ಬೆಂಗಳೂರು, ಆಗಸ್ಟ್ 4: ಪರಿಶಿಷ್ಟ ಜಾತಿಯ 101 ಒಳಜಾತಿಗಳಿಗೆ ಮೀಸಲಾತಿ ಹಂಚಿಕೆ ಕುರಿತ ಸಮಗ್ರ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಈ ಅತೀ ಪ್ರಮುಖ ಘಟನೆಯಲ್ಲಿ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಯು ಉಪಸ್ಥಿತರಿದ್ದರು.
ಈ ಸಮೀಕ್ಷೆಗಾಗಿ 2025ರ ಮೇ 5ರಿಂದ ಜುಲೈ 6ರವರೆಗೆ ನಡೆಯಿತು. ಈ ಅವಧಿಯಲ್ಲಿ ರಾಜ್ಯದಾದ್ಯಂತ 27.24 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಕುಟುಂಬಗಳ ಮಾಹಿತಿ ಸಂಗ್ರಹಿಸಲಾಯಿತು. ಅಂದಾಜು 1.07 ಕೋಟಿ ಜನ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಸಂಪೂರ್ಣ ವರದಿ 1766 ಪುಟಗಳನ್ನು ಹೊಂದಿದ್ದು, ಆರು ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ.
ವರದಿಯು ಶೈಕ್ಷಣಿಕ, ಸಾಮಾಜಿಕ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಪ್ರದರ್ಶಿತ ಪ್ರತಿನಿಧನದ ಆಧಾರದ ಮೇಲೆ ಸುಪ್ರೀಂಕೋರ್ಟ್ನ ಮಾರ್ಗಸೂಚಿಗಳನ್ನು ಅನುಸರಿಸಿ ಒಳಜಾತಿಗಳ ವರ್ಗೀಕರಣ ಮಾಡಿದೆ. ಸಮೀಕ್ಷೆಯು 91% ಪ್ರಗತಿಯನ್ನು ದಾಖಲಿಸಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.51ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇ.111ರಷ್ಟು, ರಾಮನಗರದಲ್ಲಿ ಶೇ.86ರಷ್ಟು ಪ್ರಗತಿ ದಾಖಲಾಗಿದೆ.
ಈ ವರದಿಯನ್ನು ಯಾವುದೇ ತಕರಾರುಗಳಿಲ್ಲದೆ ಜಾರಿಗೆ ತರುವಂತೆ ಹಿಂದಿನ ಶನಿವಾರ ದಲಿತ ಸಚಿವರು ಹಾಗೂ ಶಾಸಕರ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ಆಯೋಗದ ಅಧ್ಯಕ್ಷರಾಗಿರುವ ನಾಗಮೋಹನ್ ದಾಸ್ ಅವರು ಈ ಕೆಲಸಕ್ಕಾಗಿ ಯಾವುದೇ ಸಂಭಾವನೆ ಸ್ವೀಕರಿಸಿಲ್ಲ ಎಂದು ತಿಳಿಸಲಾಗಿದೆ.
