ಬೆಂಗಳೂರು, ಆಗಸ್ಟ್ 4: ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಹೊರಡಿದ್ದು, ಪೌಷ್ಠಿಕ ಪುನಶ್ವೇತನ ಕೇಂದ್ರಗಳಲ್ಲಿ ದಾಖಲಾದ ಮಕ್ಕಳ ತಾಯಂದಿರು ಅಥವಾ ಪೋಷಕರಿಗೆ ದಿನಗೂಲಿ ನಷ್ಟ ಭತ್ಯೆ ನೀಡಲು ತೀರ್ಮಾನಿಸಲಾಗಿದೆ. ಈ ಕ್ರಮ 2025-26ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಯೋಜನೆಯಡಿಯಲ್ಲಿ ಅನುಷ್ಠಾನಗೊಳ್ಳಲಿದೆ.
ರಾಜ್ಯದಲ್ಲಿ ಈ ಯೋಜನೆ ಭಾರತ ಸರ್ಕಾರದ MGNREGA ಮಾರ್ಗಸೂಚಿಯನ್ವಯ ಜಾರಿಯಾಗುತ್ತಿದ್ದು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪೌಷ್ಠಿಕ ಪುನಶ್ವೇತನ ಕೇಂದ್ರಗಳಲ್ಲಿ (NRCs) ದಾಖಲಾಗುವ ಮಕ್ಕಳ ತಾಯಂದಿರಿಗೆ/ಪೋಷಕರಿಗೆ ನಿರ್ದಿಷ್ಟ ಹಣಕಾಸು ಸಹಾಯ ಒದಗಿಸಲಾಗುವುದು.
ಪೌಷ್ಠಿಕ ಪುನಶ್ವೇತನ ಕೇಂದ್ರಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಭಾಗವಾಗಿದ್ದು, ತೀವ್ರ ಅಪೌಷ್ಠಿಕತೆ (SAM) ಹೊಂದಿರುವ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ SD ಚಾರ್ಟ್ ಮಾನದಂಡಗಳ ಆಧಾರದ ಮೇಲೆ ದಾಖಲಿಸಲಾಗುತ್ತದೆ. ಇಲ್ಲಿ ಅವರಿಗೆ ವೈದ್ಯಕೀಯ ಹಾಗೂ ಪೌಷ್ಠಿಕ ಆರೈಕೆ ಒದಗಿಸಲಾಗುತ್ತದೆ.
ರಾಜ್ಯದ ಸೇವಾ ಸ್ಥಿತಿ:
- ಜಿಲ್ಲಾ ಮಟ್ಟದ NRCs: 33 (ರಾಷ್ಟ್ರೀಯ ಆರೋಗ್ಯ ಅಭಿಯಾನ ಅನುದಾನಿತ)
- ತಾಲ್ಲೂಕು ಮಟ್ಟದ NRCs: 86 (ರಾಜ್ಯ ಅನುದಾನಿತ)
- ಈ ಕೇಂದ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಿಂದ ಸೇವೆಗಳು ನೀಡಲಾಗುತ್ತಿವೆ.
ಭತ್ಯೆಗಳ ವಿವರ (ದಿನಕ್ಕೆ):
- ಔಷಧ ಚಿಕಿತ್ಸೆಗೆ ಪ್ರತಿ ಮಗುವಿಗೆ: ₹125
- ಆಹಾರಕ್ಕೆ ಪ್ರತಿ ಮಗುವಿಗೆ: ₹125
- ತಾಯಿ/ಪೋಷಕರ ಆಹಾರಕ್ಕಾಗಿ: ₹100
- ತಾಯಿ/ಪೋಷಕರ ದಿನಗೂಲಿ ನಷ್ಟ ಭತ್ಯೆ (MGNREGA ಪ್ರಕಾರ): ₹370
- NHM RoP ಪ್ರಕಾರ ಅನುಮೋದಿತ ವಿಶೇಷ ವೇತನ ಭತ್ಯೆ: ₹100
ಈ ಸೌಲಭ್ಯಗಳಿಂದ ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆಯಾಗಲಿದ್ದು, ಪೋಷಕರಿಗೆ ಆರ್ಥಿಕ ಭಾರದ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ. ಆರೋಗ್ಯ ಇಲಾಖೆಯು ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಕ್ರಮ ಕೈಗೊಂಡಿದೆ



