ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಮಂಗಳವಾರ ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾದರು.
ಅವರು ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ನವದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು ಎಂದು ತಿಳಿದು ಬಂದಿದೆ.ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ.
ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪಯಣ ಆರಂಭ
ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತ್ಯ ಪಾಲ್ ಮಲಿಕ್, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನು ಉತ್ತರ ಪ್ರದೇಶದ ಬಾಗ್ಪತ್ನ ಜಾಟ್ ನಾಯಕರಾಗಿ ಗುರುತಿಸಿಕೊಂಡಿದ್ದರು. ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ಅವರು, 1974 ರಲ್ಲಿ ಚೌಧರಿ ಚರಣ್ ಸಿಂಗ್ ಅವರ ಭಾರತೀಯ ಕ್ರಾಂತಿ ದಳದ ಶಾಸಕರಾಗಿ ಆಯ್ಕೆಯಾಗಿ, ನಂತರ ರಾಜ್ಯಸಭಾ ಸಂಸದರೂ ಸಹ ಆಗಿದ್ದಾರೆ. ಇದಲ್ಲದೇ, ಅಲಿಗಢದಿಂದ ಜನತಾದಳದ ಲೋಕಸಭಾ ಸಂಸದರಾಗಿ ಸೇವೆ ಸಲ್ಲಿಸಿದ ಅವರು ಕೆಲ ವರ್ಷಗಳ ಕಾಲ ಕಾಂಗ್ರೆಸ್ನಲ್ಲಿ ಹಾಗೂ ಲೋಕದಳ ಮತ್ತು ಸಮಾಜವಾದಿ ಪಕ್ಷದಲ್ಲಿ ಇದ್ದರು.
ಸತ್ಯಪಾಲ್ ಮಲ್ಲಿಕ್ ರಾಜಕೀಯ ಜೀವನ
ಮಲಿಕ್ ಅವರನ್ನು 2017 ರಲ್ಲಿ ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು ಮತ್ತು ನಂತರ ಒಡಿಶಾದ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನೀಡಲಾಗಿತ್ತು. ಆಗಸ್ಟ್ 2018 ರಲ್ಲಿ, ಅವರನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. 2019 ರಲ್ಲಿ ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದಾಗ ಶ್ರೀ ಮಲಿಕ್ ರಾಜ್ಯಪಾಲರಾಗಿದ್ದರು. 2018 ರಿಂದ 2019 ರವರೆಗೆ ಅವರು ಜಮ್ಮು ಕಾಶ್ಮೀರದ ಕೊನೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್ಪಿಎಫ್ ಸಿಬ್ಬಂದಿ ಸಾವನ್ನಪ್ಪಿದಾಗಲೂ ಅವರು ರಾಜ್ಯಪಾಲರಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ನಂತರ, ಗೋವಾ ಮತ್ತು ಮೇಘಾಲಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಇನ್ನು 2023 ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಅವರು ಅತ್ಯಂತ ಗಂಭೀರ ವಿಚಾರಗಳ ಬಗ್ಗೆ ಮಾತನಾಡಿದ್ದು, ಪುಲ್ವಾಮಾ ದಾಳಿಗೆ ಕಾರಣವಾದ ಲೋಪಗಳನ್ನು ಎತ್ತಿ ತೋರಿಸುತ್ತಾ ಕೇಂದ್ರ ಸರ್ಕಾರ ತನ್ನನ್ನು ಮೌನವಾಗಿರಲು ಮನವಿ ಮಾಡಿದೆ ಎಂದು ಆರೋಪ ಮಾಡಿದ್ದರು. ಸಿಆರ್ಪಿಎಫ್ ವಿಮಾನಗಳನ್ನ ಕೊಡುವ ಬಗ್ಗೆ ಮಾಡಿದ್ದ ಮನವಿಯನ್ನ ತಿರಸ್ಕರಿಸಲಾಗಿತ್ತು ಹಾಗೂ ರಸ್ತೆಯ ಮೂಲಕ ಹೋಗುತ್ತಿದ್ದ ಯೋಧರನ್ನ ಗುರಿಯಾಗಿಸಿಕೋಮಡು ದಾಳಿ ಮಾಡಲಾಗಿತ್ತು ಎಂದು ಅವರು ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ, ಬಿಜೆಪಿಯು ಸತ್ಯಪಾಲ್ ಮಲ್ಲಿಕ್ ಕೇಂದ್ರ ಸರ್ಕಾರವನ್ನ ಹೊಗಳುವ ವಿಡಿಯೋ ಶೇರ್ ಮಾಡಿಕೊಂಡು ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿತ್ತು.
ಕೇಂದ್ರ ಸರ್ಕಾರದ ಬಗ್ಗೆ ಮಲಿಕ್ ಅವರು ಮಾಡಿದ್ದ ಟೀಕೆ ಅವರನ್ನು ವಿರೋಧ ಪಕ್ಷಗಳಿಗೆ ಹತ್ತಿರ ಮಾಡಿಸಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2023 ರಲ್ಲಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಹ ಸತ್ಯಪಾಲ್ ಮಲ್ಲಿಕ್ ಅವರ ಆರೋಪವನ್ನ ಮತ್ತೆ ಮಾಡಿದ್ದರು.

[…] […]