ಸಕಲೇಶಪುರ, ಆಗಸ್ಟ್ 4: ಪ್ರಸಿದ್ಧ ನಕ್ಷತ್ರಾಕಾರ ಮಂಜರಾಬಾದ್ ಕೋಟೆಯ ಒಂದು ಭಾಗವು ತಡರಾತ್ರಿ ಉಂಟಾದ ಭಾರಿ ಮಳೆಯಿಂದಾಗಿ ಕುಸಿದುಬಿದ್ದಿದ್ದು, ಪ್ರವಾಸೋದ್ಯಮ ಮತ್ತು ಸಂರಕ್ಷಣಾ ದೃಷ್ಟಿಯಿಂದ ಆತಂಕ ಉಂಟಾಗಿದೆ. ಈ ಪ್ರದೇಶವು ಕೋಟೆಯ ಒಳಭಾಗದಲ್ಲಿದ್ದು, ಸೈನಿಕರು ವಿಶ್ರಾಂತಿ ಪಡೆಯುತ್ತಿದ್ದ ಸ್ಥಳವಾಗಿರಬಹುದೆಂದು ಹೇಳಲಾಗಿದೆ.
ಕಾವಲುಗಾರರು ಮುಂಜಾನೆ ಕರ್ತವ್ಯಕ್ಕೆ ಬಂದಾಗ ಈ ಕುಸಿತ ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಆಡಳಿತದಿಂದ ಪರಿಶೀಲನೆ ನಡೆಯುತ್ತಿದೆ.
ಹಾಸನ ಜಿಲ್ಲೆಯ ಸಕಲೇಶಪುರದಿಂದ 5 ಕಿ.ಮೀ. ದೂರದಲ್ಲಿ, ಎತ್ತರದ ಅಡಾಣಿ ಬೆಟ್ಟದ ಮೇಲೆ ಟಿಪ್ಪು ಸುಲ್ತಾನ್ 1785ರಲ್ಲಿ ನಿರ್ಮಾಣ ಆರಂಭಿಸಿ 1792ರಲ್ಲಿ ಪೂರ್ಣಗೊಳಿಸಿದ ಈ ಕೋಟೆ, ದಿನವೂ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 252 ಮೆಟ್ಟಿಲುಗಳನ್ನು ಏರಿ ಈ ಕೋಟೆಗೆ ಪ್ರವೇಶಿಸಬೇಕಾಗಿದ್ದು, ಸಮುದ್ರಮಟ್ಟದಿಂದ 988 ಮೀಟರ್ ಎತ್ತರದಲ್ಲಿದೆ.
1956ರಿಂದ ಪುರಾತತ್ವ ಇಲಾಖೆಯು ಈ ಕೋಟೆಯ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಈ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗುವ ಸಾಧ್ಯತೆ ಇದೆ.
