ಚಾಮರಾಜನಗರ:- ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಸಮುದಾಯ ಅಭಿವೃದ್ಧಿ ಸೇವಾ ಕೇಂದ್ರ (ಸಿ.ಡಿ.ಎಸ್)ದ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಹಂತ-04ರ ವೈಯಕ್ತಿಕ ಕಾರ್ಯಕ್ರಮಗಳಡಿ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ಮತ್ತು ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಮಹಿಳೆಯರ ಅಭಿವೃದ್ಧಿಗೆ ಬದ್ಧವಾಗಿದ್ದು, ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಗ್ಯಾರಂಟಿ ಯೋಜನೆಗಳು ಮಹಿಳೆಯರ ಪ್ರಗತಿಗೆ ಪೂರಕವಾಗಿವೆ. ಪೂರ್ಣ ಪ್ರಮಾಣದಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಫಲಾನುಭವಿಗಳು ಹೊಲಿಗೆ ತರಬೇತಿ ಪ್ರಮಾಣ ಪತ್ರ ಪಡೆದಿರಬೇಕು. ಯೋಜನೆಯ ಸದ್ಭಳಕೆಯಾಗಬೇಕು ಎಂದರು.

ಆಧುನಿಕ ಜಗತ್ತು ತಂತ್ರಜ್ಞಾನದಿಂದ ಕೂಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಕಂಪ್ಯೂಟರ್ ಪಾತ್ರ ಗಣನೀಯವಾಗಿದೆ. ಎಸ್.ಎಸ್.ಎಲ್.ಸಿಯಿಂದ ಉನ್ನತ ಮಟ್ಟದ ಶಿಕ್ಷಣದವರೆಗೂ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅವಶ್ಯವಾಗಿದೆ. ಇಂದು ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆರವಾಗಲು ಉಚಿತ ಲ್ಯಾಪ್ಟಾಪ್ಗಳನ್ನು ಸರ್ಕಾರದ ವತಿಯಿಂದ ವಿತರಿಸಲಾಗುತ್ತಿದೆ. ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರದ ಅರ್ಹ ವಿದ್ಯಾರ್ಥಿಗಳು ಸೌಲಭ್ಯ ಪಡೆದು ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದು ಶಾಸಕರು ಹೇಳಿದರು.
ರಾಜ್ಯದ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಹಂತ 4 ಯೋಜನೆಯು ಅನುಷ್ಠಾನಗೊಂಡಿದ್ದು, ಯೋಜನೆಯಡಿ ನಗರಸಭೆಗೆ 3400 ಲಕ್ಷಗಳ ಕ್ರಿಯಾಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಈ ಅನುದಾನದಲ್ಲಿ ಶೇ. 24.10ರಡಿ ಪರಿಶಿಷ್ಟ ಜಾತಿಗೆ 186 ಲಕ್ಷ ರೂ. ಗಳು, ಪರಿಶಿಷ್ಟ ಪಂಗಡಕ್ಕೆ 75, ಇತರೆ ಹಿಂದುಳಿದ ವರ್ಗಕ್ಕೆ 99, ವಿಶೇಷಚೇತನರಿಗೆ 85 ಲಕ್ಷ ರೂ. ಗಳಿಗೆ ಅನುಮೋದನೆ ಸಿಕ್ಕಿದೆ. ಪ್ರಾಥಮಿಕ ಹಂತದಲ್ಲಿ ಹೊಲಿಗೆ ಯಂತ್ರ ಮತ್ತು ಲ್ಯಾಪ್ಟಾಪ್ ಖರೀದಿಸಿ ವಿತರಿಸಲಾಗುತ್ತಿದೆ ಎಂದರು.
ನಗರಕ್ಕೆ ಕುಡಿಯುವ ನೀರಿಗಾಗಿ ಮಾಲಂಗಿ ನೀರಾವರಿ ಯೋಜನೆಗೆ 165 ಕೋಟಿ, ಯು.ಜಿ.ಡಿಗೆ 143 ಕೋಟಿ, ಕ್ರೀಡಾಂಗಣಕ್ಕೆ 15 ಕೋಟಿ, ಸಂತೆಮರಹಳ್ಳಿ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ನೂತನ ಬಸ್ ನಿಲ್ದಾಣಕ್ಕೆ 33 ಕೋಟಿ ರೂ.ಗಳು ಮುಂದಿನ ದಿನಗಳಲ್ಲಿ ಅನುಮೋದನೆ ಸಿಗುವ ಭರವಸೆ ಇದೆ. ನಗರದ ಯಡಬೆಟ್ಟದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಬಳಿಕ ನಿವೇಶನಗಳನ್ನು ಹಂಚಲಾಗುವುದು. ಪಟ್ಟಣದ ಹಲವು ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಒಟ್ಟಿನಲ್ಲಿ ನಗರದ ರಸ್ತೆಗಳು, ಒಳಚರಂಡಿ, ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷರಾದ ಸುರೇಶ್ ಅವರು ಮಾತನಾಡಿ ಫಲಾನುಭವಿಗಳ ಜೀವನ ಭದ್ರತೆಗಾಗಿ ಉಚಿತ ಹೊಲಿಗೆಯಂತ್ರ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಲ್ಯಾಪ್ಟಾಪ್ಗಳನ್ನು ವಿತರಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ಯೋಜನೆಯ ಸಫಲತೆ ಪಡೆದುಕೊಳ್ಳಬೇಕು ಎಂದರು.
ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭಾ ಉಪಾಧ್ಯಕ್ಷರಾದ ಮಮತಾ, ನಗರ ಸಭೆ ಯೋಜನಾಧಿಕಾರಿ ವೆಂಕಟ ನಾಯಕ, ಸದಸ್ಯರಾದ ಗಾಯತ್ರಿ, ಕುಮುದಾ, ಚಿನ್ನಮ್ಮ, ಸುಧಾ, ಬಸವಣ್ಣ, ನೀಲಮ್ಮ, ನಗರಸಭೆಯ ನಾಮನಿರ್ದೇಶಿತ ಸದಸ್ಯರಾದ ಶಾಂತಲಾ, ಸ್ವಾಮಿ, ಪೌರಾಯುಕ್ತ ರಾಮದಾಸ್, ಜಿಲ್ಲಾ ಮಟ್ಟದ ಯೋಜನಾಧಿಕಾರಿ ಅಲ್ತಾಫ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಇತರರು ಕಾರ್ಯಕ್ರಮದಲ್ಲಿ ಇದ್ದರು.
