ಬೆಂಗಳೂರು, ಆಗಸ್ಟ್ 5: ನಗರದ ವೈಟ್ಫೀಲ್ಡ್ ಬಳಿ ಇಮ್ಮಡಿಹಳ್ಳಿಯಲ್ಲಿ ಅಂತರರಾಷ್ಟ್ರೀಯ ದೂರವಾಣಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡುವ ಮೂಲಕ ಟೆಲಿಕಾಂ ಕಂಪನಿಗಳು ಹಾಗೂ ಸರ್ಕಾರವನ್ನು ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಕೇರಳ ಮೂಲದ ಮೊಹಮ್ಮದ್ ಸಫ್ಪಾಪ್ ಮತ್ತು ಫಯಾಜ್ ಎಂಬವರಾಗಿದ್ದು, ಅವರು ಇಮ್ಮಡಿಹಳ್ಳಿಯಲ್ಲಿರುವ ಒಂದು ಮನೆಗೆ ರಹಸ್ಯ ಟೆಲಿಫೋನ್ ಎಕ್ಸ್ಚೇಂಜ್ ಸ್ಥಾಪಿಸಿಕೊಂಡು, ವಿದೇಶದಲ್ಲಿ ಕೆಲಸ ಮಾಡುತ್ತಿರುವ ಬಡ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಕರೆ ಮಾಡುವ ಅವಕಾಶವಿದೆ ಎಂಬ ಸುಳ್ಳು ಭರವಸೆ ನೀಡುತ್ತಿದ್ದರು.
ಕಾರ್ಮಿಕರಿಂದ ಮಾಹಿತಿ ಸಂಗ್ರಹಿಸಿ ಅವರ ಹೆಸರಿನಲ್ಲಿ ಸಿಮ್ಕಾರ್ಡ್ಗಳು ಮತ್ತು ಅಗತ್ಯ ಉಪಕರಣಗಳನ್ನು ಖರೀದಿಸಿ ಸೆಟಪ್ ನಿರ್ಮಾಣ ಮಾಡಿ, ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದರು. ಇದರ ಮೂಲಕ ಟೆಲಿಕಾಂ ಕಂಪನಿಗಳು ಹಾಗೂ ಸರ್ಕಾರದ ಬೊಕ್ಕಸಕ್ಕೆ ಅತೀ ಹೆಚ್ಚಿನ ನಷ್ಟ ಉಂಟುಮಾಡಲಾಗಿತ್ತು.
ಪೊಲೀಸರ ದಾಳಿಯಲ್ಲಿ 702 ಸಿಮ್ಕಾರ್ಡ್, 9 ಸಿಮ್ಬಾಕ್ಸ್, 6 ರೌಟರ್, ಲ್ಯಾಪ್ಟಾಪ್ಗಳು ಹಾಗೂ ಮೊಬೈಲ್ಫೋನ್ಗಳು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ಹವಾಲಾ ಮೂಲಕ ತಿಂಗಳಿಗೆ 4-5 ಲಕ್ಷ ರೂ. ಆದಾಯ ಬರುತ್ತಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.
ಈ ಹಿಂದೆ ಇದೇ ರೀತಿಯ ಟೆಲಿಕಾಂ ವಂಚನೆ ಪ್ರಕರಣಗಳು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದರು. ಇದೀಗ ಮತ್ತೆ ಇದೇ ಮಾದರಿಯ ಪ್ರಕರಣ ಪುನರಾವೃತವಾಗಿದೆ.
