತಿಲ್ಲ,” ಎಂದು ಹೇಳಿದ್ದರು.
ಅಲಹಾಬಾದ್ ಹೈಕೋರ್ಟ್ ಈ ಮೊಕದ್ದಮೆಯನ್ನು ಮೇ 29ರಂದು ವಜಾಗೊಳಿಸಿದ್ದರೂ, ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ನೀಡಿದೆ. ಇದೀಗ ಕೆಳ ನ್ಯಾಯಾಲಯದ ಕಾರ್ಯವಿಧಾನಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಮುಂದಿನ ವಿಚಾರಣೆಯ ದಿನಾಂಕವನ್ನು 3 ವಾರಗಳ ನಂತರ ನಿಗದಿಪಡಿಸಲಾಗಿದೆ.
