ಗುಂಡ್ಲುಪೇಟೆ (ಚಾಮರಾಜನಗರ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ದಾಳಿಗೆ ಗುರಿಯಾದ ಆರ್. ಬಸವರಾಜ್ ಎಂಬ ವ್ಯಕ್ತಿಗೆ ಅರಣ್ಯ ಇಲಾಖೆ ಅಧಿಕಾರಿಗಳು ₹25,000 ದಂಡ ವಿಧಿಸಿ ತಪ್ಪೊಪ್ಪಿಗೆ ಪತ್ರ ಪಡೆದಿದ್ದಾರೆ.
ನಂಜನಗೂಡಿನ ನಿವಾಸಿ ಬಸವರಾಜ್ರನ್ನು ಸೋಮವಾರ ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸಿ, ತಿಳಿವಳಿಕೆ ಕೊರತೆಯಿಂದ ಈ ದುಸ್ಸಾಹಸ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ತಪ್ಪೊಪ್ಪಿಗೆ ವಿಡಿಯೋ:
ಬಸವರಾಜ್ ತನ್ನ ವಿಡಿಯೋ ಹೇಳಿಕೆಯಲ್ಲಿ, “ಬಂಡೀಪುರ ಬಂಕಾಪುರ ದೇವಸ್ಥಾನದಿಂದ ಮರಳುವಾಗ ಆನೆ ಕಂಡು ಮೋಜಿಗಾಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿ ಮಾಡಿತು. ಬದುಕಿರುವುದೇ ದೊಡ್ಡ ವಿಷಯ. ಯಾರೂ ಇಂತಹ ದುಸ್ಸಾಹಸ ಮಾಡಬಾರದು. ಅರಣ್ಯದೊಳಗೆ ಹಾದುಹೋಗುವ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಬೇಡಿ, ಶೌಚಕ್ಕೆ ಹೋಗಬೇಡಿ, ಪ್ರಾಣಿಗಳಿಗೆ ಆಹಾರ ನೀಡಬೇಡಿ” ಎಂದು ತಿಳಿಸಿದ್ದಾರೆ.
ಸಚಿವರ ಸೂಚನೆ:
ಅರಣ್ಯ ಸಚಿವ ಈಶ್ವರ ಖಂಡ್ರೆ, ಅರಣ್ಯದೊಳಗೆ ಹಾದುಹೋಗುವ ರಸ್ತೆಯಲ್ಲಿ ಗಸ್ತು ವಾಹನಗಳನ್ನು ನಿಯೋಜಿಸಿ, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವನ್ಯಜೀವಿಗಳಿಗೆ ಆಹಾರ ನೀಡುವುದು, ವಾಹನಗಳಿಂದ ಇಳಿಯುವುದು, ಅಜಾಗರೂಕ ಚಾಲನೆ ಮಾಡುವುದು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
